ಪ್ರತಿಯೊಬ್ಬರೂ ಪರೋಪಕಾರಿ ಕೆಲಸ ಮಾಡಲಿ: ಫಕೀರ ದಿಂಗಾಲೇಶ್ವರ ಶ್ರೀ

KannadaprabhaNewsNetwork | Updated : Feb 19 2024, 03:24 PM IST

ಸಾರಾಂಶ

ಗಿಡ, ಮರ, ನದಿಗಳು ಪರೋಪಕಾರಿ ಕೆಲಸಗಳನ್ನು ಮಾಡುತ್ತವೆ. ಅದೇ ರೀತಿ ಬಿದ್ರಿ ಕೊಟ್ರೇಶಪ್ಪ ಅವರು ತಮ್ಮ ಟ್ರಸ್ಟ್ ವತಿಯಿಂದ ಪ್ರತಿವರ್ಷ ಉಚಿತ ಸಾಮೂಹಿಕ ವಿವಾಹಗಳನ್ನು ನಡೆಸಿಕೊಂಡು ಬಂದಿದ್ದಾರೆ

ಹರಪನಹಳ್ಳಿ: ತಾಲೂಕಿನ ಕಂಚಿಕೆರೆ ಗ್ರಾಮದ ಕೋಡಿ ಸಿದ್ದೇಶ್ವರ ದೇವಸ್ಥಾನದಲ್ಲಿ ಬಿದ್ರಿ ರೇವಣಸಿದ್ಧಪ್ಪ ಅವರ ಸ್ಮರಣಾರ್ಥ 24ನೇ ವರ್ಷದ ಉಚಿತ ಸಾಮೂಹಿಕ ವಿವಾಹಗಳು ಭಾನುವಾರ ಜರುಗಿದವು.

ಶಿರಹಟ್ಟಿ, ಬಾಳೆಹೊಸೂರು ಮಠದ ಫಕೀರ ದಿಂಗಾಲೇಶ್ವರ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಗಿಡ, ಮರ, ನದಿಗಳು ಪರೋಪಕಾರಿ ಕೆಲಸಗಳನ್ನು ಮಾಡುತ್ತವೆ. ಅದೇ ರೀತಿ ಬಿದ್ರಿ ಕೊಟ್ರೇಶಪ್ಪ ಅವರು ತಮ್ಮ ಟ್ರಸ್ಟ್ ವತಿಯಿಂದ ಪ್ರತಿವರ್ಷ ಉಚಿತ ಸಾಮೂಹಿಕ ವಿವಾಹಗಳನ್ನು ನಡೆಸಿಕೊಂಡು ಬಂದಿದ್ದಾರೆ ಎಂದರು.

ಶಾಲಾ, ಕಾಲೇಜು ಮಕ್ಕಳಿಗೆ ಡಾ. ಬಿದ್ರಿ ಕೊಟ್ರೇಶ್, ಅನುರಾಧಾ ಕೊಟ್ರೇಶ್ ಪ್ರತಿಷ್ಠಾನದ ವತಿಯಿಂದ ಸರ್ಕಾರಿ ಪಪೂ ಕಾಲೇಜಿನ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್ ವಿತರಣೆ, ಅತಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ₹5 ಸಾವಿರ ಬಹುಮಾನ ವಿತರಣೆ ಹಾಗೂ ಕೋಡಿ ಸಿದ್ದೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಮಾಡಿಕೊಂಡು ಬಂದಿರುವುದು ಶ್ಲಾಘನೀಯ ಎಂದರು.

ಬಿದ್ರಿ ಕೊಟ್ರೇಶಪ್ಪನಂತೆ ಪರೋಪಕಾರಿ ಕೆಲಸಗಳನ್ನು ಮಾಡಬೇಕು. ಮುಂದಿನ ವರ್ಷ ಉಚಿತ ಸಾಮೂಹಿಕ ವಿವಾಹಗಳ ರಜತ ಮಹೋತ್ಸವ ಹಾಗೂ ಬಿದ್ರಿ ಕೊಟ್ರೇಶಪ್ಪ ಅವರ ಅಮೃತ ಮಹೋತ್ಸವ ಮತ್ತು ವಿವಿಧ ಸಾಧಕರಿಗೆ, ಮಠಾಧೀಶರಿಗೆ ಅಭಿನಂದನಾ ಕಾರ್ಯಕ್ರಮವನ್ನು ಟ್ರಸ್ಟ್ ವತಿಯಿಂದ ಅದ್ಧೂರಿಯಾಗಿ ಹಮ್ಮಿಕೊಳ್ಳಲಾಗುವುದು ಎಂದರು.

ನಮ್ಮ ಮಠದಿಂದ ಸಹಕಾರ ನೀಡುವುದಾಗಿ ಶ್ರೀಗಳು ಹೇಳಿದರು. ಇದೇ ಸಂದರ್ಭದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಸಿದ್ದಲಿಂಗ ಸ್ವಾಮಿಗಳು, ಅನುರಾಧಾ ಕೊಟ್ರೇಶ್, ಬಿದ್ರಿ ಸುನೀಲ್, ಡಾ. ಶ್ರೀಶೈಲ ಎಂ. ಬ್ಯಾಡಗಿ, ಡಾ. ಶಂಕರ್ ಪಾಟೀಲ್, ಜಿ. ಚಿದಾನಂದ ಗುತ್ತಿಗೆದಾರರು, ಗ್ರಾಪಂ ಅಧ್ಯಕ್ಷೆ ಶಾಂತಾದೇವಿ ಚಿನ್ನಪ್ಪ ವಿ. ಕಂಚಿಕೆರೆ, ಉಪಾಧ್ಯಕ್ಷೆ ಮತ್ತಿಹಳ್ಳಿ ಸುನೀತಾ ಸಿದ್ದಪ್ಪ, ಎನ್.ಜಿ. ಉಮೇಶ್, ಜಿ.ವಿ. ಲೋಕೇಶ್, ಅಂಜಿನಪ್ಪ, ವೆಂಕಟೇಶ್, ಗ್ರಾಮದ ಮುಖಂಡರು ಇತರರು ಇದ್ದರು.

Share this article