ಕನ್ನಡಪ್ರಭ ವಾರ್ತೆ ಚೇಳೂರು
ತಾಲೂಕಿನ ಗೋಟ್ಲಪಲ್ಲಿ ಗ್ರಾಮದ ಸಮೀಪದ ಮುಖ್ಯ ರಸ್ತೆಯ ಪಕ್ಕದಲ್ಲಿ ಕೆರೆಯ ಸುಮಾರು ನೂರು ಮೀಟರ್ ವರೆಗಿನ ರಸ್ತೆಗೆ ತಡೆಗೋಡೆ ಇಲ್ಲದೆ ಪ್ರಯಾಣಿಕರು ಜೀವ ಭಯದಿಂದಲೆ ಸಂಚರಿಸಬೇಕಾಗಿದೆ.ಚೇಳೂರು ನೂತನ ತಾಲೂಕಾಗಿ ಘೋಷಣೆ ಆಗಿದ್ದು ಇತ್ತೀಚಿಗೆ ತಾಲೂಕು ಕಚೇರಿ ಪ್ರಾರಂಭವಾಗಿದೆ. ತಹಸೀಲ್ದಾರ್ ಕೂಡ ನೇಮಕವಾಗಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ವಾಹನ ಸಂಚಾರ ಹಾಗೂ ರೈತರು,ಸಾರ್ವಜನಿಕರು ಕಚೇರಿ ಕೆಲಸಗಳಿಗಾಗಿ ಓಡಾಟ ಹೆಚ್ಚಾಗಲಿದೆ. ಈ ಮಾರ್ಗದಲ್ಲಿ ಸರ್ಕಾರಿ ಬಸ್ಸುಗಳು ಅಷ್ಟೊಂದು ಇಲ್ಲವಾಗಿದ್ದು ಮಾರ್ಗದಲ್ಲಿ ಖಾಸಗಿ ಬಸ್ಸುಗಳ ಸಂಚಾರ ಹೆಚ್ಚಾಗಿದೆ.ಕೆರೆ ಇರುವುದೇ ಗೊತ್ತಾಗೋಲ್ಲಇತ್ತಿಚಿನ ದಿನಗಳಲ್ಲಿ ಖಾಸಗಿ ಮತ್ತು ಸರ್ಕಾರಿ ಬಸ್ಸುಗಳ ಸಂಚಾರದಲ್ಲಿ ಪೈಪೋಟಿ ಏರ್ಪಟ್ಟಿದ್ದು ವೇಗ ಮಿತಿಗಳಿಲ್ಲದೆ ಬಸ್ಸುಗಳು ವೇಗವಾಗಿ ಸಂಚರಿಸುತ್ತಿರುವುದರಿಂದ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಬಾಗೇಪಲ್ಲಿ - ಚೇಳೂರು ಮುಖ್ಯ ರಸ್ತೆಯಲ್ಲಿ ಬರುವ ಗೋಟ್ಲಪಲ್ಲಿ ಗ್ರಾಮದ ಸಮೀಪ ಕೆರೆಯ ಸಮೀಪದ ರಸ್ತೆಯು ಇಳಿಜಾರಾಗಿದೆ ಹಾಗೂ ತಿರುವಿನಿಂದ ಕೂಡಿದೆ. ಇದರಿಂದ ವಾಹನ ಚಾಲಕರಿಗೆ ಸಮೀಪ ಬಂದ ಮೇಲೆ ಕೆರೆ ಇದೆ ಎಂದು ಗೊತ್ತಾಗುತ್ತದೆ. ವಾಹನ ಚಾಲಕರು ಸ್ವಲ್ಪ ಎಚ್ಚರ ತಪ್ಪಿದರೂ ಕೆರೆಗೆ ಬೀಳುವ ಅಪಾಯ ಎದುರಾಗಲಿದೆ ಎಂದು ಜನತೆ ದೂರಿದ್ದಾರೆ. ಕೆರೆಯ ಪಕ್ಕದ ರಸ್ತೆಯ ಬದಿಗೆ ತಡೆಗೋಡೆ ಮಾಡಿದರೆ ಮುಂದಿನ ದಿನಗಳಲ್ಲಿ ನಡೆಯಬಹುದಾದ ಅಪಘಾತ ತಪ್ಪಿಸಬಹುದು. ಜತೆಗೆ ಇಳಿಜಾರು ರಸ್ತೆಯಲ್ಲಿ ಕೆರೆ ಇರುವುದರ ಬಗ್ಗೆ ಮುನ್ನಚ್ಚರಿಕೆಯ ನಾಮಫಲಕ ಹಾಕಬೇಕು ಎಂದು ಒತ್ತಾಯಿಸಿದ್ದಾರೆ. ಕೋಟ್......ಕೆರೆ ಕಟ್ಟೆ ಅಗಲ ಮಾಡಿ ಕಟ್ಟೆಗೆ ತಡೆ ಗೋಡೆ ನಿರ್ಮಾಣದ ಅವಶ್ಯಕವಿದೆ, ಆದ್ದರಿಂದ ಹೆಚ್ಚಿನ ಅನುದಾನ ಬೇಕಾಗುತ್ತದೆ. ಚುನಾವಣೆ ಮುಗಿದ ನಂತರ ದಿನಗಳಲ್ಲಿ ಸರ್ಕಾರದ ಗಮನಕ್ಕೆ ತಂದು, ಅನುದಾನ ಬಂದ ಕೂಡಲೇ ಶಾಶ್ವತವಾಗಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುತ್ತೆವೆ.
- ಪ್ರದೀಪ್ ಎಇ, ಪಿಡಬ್ಲ್ಯೂಡಿ, ಬಾಗೇಪಲ್ಲಿ