ಆರೋಗ್ಯ ಭಾರತ ಎಲ್ಲರ ಕನಸಾಗಲಿ: ಶಶಿಧರ ನರೇಂದ್ರ

KannadaprabhaNewsNetwork |  
Published : Jun 22, 2025, 11:47 PM IST
ಹಾವೇರಿಯಲ್ಲಿ ಸಂಸ್ಕಾರ ಭಾರತಿ ಜಿಲ್ಲಾ ಘಟಕವನ್ನು ನಟರಾಜ ಮೂರ್ತಿಗೆ ಪುಷ್ಪನಮನ ಸಲ್ಲಿಸುವ ಮೂಲಕ ಸಂಸ್ಕಾರ ಭಾರತಿ ಕರ್ನಾಟಕ ಉತ್ತರ ಪ್ರಾಂತ ಪ್ರಧಾನ ಕಾರ್ಯದರ್ಶಿ ಶಶಿಧರ ನರೇಂದ್ರ ಉದ್ಘಾಟಿಸಿದರು. | Kannada Prabha

ಸಾರಾಂಶ

ನಮ್ಮ ಭಾಷೆ ಸಂಸ್ಕೃತಿ ಉಡುಪು ಆಹಾರದ ಮೇಲೆ ಹಲವು ರೀತಿಯ ಆಕ್ರಮಗಳು ನಡೆಯುತ್ತಿವೆ. ಆರೋಗ್ಯ ಭಾರತ ನಮ್ಮ ಕನಸಾಗಿದೆ.

ಹಾವೇರಿ: ಭಾರತೀಯ ಸಂಸ್ಕೃತಿಯ ಸತ್ಯ ಹಾಗೂ ಸತ್ವ ಅರಿತ ವಿದೇಶಿಗರು ಅದನ್ನು ಶ್ರದ್ಧೆಯಿಂದ ಅನುಸರಿಸುತ್ತಿರುವುದು ಒಂದೆಡೆಯಾದರೆ, ಭಾರತೀಯರು ಅರ್ಥಹೀನ ವಿದೇಶಿ ಸಂಸ್ಕೃತಿಗೆ ಮಾರು ಹೋಗುತ್ತಿರುವುದು ವಿಪರ್ಯಾಸದ ಸಂಗತಿ ಎಂದು ಸಂಸ್ಕಾರ ಭಾರತಿ ಕರ್ನಾಟಕ ಉತ್ತರ ಪ್ರಾಂತ ಪ್ರಧಾನ ಕಾರ್ಯದರ್ಶಿ ಶಶಿಧರ ನರೇಂದ್ರ ಬೇಸರ ವ್ಯಕ್ತಪಡಿಸಿದರು.ಇಲ್ಲಿನ ಮಾತಾಜಿ ಮಂಗಲ ಭವನದಲ್ಲಿ ಆಯೋಜಿಸಿದ್ದ ಸಂಸ್ಕಾರ ಭಾರತಿ ಜಿಲ್ಲಾ ಘಟಕ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಲಾ ಸಂಕಲ್ಪ ಕಾರ್ಯಕ್ರಮದಲ್ಲಿ ಮಾತನಾಡಿದರು. ನಮ್ಮ ಭಾಷೆ ಸಂಸ್ಕೃತಿ ಉಡುಪು ಆಹಾರದ ಮೇಲೆ ಹಲವು ರೀತಿಯ ಆಕ್ರಮಗಳು ನಡೆಯುತ್ತಿವೆ. ಆರೋಗ್ಯ ಭಾರತ ನಮ್ಮ ಕನಸಾಗಿದೆ. ಮನಸ್ಸು ಬುದ್ಧಿ ವಿವೇಕಗಳನ್ನು ಶುಚಿಯಾಗಿಟ್ಟುಕೊಳ್ಳುವ ಸಂಕಲ್ಪದೊಂದಿಗೆ ನಮ್ಮ ಅತ್ಯಂತ ವೈಜ್ಞಾನಿಕವಾದ ಸಂಸ್ಕೃತಿಯನ್ನು ಪರಿಪಾಲಿಸುವಲ್ಲಿ ಮತ್ತೆ ಎಚ್ಚೆತ್ತುಕೊಳ್ಳಬೇಕಾಗಿದೆ. ನಮ್ಮದು ದೈವತ್ವ ಸಂಬಂಧಿ ಜೀವನ ವಿಧಾನವಾಗಿದೆ. ಕಲೆಯ ಆಶಯವೂ ದೈವತ್ವದ ಸಾಕ್ಷಾತ್ಕಾರ. ಭಜನೆ ದೇವರಿಗೆ ಸಮರ್ಪಿಸುವ ಭಕ್ತಿ. ಪ್ರಕೃತಿಯನ್ನೂ ಪೂಜಿಸುವ ನಮ್ಮ ದೇಶದ ಸಂಸ್ಕೃತಿಯಲ್ಲಿ ಜೀವಿಗಳ ಪ್ರೀತಿಯೂ ಇದೆ. ಜಗತ್ತೇ ಬೆರಗಾಗುವ ಭಾರತೀಯ ಕಲೆ ಮತ್ತು ಸಂಸ್ಕೃತಿ ಜಡತ್ವದಿಂದ ಹೊರಬರುವ ಒಂದು ಶಕ್ತಿಯಾಗಿದೆ. ನಮ್ಮ ದೇಶದ ಆಧ್ಯಾತ್ಮಿಕ ಸತ್ವವನ್ನು ಕೊಲ್ಲುಲು ಬಿಡಬಾರದು. ಕಲೆಯ ಮೂಲಕ ನಮ್ಮ ಸಂಸ್ಕೃತಿಯ ಪ್ರಚಾರ ಪರಿಚಯಕ್ಕೆ ಮುಂದಾಗೋಣ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾಹಿತಿ ಪ್ರೊ. ಮಾರುತಿ ಶಿಡ್ಲಾಪೂರ, ಭಾರತೀಯ ಸಂಸ್ಕೃತಿ ವಿವಿಧತೆಯಲ್ಲಿಯೂ ಏಕತೆಯನ್ನು ಚಿರಸ್ಥಾಯಿಯಾಗಿಸಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಪರಕೀಯ ಪ್ರೇಮದ ಮೌಢ್ಯ ನಮ್ಮನ್ನು ಆಕ್ರಮಿಸುತ್ತಿದೆ. ಒಳ್ಳೆಯ ಆಚಾರ ವಿಚಾರಗಳೊಂದಿಗೆ ಬದುಕನ್ನು ಸುಂದರಗೊಳಿಸಿಕೊಳ್ಳುವ ಎಲ್ಲ ಸಂದೇಶಗಳು ನಮ್ಮ ಸಂಸ್ಕೃತಿಯಲ್ಲಿವೆ. ಆದರೆ ವಿದೇಶಿ ಸಂಸ್ಕೃತಿಯ ವಿಪರೀತ ಮೋಹ ಈಗ ಮನುಷ್ಯನ ಮನಸ್ಸು ಬುದ್ಧಿ ವಿವೇಕಗಳನ್ನೇ ದಿವಾಳಿ ಮಾಡುತ್ತಿದೆ. ನಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಹೊಣೆ ಪಾಲಕರು ಮತ್ತು ಈ ಸಮಾಜದ ಜವಾಬ್ದಾರಿ ಎಂದರು.ಸಂಸ್ಕಾರ ಭಾರತಿ ಉತ್ತರ ಪ್ರಾಂತ ಸಂಯೋಜಕ ಶ್ರೀನಿವಾಸ್, ರಾಜೇಂದ್ರ ರಿತ್ತಿ ಸಂಘದ ಜಿಲ್ಲಾ ಕಾರ್ಯವಾಹ ಯೋಗೇಂದ್ರ, ಅಶೋಕ ಯಣ್ಣಿಯವರ, ಮಮತಾ ನಾಡಿಗೇರ, ನಾಗರಾಜ ಪಾಟೀಲ, ಅಕ್ಷಯ ಜೋಶಿ, ವಿಕ್ರಮ ಮನ್ನಾರಿ, ಪ್ರಕಾಶ ಗಡಿಯಪ್ಪಗೌಡರ, ಶಂಕರ ತುಮ್ಮಣ್ಣನವರ, ಶಶಾಂಕ ಯಣ್ಣಿಯವರ, ರಾಮಕೃಷ್ಣ ಸುಗಂಧಿ ಇತರರು ಪಾಲ್ಗೊಂಡಿದ್ದರು.ಶಾರ್ವರಿ ನಾಟ್ಯ ಕಲಾ ತಂಡದ ಶ್ರೀರಕ್ಷಾ ಮತ್ತು ಗೌತಮಿ ಅವರಿಂದ ಭರತ ನಾಟ್ಯ, ಹಾನಗಲ್ಲಿನ ನರಸಿಂಹ ಕೋಮಾರ ಹಾಗೂ ಪ್ರತೀಕ್ಷಾ ಕೋಮಾರ ಅವರಿಂದ ಭಕ್ತಿ ಭಾವಗೀತ ಗಾಯನ ನಡೆಯಿತು. ರಾಜೇಶ್ವರಿ ದೀಕ್ಷಿತ್ ಸ್ವಾಗತಿಸಿದರು. ಶ್ರವಣ ಕುಲಕರ್ಣಿ ನಿರೂಪಿಸಿದರು. ರಾಜೇಂದ್ರ ರಿತ್ತಿ ವಂದಿಸಿದರು.

PREV

Recommended Stories

ಟಿಕೆಟ್ ಆಯ್ತು, ಮಲ್ಟಿಪ್ಲೆಕ್ಸ್‌ಗಳಲ್ಲಿ ತಿಂಡಿ ದರ ಇಳಿಸಿ : ಸಿನಿ ಪ್ರಿಯರು
ಮಂಗಳಮುಖಿಯರು, ಮಹಿಳೆಯರಿಗೆ ಸರ್ಕಾರದಿಂದಲೇ ಉಚಿತ ಆಟೋ