ಕೇಂದ್ರ ಬೆಂಬಲ ಬೆಲೆ ಕಾನೂನು ಜಾರಿ ತರಲಿ: ಹುಚ್ಚವ್ವನಹಳ್ಳಿ ಮಂಜುನಾಥ

KannadaprabhaNewsNetwork | Published : Mar 2, 2024 1:48 AM

ಸಾರಾಂಶ

ದೇಶದ ಎಲ್ಲಾ ರೈತರು ದೆಹಲಿಗೆ ಹೋಗಿ ಹೋರಾಟ ನಡೆಸಲು ಸಾಧ್ಯವಿಲ್ಲ. ನಮ್ಮ ಪರವಾಗಿ ಕೆಲಸ ಮಾಡಬೇಕಾದ ಸಂಸದರು ನಿದ್ದೆ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ರೈತರ ಮೇಲೆ ಗೂಂಡಾಗಿರಿ ಮಾಡುತ್ತಿದೆ. ಸರ್ಕಾರಕ್ಕೆ ಬಿಸಿ ಮುಟ್ಟಿಸುವ ನಿಟ್ಟಿನಲ್ಲಿ ರೈತರು ಹೋರಾಟವನ್ನು ದೇಶವ್ಯಾಪಿ ತೀವ್ರಗೊಳಿಸುತ್ತಿದ್ದೇವೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಖಾತರಿ ಯೋಜನೆ ಜಾರಿಗೊಳಿಸಲು ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ನಗರದ ರೈಲ್ವೆ ನಿಲ್ದಾಣಕ್ಕೆ ಶುಕ್ರವಾರ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು.

ನಗರದ ಉಪ ವಿಭಾಗಾಧಿಕಾರಿ ಕಚೇರಿಯಿಂದ ರೈಲ್ವೆ ನಿಲ್ದಾಣಕ್ಕೆ ಮುತ್ತಿಗೆ ಹಾಕಿ, ರೈಲು ತಡೆ ಹೋರಾಟ ಹಮ್ಮಿಕೊಂಡಿದ್ದ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ಇತರರನ್ನು ಪೊಲೀಸರು ರೈಲ್ವೆ ನಿಲ್ದಾಣದ ಮುಖ್ಯದ್ವಾರದ ಬಳಿ ತಡೆದರಾದರೂ ಪೊಲೀಸರ ತಳ್ಳಿಕೊಂಡು, ನಿಲ್ದಾಣಕ್ಕೆ ಮುತ್ತಿಗೆ ಹಾಕಲು ರೈತರು ಯತ್ನಿಸಿದರು. ಕಡೆಗೆ ಸ್ಟೇಷನ್ ಮಾಸ್ಟರ್ ಡಿ.ಶಿವಮೂರ್ತಿ ಮುಖಾಂತರ ಕೇಂದ್ರ ಸರ್ಕಾರಕ್ಕೆ ಮನವಿ ಅರ್ಪಿಸಲಾಯಿತು.

ಈ ವೇಳೆ ಮಾತನಾಡಿದ ಹುಚ್ಚವ್ವನಹಳ್ಳಿ ಮಂಜುನಾಥ, ದೇಶದ ಎಲ್ಲಾ ರೈತರು ದೆಹಲಿಗೆ ಹೋಗಿ ಹೋರಾಟ ನಡೆಸಲು ಸಾಧ್ಯವಿಲ್ಲ. ನಮ್ಮ ಪರವಾಗಿ ಕೆಲಸ ಮಾಡಬೇಕಾದ ಸಂಸದರು ನಿದ್ದೆ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ರೈತರ ಮೇಲೆ ಗೂಂಡಾಗಿರಿ ಮಾಡುತ್ತಿದೆ. ಸರ್ಕಾರಕ್ಕೆ ಬಿಸಿ ಮುಟ್ಟಿಸುವ ನಿಟ್ಟಿನಲ್ಲಿ ರೈತರು ಹೋರಾಟವನ್ನು ದೇಶವ್ಯಾಪಿ ತೀವ್ರಗೊಳಿಸುತ್ತಿದ್ದೇವೆ. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಗೊಳಿಸದಿದ್ದರೆ ಲೋಕಸಭೆ ಚುನಾವಣೆಯಲ್ಲಿ ಕೇಂದ್ರ ಸರ್ಕಾರದ ಮರಣ ಶಾಸನವನ್ನು ರೈತರು ಬರೆಯುತ್ತೇವೆ ಎಂದರು.

ಕೇಂದ್ರ ಸರ್ಕಾರಕ್ಕೆ ಬಂಡವಾಳ ಶಾಹಿಗಳ ಸಾಲಮನ್ನಾ ಮಾಡಲು ಹೆಚ್ಚಿನ ಕಾಳಜಿ ಇದೆ. ಆದರೆ, ರೈತ ಸಾಲ ಮನ್ನಾ ವಿಚಾರ, ಸ್ವಾಮಿನಾಥನ್‌ ವರದಿ ಜಾರಿ, ಬೆಂಬಲ ಬೆಲೆ, ಡಬ್ಲ್ಯುಟಿಒ ಒಪ್ಪಂದ, ರೈತರಿಗೆ ಪಿಂಚಣಿ ನೀಡುವ ಬಗ್ಗೆ, ಬೆಳೆ ವಿಮೆ ಪದ್ಧತಿ, ಕಳೆದ ವರ್ಷ ಹೋರಾಟದಲ್ಲಿ ಪ್ರಾಣತ್ಯಾಗ ಮಾಡಿದ 750 ರೈತ ಕುಟುಂಬಕ್ಕೆ ಸರ್ಕಾರ ನೆರವು ನೀಡಲು ಉದಾಸೀನ ಮಾಡುತ್ತಿದೆ. ರೈತರು ನ್ಯಾಯ ಕೇಳಿದರೆ ಗೋಲಿಬಾರ್ ಮಾಡುವ ಕೆಲಸವಾಗುತ್ತಿದೆ. ಇದು ದೇಶದ ಅನ್ನದಾತ ರೈತರಿಗೆ ಮಾಡುವ ಅವಮಾನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೆಹಲಿಯಲ್ಲಿ ನಡೆಯುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾ(ರಾಜಕೀಯೇತರ) ಸಂಘಟನೆಯ ಹೋರಾಟದ ರೈತರು ಯಾರೂ ದೇಶದ್ರೋಹಿಗಳಲ್ಲ. ದೆಹಲಿಗೆ ಹೋಗುವ ಮಾರ್ಗ ಮಧ್ಯದಲ್ಲಿ ಭೋಪಾಲದಲ್ಲಿ ಪೊಲೀಸರು ತಡೆದು, ಬಂಧಿಸಿದರು. 3 ದಿನಗಳ ನಂತರ ವಾಪಸ್ ಕಳಿಸಿದ್ದಾರೆ. ದೆಹಲಿ ಹೋರಾಟ ಮಾಡುವ ಪಂಜಾಬ್‌, ಹರಿಯಾಣ ರೈತರನ್ನು ದೇಶ ವಿರೋಧಿಗಳನ್ನೆಲುತ್ತಾರೆ. ಇದರ ಅರ್ಥ ಏನೆಂದು ಪ್ರಶ್ನಿಸಿದರು.

ಸಂಘಟನೆ ಮುಖಂಡರಾದ ಅಂಜಿನಪ್ಪ ಪೂಜಾರ ನಿಟುವಳ್ಳಿ, ಎಂ.ಪಿ.ಮಠದ್ ನಂದಿತಾವರೆ, ಎಂ.ಬಿ.ಪಾಟೀಲ್ ದಳಪತಿ, ಟಿ.ಎಚ್‌.ನಾಗರಾಜಪ್ಪ, ಕೋಲ್ಕುಂಟೆ ಬಸಣ್ಣ, ಎಚ್.ಉಮೇಶ ಉಪನಾಯಕನಹಳ್ಳಿ, ಕೆ.ಹನುಮಂತಪ್ಪ, ಆಲೂರು ಪರಶುರಾಮ, ಪಾಮೇನಹಳ್ಳಿ ಗೌಡ್ರು ಶೇಖರಪ್ಪ, ಕೋಗಲೂರು ಕುಮಾರ್, ರಾಜನಹಟ್ಟಿ ರಾಜು, ಗೌಡಗೊಂಡನಹಳ್ಳಿ ಸತೀಶ, ಕೋಲ್ಕುಂಟೆ ಬಸವರಾಜ್, ಕುಕ್ಕವಾಡ ಬಸವರಾಜ್, ಕುರ್ಕಿ ಹನುಮಂತ, ಹೂವಿನ ಮಡು ನಾಗರಾಜ್, ಬುಳ್ಳಾಪುರ ನಾಗರಾಜ್, ಹುಚ್ಚವ್ವನಹಳ್ಳಿ ಪ್ರಕಾಶ್, ಗುಮ್ಮನೂರು ಭೀಮೇಶ್, ರುದ್ರೇಶ್, ಹೊನ್ನೂರು ಮಂಜುನಾಥ್, ಐಗೂರು ಈರಣ್ಣ ಸೇರಿ ನೂರಕ್ಕೂ ಅಧಿಕ ರೈತರು ಭಾಗವಹಿಸಿದ್ದರು.

ರೈತರ ಸಮಸ್ಯೆ ಬಗೆಹರಿಯುವ ತನಕ ಚಳವಳಿಯಿಂದ ಹಿಂದೆ ಸರಿಯಲ್ಲ. ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ ರೈತರ ಹೋರಾಟಕ್ಕೆ ಸಂಪೂರ್ಣ ಬೆಂಬಲವಿದೆ. ನಾವೆಲ್ಲರೂ ಆ ರೈತರ ಜೊತೆಗಿದ್ದೇವೆ. ಕನಿಷ್ಠ ಬೆಂಬಲ ಬೆಲೆ ಕಾಯ್ದೆ ಜಾರಿಗೊಳ್ಳಬೇಕು. ವಿದ್ಯುತ್ ಖಾಸಗೀಕರಣ ಮಾಡಬಾರದು ಎಂಬುದೂ ಸೇರಿ ವಿವಿಧ ಬೇಡಿಕೆ ಮುಂದಿಟ್ಟು ಹೋರಾಟ ನಿರಂತರ ನಡೆಯಲಿದೆ.

ಹುಚ್ಚವ್ವನಹಳ್ಳಿ ಮಂಜುನಾಥ, ರಾಜ್ಯ ರೈತ ಸಂಘ, ಅಧ್ಯಕ್ಷ

Share this article