ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲಮನ್ನಾ ಮಾಡಲಿ: ಶಾಸಕ ಕೆ.ಎಸ್.ಬಸವಂತಪ್ಪ

KannadaprabhaNewsNetwork | Published : Feb 21, 2024 2:03 AM

ಸಾರಾಂಶ

ಡಾ.ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ₹72 ಸಾವಿರ ಕೋಟಿ ರೈತರ ಸಾಲಮನ್ನಾ ಮಾಡಿದ್ದರು. ಬರ, ಅಂತರ್ಜಲ ಕುಸಿತದಿಂದಾಗಿ ಅಡಿಕೆ, ತೆಂಗು, ಬಾಳೆ ಬೆಳೆಗಾರರು, ಬೆಳೆ ಉಳಿಸಿಕೊಳ್ಳಲು ಭಗೀರಥ ಪ್ರಯತ್ನ ನಡೆಸಿದ್ದಾರೆ. ಈ ಸಂದರ್ಭದಲ್ಲಿ ರೈತರು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಮಾಡಿರುವ ಸಾಲಗಳ ಮನ್ನಾ ಹಾಗೂ ಬರ ಪರಿಹಾರದ ಹಣ ತಕ್ಷಣ ಬಿಡುಗಡೆಗೊಳಿಸಬೇಕು.

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯದ ಭೀಕರ ಬರ ಮತ್ತು ಬೇಸಿಗೆ ಪೂರ್ವದಲ್ಲಿ ಅಂತರ್ಜಲ ಮಟ್ಟ ಕುಸಿತದಿಂದ ರೈತರು ಕಂಗಾಲಾಗಿದ್ದು, ಕೇಂದ್ರ ಸರ್ಕಾರವು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲಮನ್ನಾ ಮಾಡುವಂತೆ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಒತ್ತಾಯಿಸಿದ್ದಾರೆ.

ವಿಧಾನಸೌಧ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದ ಮೇಲೆ ಸಭಾಧ್ಯಕ್ಷರು ಮಾತನಾಡಲು ಅವಕಾಶ ಕೊಟ್ಟ ಹಿನ್ನೆಲೆಯಲ್ಲಿ ರಾಜ್ಯದ ರೈತರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದ ಶಾಸಕ ಕೆ.ಎಸ್.ಬಸವಂತಪ್ಪ, ಈ ಹಿಂದೆ ಡಾ.ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ₹72 ಸಾವಿರ ಕೋಟಿ ರೈತರ ಸಾಲಮನ್ನಾ ಮಾಡಿದ್ದರು. ಬರ, ಅಂತರ್ಜಲ ಕುಸಿತದಿಂದಾಗಿ ಅಡಿಕೆ, ತೆಂಗು, ಬಾಳೆ ಬೆಳೆಗಾರರು, ಬೆಳೆ ಉಳಿಸಿಕೊಳ್ಳಲು ಭಗೀರಥ ಪ್ರಯತ್ನ ನಡೆಸಿದ್ದಾರೆ. ಈ ಸಂದರ್ಭದಲ್ಲಿ ರೈತರು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಮಾಡಿರುವ ಸಾಲಗಳ ಮನ್ನಾ ಹಾಗೂ ಬರ ಪರಿಹಾರದ ಹಣ ತಕ್ಷಣ ಬಿಡುಗಡೆಗೊಳಿಸಬೇಕು. ಈ ಬಗ್ಗೆ ರಾಜ್ಯದ ಸಂಸದರು, ವಿಧಾನಸಭೆ ವಿಪಕ್ಷ ನಾಯಕರು, ಸದಸ್ಯರು ಪ್ರಧಾನಿ ನರೇಂದ್ರ ಮೋದಿ ಮೇಲೆ ಒತ್ತಡ ಹೇರಿ, ಸಾಲ ಮನ್ನಾ ಮಾಡಿಸಬೇಕು ಎಂದು ಸಲಹೆ ನೀಡಿದರು.

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈ ಹಿಂದೆ ಪರಿಶಿಷ್ಟರಿಗೆ ಮೀಸಲಿಟ್ಟ ಹಣ ಆ ಸಮುದಾಯಕ್ಕೆ ಸೇರಬೇಕೆಂದು ದೇಶದಲ್ಲೇ ಮೊದಲ ಬಾರಿಗೆ ವಿಶೇಷ ಕಾಯ್ದೆ ತಂದಿತ್ತು. ಅದರಂತೆ ಆ ಸಮುದಾಯಕ್ಕೆ ಹಣ ಸಂದಾಯವಾಗುತ್ತಿದೆ. ಶೇ.5-6 ವ್ಯತ್ಯಾಸ ಇರಬಹುದು ಆದರೆ ಮುಂದಿನ ದಿನಗಳಲ್ಲಿ ಮೀಸಲಿಟ್ಟ ಹಣ ಸಂಪೂರ್ಣ ವಿನಿಯೋಗವಾಗಲಿದೆ ಎಂದು ತಿಳಿಸಿದರು.

ಜಲ ಜೀವನ್ ಮಿಷನ್ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ ಮನೆಗೊಂದು ನಲ್ಲಿ ಅಳವಡಿಸಲಾಗಿದೆ. ಆದರೆ ಆ ನಲ್ಲಿಗಳಲ್ಲಿ ಬರುವ ನೀರು ಹಿಡಿಯಲು ಮಹಿಳೆಯರು ಕೂಲಿ ಕೆಲಸ ಬಿಟ್ಟು ಇಡೀ ದಿವಸ ನಿಲ್ಲುವ ಪರಿಸ್ಥಿತಿ ಬಂದಿದೆ. ಯಾವುದೇ ಯೋಜನೆಗಳ ಅನುಷ್ಠಾನಕ್ಕೆ ತಂದ ಮೇಲೆ ಜನರಿಗೆ ಉಪಯೋಗ ಆಗಬೇಕು. ಅದರಿಂದ ಇನ್ನಷ್ಟು ಸಮಸ್ಯೆಗಳಾಗಬಾರದು ಎಂದು ಕೆ.ಎಸ್.ಬಸವಂತಪ್ಪ ಹೇಳಿದರು.

Share this article