ಬಿಜೆಪಿ, ಜೆಡಿಎಸ್‌ ಭಿನ್ನಮತ ಬಿಟ್ಟು ಗೆಲ್ಲೋಣ

KannadaprabhaNewsNetwork | Updated : Mar 17 2024, 02:35 PM IST

ಸಾರಾಂಶ

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಒಟ್ಟಾಗಿದ್ದ ಜೆಡಿಎಸ್- ಬಿಜೆಪಿ ನಾಯಕರು ಯೋಗ ಎಂಬಂತೆ ಮತ್ತೆ ನರೇಂದ್ರ ಮೋದಿ ಪ್ರಧಾನಿಯಾಗಲು ಒಟ್ಟಾಗಿದ್ದು, ಇದಕ್ಕೆ ಜೆಡಿಎಸ್ ಭೀಷ್ಮಾಚಾರ್ಯ ಎಚ್.ಡಿ. ದೇವೇಗೌಡರು ಶಕ್ತಿ ತುಂಬಿದ್ದಾರೆ. 

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಒಟ್ಟಾಗಿದ್ದ ಜೆಡಿಎಸ್- ಬಿಜೆಪಿ ನಾಯಕರು ಯೋಗ ಎಂಬಂತೆ ಮತ್ತೆ ನರೇಂದ್ರ ಮೋದಿ ಪ್ರಧಾನಿಯಾಗಲು ಒಟ್ಟಾಗಿದ್ದು, ಇದಕ್ಕೆ ಜೆಡಿಎಸ್ ಭೀಷ್ಮಾಚಾರ್ಯ ಎಚ್.ಡಿ. ದೇವೇಗೌಡರು ಶಕ್ತಿ ತುಂಬಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ನಗರದ ಜಿಲ್ಲಾ ಜೆಡಿಎಸ್‌ ಕಚೇರಿಗೆ ಶನಿವಾರ ಭೇಟಿ ನೀಡಿದ ಅವರು, ಮಾ.18ರಂದು ನಗರದಲ್ಲಿ ನಡೆಯುವ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲ ಜೆಡಿಎಸ್ ಕಾರ್ಯಕರ್ತರು ಆಗಮಿಸುವಂತೆ ಆಹ್ವಾನ ನೀಡಿದರು.

ಕಾಂಗ್ರೆಸ್ಸೇತರ ಪಕ್ಷಗಳು ಒಟ್ಟಾಗಿ ಹೋರಾಡುವ ಕಾಲ ಬಂದಿದೆ. ಶಿಕಾರಿಪುರದ ನಗರಸಭೆ ಅಧ್ಯಕ್ಷರಾಗಿದ್ದಾಗ ಬಿ.ಎಸ್. ಯಡಿಯೂರಪ್ಪ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಆಗ ದೇವೇಗೌಡರು ಆಸ್ಪತ್ರೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿದ್ದರು. ಅದೇ ರೀತಿ ಯಡಿಯೂರಪ್ಪನವರು ಕೂಡ ವಿಧಾನಸಭೆಯಲ್ಲಿ ರೈತರ ಪರವಾದ ಅನೇಕ ಕಾರ್ಯಕ್ರಮಗಳಲ್ಲಿ ದೇವೇಗೌಡರೇ ನನಗೆ ಸ್ಫೂರ್ತಿ ತುಂಬಿದವರು ಎಂದು ಹೇಳಿದ್ದರು. ಬಿ.ಎಸ್. ಯಡಿಯೂರಪ್ಪ ಮತ್ತು ದೇವೇಗೌಡರ ಅನೇಕ ವಿಚಾರಗಳಲ್ಲಿ ಸಾಮ್ಯತೆ ಇದೆ. ಲೋಕಸಭಾ ಚುನಾವಣೆಯಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಏನೇ ಬರಲಿ, ಒಟ್ಟಾಗಿ ಮುಂದೆ ಸಾಗಬೇಕಿದೆ ಎಂದರು.

ಜೆಡಿಎಸ್ ವಕ್ತಾರ ಕೆ.ಬಿ. ಪ್ರಸನ್ನಕುಮಾರ್ ಮಾತನಾಡಿ, ಕಳೆದ ಬಾರಿಗಿಂತ ಈ ಬಾರಿ ಸಂಸದ ರಾಘವೇಂದ್ರ ಅವರನ್ನು ಕನಿಷ್ಠ 3 ಲಕ್ಷಕ್ಕೂ ಹೆಚ್ಚು ಅಂತರದಿಂದ ಗೆಲ್ಲಿಸುವಲ್ಲಿ ಬಿಜೆಪಿ-ಜೆಡಿಎಸ್ ಒಟ್ಟಾಗಿ ಕಾರ್ಯನಿರ್ವಹಿಸಬೇಕಿದೆ ಎಂದರು.

ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಕಾಂಗ್ರೆಸ್ ಹೊರಗಿಡಲು ನಾವೆಲ್ಲ ಹಾಲು- ಸಕ್ಕರೆಯ ರೀತಿಯಲ್ಲಿ ಒಟ್ಟಾಗಿ ಸೇರಿದಂತೆ ಆಗಿದೆ. ಸಂಸದ ಬಿ.ವೈ.ರಾಘವೇಂದ್ರ ಅವರ ಅಭಿವೃದ್ಧಿ ಕಾರ್ಯಗಳು ನಮ್ಮ ಕಣ್ಣುಂದೆ ಇದೆ. ಹೆಮ್ಮೆಯಿಂದ ಕಾರ್ಯಕರ್ತರು ಮನೆಮನೆ ತೆರಳಿ ಮತ ಕೇಳಬಹುದು. ಒಂದೇ ಕುಟುಂಬದ ರೀತಿಯಲ್ಲಿ ಕೆಲಸ ಮಾಡಬೇಕಿದೆ ಎಂದು ಕರೆ ನೀಡಿದರು.

ವಿಧಾನ ಪರಿಷತ್ತು ಮಾಜಿ ಸದಸ್ಯ ಭಾನುಪ್ರಕಾಶ್ ಮಾತನಾಡಿ, ಕಾಂಗ್ರೆಸ್ ಸಂಸ್ಕೃತಿ ಈ ದೇಶಕ್ಕೆ ಹೊಂದುವುದಿಲ್ಲ. ಕಾಂಗ್ರೆಸ್‍ನ್ನು ಬೇರು ಸಮೇತ ಕಿತ್ತು ಹಾಕಬೇಕು ಎಂಬ ಒಂದೇ ಉದ್ದೇಶದಿಂದ ದೇವೇಗೌಡರು ಮೋದಿ ಅವರ ಜೊತೆಗೆ ಚರ್ಚಿಸಿ ಎನ್‍ಡಿಎಗೆ ಬೆಂಬಲ ಘೋಷಿಸಿದ್ದಾರೆ. ಕಾಂಗ್ರೆಸ್‍ನ್ನು ಈ ದೇಶದಿಂದ ಕಿತ್ತು ಹಾಕದಿದ್ದರೆ ದೇಶಕ್ಕೆ ಅಪಾಯವಿದೆ. 28 ಕ್ಷೇತ್ರಗಳಲ್ಲೂ ಗೆಲ್ಲಬೇಕಾಗಿದೆ. ಈ ನಿಟ್ಟಿನಲ್ಲಿ ವರಿಷ್ಠರ ತೀರ್ಮಾನದಂತೆ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.

ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್ ಮಾತನಾಡಿ, ರಾಘವೇಂದ್ರ ಅವರ ಅಭಿವೃದ್ಧಿ ಕಾರ್ಯಗಳನ್ನು ಪ್ರತಿ ಮತದಾರರಿಗೆ ತಲುಪಿಸಬೇಕು ಮತ್ತು ಜೆಡಿಎಸ್ ವರಿಷ್ಠರ ಸೂಚನೆಯಂತೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದರು.

ಈ ಸಂದರ್ಭ ಶಾಸಕಿ ಶಾರದಾ ಪೂರ್ಯಾನಾಯ್ಕ್‌ , ಭದ್ರಾವತಿ ಜೆಡಿಎಸ್ ಅಧ್ಯಕ್ಷ ಕರುಣಾಕರ ಮೂರ್ತಿ, ಕಾಂತರಾಜ್, ನಗರಾಧ್ಯಕ್ಷ ದೀಪಕ್ ಸಿಂಗ್, ಹರತಾಳು ಹಾಲಪ್ಪ, ರಘುಪತಿ ಭಟ್, ಟಿ.ಡಿ.ಮೇಘರಾಜ್, ಯೋಗೀಶ್, ಗೀತಾ ಸತೀಶ್, ಸಿದ್ದಪ್ಪ, ತ್ಯಾಗರಾಜ್, ಮಧುಕುಮಾರ್ ಮತ್ತಿತರರು ಇದ್ದರು.

- - - -16ಎಸ್‌ಎಂಜಿಕೆಪಿ01:

ಶಿವಮೊಗ್ಗ ಜಿಲ್ಲಾ ಜೆಡಿಎಸ್‌ ಕಚೇರಿಗೆ ಶನಿವಾರ ಭೇಟಿ ನೀಡಿದ್ದ ಸಂಸದ ಬಿ.ವೈ.ರಾಘವೇಂದ್ರ ಅವರನ್ನು ಜೆಡಿಎಸ್‌ ಪಕ್ಷದಿಂದ ಸ್ವಾಗತ ಕೋರಲಾಯಿತು. ಶಾಸಕಿ ಶಾರದಾ ಪೂರ್ಯಾನಾಯ್ಕ್‌ , ಜೆಡಿಎಸ್ ವಕ್ತಾರ ಕೆ.ಬಿ.ಪ್ರಸನ್ನಕುಮಾರ್, ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್, ಹಲವರಿದ್ದರು.

Share this article