ರಾಜ್ಯದಲ್ಲಿ ತಕ್ಷಣ ಹೊಸದಾಗಿ ಜಾತಿಗಣತಿ ನಡೆಸಲಿ

KannadaprabhaNewsNetwork | Published : Nov 25, 2023 1:15 AM

ಸಾರಾಂಶ

ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಜಿ.ಶಿವಯೋಗಪ್ಪ ಆಗ್ರಹ । ಒಕ್ಕಲಿಗ ಸೇರಿ ಅನೇಕ ಸಮುದಾಯಗಳ ವಿರೋಧ

ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಜಿ.ಶಿವಯೋಗಪ್ಪ ಆಗ್ರಹ । ಒಕ್ಕಲಿಗ ಸೇರಿ ಅನೇಕ ಸಮುದಾಯಗಳ ವಿರೋಧ

ಕನ್ನಡಪ್ರಭ ವಾರ್ತೆ ದಾವಣಗೆರೆ

ಜಾತಿ ಗಣತಿಯಲ್ಲಿ ವೀರಶೈವ ಲಿಂಗಾಯತ ಸಮುದಾಯಕ್ಕೆ ತೀವ್ರ ಅನ್ಯಾಯವಾಗಿದ್ದು, ತಕ್ಷಣವೇ ಉತ್ತಮ ಆಯೋಗ ರಚಿಸಿ ರಾಜ್ಯದಲ್ಲಿ ಹೊಸದಾಗಿ ಜಾತಿಗಣತಿ ಕೈಗೊಳ್ಳಲು ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಜಿ.ಶಿವಯೋಗಪ್ಪ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂತರಾಜ ಸಮಿತಿ ಕೈಗೊಂಡ ಜಾತಿ ಗಣತಿ ಬಗ್ಗೆ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ಕೂಡ ಆಕ್ಷೇಪಿಸಿದ್ದಾರೆ. ಸಿದ್ದರಾಮಯ್ಯ ಹಿಂದೆ ಸಿಎಂ ಆಗಿದ್ದಾಗ ಎಚ್.ಕಾಂತರಾಜು ನೇತೃತ್ವದಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಜಾತಿ ಗಣತಿ ಸಮೀಕ್ಷೆ ದತ್ತಾಂಶ ಆಧರಿಸಿ, ಜಾತಿ ಗಣತಿ ವರದಿ ಸಿದ್ಧಪಡಿಸಲು ಸೂಚಿಸಿತ್ತು. ಹಿಂದಿನ 2 ಸರ್ಕಾರಗಳು ವರದಿ ಅಂಗೀಕರಿಸಲಿಲ್ಲ. ಈಗ ಮತ್ತೆ ಸಿಎಂ ಆಗಿರುವ ಸಿದ್ದರಾಮಯ್ಯ ವರದಿ ಅಂಗೀಕರಿಸುವುದಾಗಿ ಹೇಳಿಕೆ ನೀಡಿದ್ದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಸಿದ್ದರಾಮಯ್ಯ ಜಾತಿಗಣತಿ ಸಮೀಕ್ಷೆ ಅಂಗೀಕರಿಸಲು ತುದಿಗಾಲ ಮೇಲೆ ನಿಂತಂತಿದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ವರದಿಗೆ ವಿರೋಧಿಸಿದ್ದಾರೆ. ಒಕ್ಕಲಿಗ ಸಮಾಜವೂ ವರದಿಗೆ ವಿರೋಧ ವ್ಯಕ್ತಪಡಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಡೆದಂತೆ ಮಾಡಿದರೆ, ಉಪ ಮುಖ್ಯಮಂತ್ರಿ ಸತ್ತಂತೆ ಮಾಡುತ್ತಿರುವುದು ಸರಿಯಲ್ಲ ಎಂದು ತಿಳಿಸಿದರು.

ಜಾತಿ ಗಣತಿ ಸ್ವೀಕರಿಸುವುದಾಗಿ ಹೇಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿ ಜಾತಿಗಳ ಮಧ್ಯೆ ಒಡೆದು ಆಳುವ ನೀತಿ ಅನುಸರಿಸಲು ಮುಂದಾಗಿದ್ದಾರೆ. ಈ ಮೂಲಕ ಜಾತಿ ಜಾತಿಗಳಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ರಾಜಕೀಯ ಲಾಭ ಪಡೆಯಲು ತಮ್ಮ ಅಧಿಕಾರಾವಧಿಯಲ್ಲಿ ವರದಿ ಅಂಗೀಕರಿಸಲು ಮುಂದಾಗಿದ್ದು, ಸಮಸ್ತ ವೀರಶೈವ ಲಿಂಗಾಯತ ಸಮುದಾಯದ ಸಚಿವರು, ಶಾಸಕರು, ರಾಜಕೀಯ ನಾಯಕರು ಪಕ್ಷಾತೀತವಾಗಿ ಅದನ್ನು ವಿರೋಧಿಸಬೇಕು ಎಂದು ಆಗ್ರಹಿಸಿದರು.

ಕಾಂತರಾಜು ಸಮಿತಿ ರಾಜ್ಯಾದ್ಯಂತ ಮನೆ ಮನೆಗಳಿಗೆ ಹೋಗಿ, ಪೂರ್ಣ ಮಾಹಿತಿಯನ್ನೇ ಪಡೆದಿಲ್ಲ. ಈ ವರದಿಯಲ್ಲಿ ವೀರಶೈವ ಲಿಂಗಾಯತ ಸಮಾಜದ ಕೋಡ್‌ ಕೂಡ ಇಲ್ಲ. ನಮ್ಮ ಸಮುದಾಯವನ್ನು ಜಾತಿ, ಕೆಲವು ಉಪ ಜಾತಿಗಳಾಗಿ ಸೇರಿಸಿ, ಬರೆದುಕೊಂಡಿರುವ ಬಗ್ಗೆ ತಿಳಿದು ಬಂದಿದೆ. ಸ್ವತಃ ಅಭಾವೀಮ ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ಕಾಂತರಾಜ ಸಮಿತಿ ಎಲ್ಲೋ ಕುಳಿತು, ವರದಿ ಸಿದ್ಧಪಿಡಿಸಿದೆ ಎಂದು ಹೇಳಿದ್ದು, ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸಮಾಜ ಒಡೆದು ಆಳುವ ನೀತಿ:

ವೀರಶೈವ ಲಿಂಗಾಯತ ಜಾತಿ ಎಂಬುದಾಗಿ ಬರೆದುಕೊಳ್ಳದೇ, ಹಿಂದುಗಳು ಮತ್ತು ಉಪ ಜಾತಿಗಳನ್ನು ಬರೆದುಕೊಂಡಿರುವುದು ಸಮಾಜದ ಒಗ್ಗಟ್ಟು ಮುರಿದು, ಸಮಾಜ ಒಡೆದು ಆಳುವ ನೀತಿಯಾಗಿದೆ. ಮೂಲಪ್ರತಿ ಇಲ್ಲದೇ ಮತ್ತು ಕಾರ್ಯದರ್ಶಿಗಳು, ಮುಖ್ಯಸ್ಥರ ಸಹಿ ಮಾಡದಿರುವ ಇಂತಹ ಜಾತಿಗಣತಿಯನ್ನು ನಾವು ಸಂಪೂರ್ಣ‍ವಾಗಿ ವಿರೋಧಿಸುತ್ತೇವೆ. ನಮ್ಮ ಸಮಾಜ ಯಾವಾಗಲೂ ಇವನಾರವ ಇವನಾರವ ಎನ್ನದೇ, ಎಲ್ಲರೂ ನಮ್ಮವರೆಂದು ಬಸವ ತತ್ವದಲ್ಲೇ ನಡೆದುಕೊಂಡು ಬಂದ ಸಮಾಜ. ಮುಂದೆಯೂ ಹಾಗೇ ಇರಲಿದೆ ಎಂದು ಹೇಳಿದರು.

ಜಾತಿ ಗಣತಿ ವಿಚಾರದಲ್ಲಿ ಅಭಾವೀಮ ರಾಷ್ಟ್ರೀಯ ಅಧ್ಯಕ್ಷರು, ರಾಜ್ಯ ಸಮಿತಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದು, ಮತ್ತೊಮ್ಮೆ ಹೊಸದಾಗಿ ಸಮೀಕ್ಷೆ ಕೈಗೊಳ್ಳಬೇಕೆಂಬುದು ನಮ್ಮ ಬೇಡಿಕೆ ಎಂದು ಜಿ.ಶಿವಯೋಗಪ್ಪ ಸ್ಪಷ್ಟಪಡಿಸಿದರು.

ಮಹಾಸಭಾ ತಾಲೂಕು ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಕಟ್ಟಿಮನಿ, ಉಪಾಧ್ಯಕ್ಷ ಶಿವಮೂರ್ತಿ, ಕಾಯಿಪೇಟೆ ಹಾಲೇಶ ಇತರರಿದ್ದರು.

ವೀರಶೈವ ಲಿಂಗಾಯತರು ಜಾತಿವಾದಿಗಳಲ್ಲ. ಯಾವುದೇ ಜಾತಿ, ಧರ್ಮ, ಉಪ ಪಂಗಡಗಳ ವಿರೋಧಿಗಳೂ ಅಲ್ಲ. ಎಚ್‌.ಕಾಂತರಾಜು ಸಮಿತಿಯು ರಾಜ್ಯಾದ್ಯಂತ ಮನೆ ಮನೆಗೆ ಹೋಗಿ ಮಾಹಿತಿ ಪಡೆದು, ವರದಿ ಸಿದ್ಧಪಡಿಸಿಲ್ಲ. ಹಾಗಾಗಿ ರಾಜ್ಯದಲ್ಲಿ ಹೊಸದಾಗಿ ಜಾತಿ ಗಣತಿ ಕೈಗೊಳ್ಳಬೇಕು. ನಮ್ಮ ಪ್ರಕಾರ ರಾಜ್ಯದಲ್ಲಿ ಸುಮಾರು 2 ಕೋಟಿಗೂ ಅಧಿಕ ವೀರಶೈವ ಲಿಂಗಾಯತರಿದ್ದೇವೆಂಬ ಮಾಹಿತಿ ಇದೆ. ಜಿ.ಶಿವಯೋಗಪ್ಪ, ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ............

Share this article