ಶಿರಹಟ್ಟಿ:
ನಂಬಿ ಕರೆದರೆ ಓ ಎನ್ನುವ ಬಸವ, ನಮ್ಮೆಲ್ಲರ ಹೃದಯಲ್ಲಿ ನೆಲೆಗೊಳ್ಳಬೇಕು. ಇದು ಬಸವ ಪರಂಪರೆಗೆ ಎಡೆಮಾಡಿಕೊಡಬಲ್ಲದಾಗಿದೆ. ಸಮಪಾಲು ಸಮಬಾಳು ಕಲಿಸಿದಾತ ಬಸವಣ್ಣ. ಪ್ರಾಣಿಗಳಲ್ಲಿ ದಯೆ ತೋರಿಸಿ ದಯವೇ ಧರ್ಮದ ಮೂಲ ಎಂದವರು ಎಂದು ತಹಸೀಲ್ದಾರ್ ಅನಿಲ ಬಡಿಗೇರ ಹೇಳಿದರು. ಬುಧವಾರ ತಹಸೀಲ್ದಾರ್ ಕಾರ್ಯಾಲಯದಲ್ಲಿ ಬಸವ ಜಯಂತಿ ನಿಮಿತ್ತ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಬಸವಣ್ಣನವರ ವಚನಗಳನ್ನು ಓದುವುದರಿಂದ ನಮ್ಮಲ್ಲಿ ಜ್ಞಾನವೃದ್ಧಿಯಾಗುತ್ತದೆ. ಕಳಬೇಡ ಕೊಲಬೇಡ ಎಂಬ ಅತ್ಯಂತ ಸರಳವಾದ ವಚನ ಜೀವನದಲ್ಲಿ ಅಳವಡಿಸಿಕೊಂಡು ಸಂತೃಪ್ತಿ ಬದುಕು ಸಾಗಿಸಲು ಕರೆ ನೀಡಿದರು.ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ ಎಂಬ ತತ್ವ, ಸಿದ್ಧಾಂತ ಅನುಷ್ಠಾನಕ್ಕೆ ತಂದವರು ಬಸವಣ್ಣನವರು. ಬಸವ ಯುಗದ ಉತ್ಸಾಹ. ಇಂಥ ಧರ್ಮಗುರುವಿನ ಬದುಕು ನಮಗೆಲ್ಲರಿಗೆ ಆದರ್ಶವಾಗಲಿ. ಛಲವಂತಿಕೆಯ ಬದುಕು ನಮ್ಮದಾಗಬೇಕು. ಬಸವಣ್ಣನವರು ಜಾತಿಯ ಪೆಡಂಭೂತ ಬೇರುಸಹಿತ ಕಿತ್ತೆಸೆದು ಸಮಾನತೆಯ ತಳಹದಿಯ ಮೇಲೆ ಸಮಾಜ ಕಟ್ಟಿ ಬೆಳೆಸಿದವರು ಎಂದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎ. ಬಳಿಗೇರ ಮಾತನಾಡಿ, ಬಸವಣ್ಣನವರು ವರ್ಣರಹಿತ, ವರ್ಗರಹಿತ, ಲಿಂಗಭೇದರಹಿತ ಸಮಾಜ ನಿರ್ಮಾಣಕ್ಕಾಗಿ ಪ್ರಯತ್ನಿಸಿದರು. ಕೇವಲ ಆಚಾರ-ವಿಚಾರಗಳಲ್ಲಿ ಪ್ರಾಮಾಣಿಕರಾಗಿರದೇ ದಿನನಿತ್ಯದ ಕೆಲಸಗಳಲ್ಲಿ ಪ್ರಾಮಾಣಿಕರಾಗಿರಬೇಕು. ದುಡಿಮೆ ಶಿವಪೂಜೆಗೆ ಸಮಾನ ಎಂದ ಬಸವಣ್ಣನವರು ತನ್ನ ತಾನರಿಯದೊಡೆ ಅದೆ ದೇವರು ಎಂದು ಸಾರಿದರು ಎಂದರು.ಹನ್ನೆರಡನೆಯ ಶತಮಾನದಲ್ಲಿ ನಡೆದಿದ್ದ ಕಲ್ಯಾಣ ಕ್ರಾಂತಿ ವಿಶ್ವದಲ್ಲೇ ವಿನೂತನವಾದದ್ದು. ಮನುಷ್ಯನ ಅಂತರಂಗ ಬಹಿರಂಗ ಒಂದಾಗಿರಬೇಕು. ಜೀವನ ಸಹಜ, ಸರಳ ಆಗಿರಬೇಕು. ಆಡಂಬರದ ಜೀವನದಿಂದ ಸಂಕಷ್ಟಗಳೇ ಹೆಚ್ಚು ಎಂಬು ಸಾರಿದರು. ರಾಜತಾಂತ್ರಿಕ ವ್ಯವಸ್ಥೆಯಲ್ಲಿ ಪ್ರಜಾಪ್ರಭುತ್ವದ ಆಶಯಗಳನ್ನು ಸಾಕಾರಗೊಳಿಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ. ಸಮಾನತೆ, ಕಾಯಕ, ದಾಸೋಹದ ಪರಿಕಲ್ಪನೆಗಳ ಮೂಲಕ ಸದೃಢ ಸಮಾಜದ ಕನಸನ್ನು ಬಿತ್ತಿದವರು ಎಂದು ಹೇಳಿದರು.
ಜಿಪಂ ಮಾಜಿ ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ, ಪಪಂ ಮಾಜಿ ಅಧ್ಯಕ್ಷ ಹುಮಾಯೂನ್ ಮಾಗಡಿ, ನಾಗರಾಜ ಲಕ್ಕುಂಡಿ, ಸಂದೀಪ ಕಪ್ಪತ್ತನವರ, ಸಂತೋಷ ಕುರಿ, ಬಸವರಾಜ ತುಳಿ, ಎಂ.ಕೆ. ಲಮಾಣಿ, ಅಜ್ಜು ಪಾಟೀಲ, ವಿನೋದ ಪಾಟೀಲ ಇದ್ದರು.