ರೈತರು ನ್ಯಾನೋ ಯೂರಿಯಾ, ಡಿಎಪಿ ದ್ರಾವಣ ಗೊಬ್ಬರ ಬಳಸಲಿ: ಡಾ. ನಾರಾಯಣಸ್ವಾಮಿ

KannadaprabhaNewsNetwork | Published : Mar 7, 2024 1:54 AM

ಸಾರಾಂಶ

ಕಳೆದ ೫೫ ವರ್ಷಗಳ ಹಿಂದೆ ದೇಶದ ರೈತರ ೬ ಲಕ್ಷ ಶೇರು ಬಂಡವಾಳದಿಂದ ಪ್ರಾರಂಭಗೊಂಡ ಇಫ್ಕೋ ಸಂಸ್ಥೆಯ ಇಂದು ಸುಮಾರು ₹೬೫ ಸಾವಿರ ಕೋಟಿ ಬಂಡವಾಳ ಹೊಂದಿದೆ. ನಮ್ಮ ದೇಶದ ರೈತರ ಏಕೈಕ ಸಂಸ್ಥೆ ಇಫ್ಕೋ, ಈ ಸಂಸ್ಥೆಯು ರೈತರ ಹಾಗೂ ಕೃಷಿಗೆ ಪೂರ್ವಕವಾಗಿ ಕೆಲಸ ಮಾಡುತ್ತಾ ಬಂದಿದೆ ಎಂದು ಡಾ. ಸಿ. ನಾರಾಯಣಸ್ವಾಮಿ ಹೇಳಿದ್ದಾರೆ.

ಗದಗ: ರೈತರು ನ್ಯಾನೋ ಯೂರಿಯಾ ಹಾಗೂ ಡಿ.ಎ.ಪಿ. ದ್ರಾವಣ ಗೊಬ್ಬರ ಬಳಕೆ ಮಾಡಿಕೊಂಡು ಆದಾಯ ಹೆಚ್ಚಿಸಿಕೊಳ್ಳಿ ಎಂದು ಇಫ್ಕೋ ಸಂಸ್ಥೆಯ ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಮ್ಯಾನೇಜರ್ ಡಾ. ಸಿ. ನಾರಾಯಣಸ್ವಾಮಿ ಹೇಳಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ರಾಜ್ಯ ಸಹಕಾರ ಮಹಾಮಂಡಳ, ಇಫ್ಕೋ ಸಂಸ್ಥೆ, ಧಾರವಾಡ ಕೆಸಿಸಿ ಬ್ಯಾಂಕ್, ಗದಗ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಸಹಕಾರ ಇಲಾಖೆ ಸಂಯುಕ್ತಾಶ್ರಯದಲ್ಲಿ ಗದಗ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರಿಗೆ ನಡೆದ ರಾಜ್ಯ ಮಟ್ಟದ ವಿಶೇಷ ಸಹಕಾರ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.

ಕಳೆದ ೫೫ ವರ್ಷಗಳ ಹಿಂದೆ ದೇಶದ ರೈತರ ೬ ಲಕ್ಷ ಶೇರು ಬಂಡವಾಳದಿಂದ ಪ್ರಾರಂಭಗೊಂಡ ಇಫ್ಕೋ ಸಂಸ್ಥೆಯ ಇಂದು ಸುಮಾರು ₹೬೫ ಸಾವಿರ ಕೋಟಿ ಬಂಡವಾಳ ಹೊಂದಿದೆ. ನಮ್ಮ ದೇಶದ ರೈತರ ಏಕೈಕ ಸಂಸ್ಥೆ ಇಫ್ಕೋ, ಈ ಸಂಸ್ಥೆಯು ರೈತರ ಹಾಗೂ ಕೃಷಿಗೆ ಪೂರ್ವಕವಾಗಿ ಕೆಲಸ ಮಾಡುತ್ತಾ ಬಂದಿದೆ. ಅದರಲ್ಲಿಯೂ ರೈತರ ಕೃಷಿ ಇಳುವರಿ ಹೆಚ್ಚಿಸುವುದಕ್ಕಾಗಿ ದೇಶದಲ್ಲಿಯೇ ಪ್ರಥಮವಾಗಿ ಯೂರಿಯಾ ಹಾಗೂ ಡಿಎಪಿ ರಾಸಾಯನಿಕ ಗೊಬ್ಬರ ಉತ್ಪಾದಿಸಿತ್ತು. ಆದರೆ ಇಂದು ಅವೇ ಯೂರಿಯಾ ಹಾಗೂ ಡಿಎಪಿ ಗೊಬ್ಬರವನ್ನು ನ್ಯಾನೋ ಮಾದರಿಯಲ್ಲಿ ದ್ರವಣ ರೂಪದಲ್ಲಿ ಸಂಶೋಧನೆ ಮಾಡಿದ್ದು, ೧ ಚೀಲ ಗೊಬ್ಬರದಷ್ಟೇ ಪ್ರಮಾಣವನ್ನು ಕೇವಲ ೫೦೦ ಎಂ.ಎಲ್.ಎ., ೧/೨ ಲೀಟರ್‌ನಲ್ಲಿ ಒಳಗೊಂಡಿದೆ. ಆದ್ದರಿಂದ ಇಫ್ಕೋ ಸಂಸ್ಥೆಯ ಹೊಸದಾಗಿ ಸಂಶೋಧನೆ ಮಾಡಿದಂತಹ ನ್ಯಾನೋ ಯೂರಿಯಾ ಹಾಗೂ ಡಿಎಪಿ ದ್ರಾವಣ ಗೊಬ್ಬರ ಬಳಕೆ ಮಾಡುವುದರೊಂದಿಗೆ ರೈತರು ಆದಾಯ ಹೆಚ್ಚಿಸಿಕೊಳ್ಳಬೇಕು ಎಂದರು.

ಕೆಸಿಸಿ ಬ್ಯಾಂಕಿನ ನಿರ್ದೇಶಕ ಮಲ್ಲಿಕಾರ್ಜುನ ಹೊರಕೇರಿ ಮಾತನಾಡಿ, ಕೆಸಿಸಿ ಬ್ಯಾಂಕ್ ಆರ್ಥಿಕವಾಗಿ ಸಶಕ್ತವಾಗಿದೆ. ಅಷ್ಟೇ ಅಲ್ಲದೇ ಅಖಂಡ ಧಾರವಾಡ ಜಿಲ್ಲೆಯ ಎಲ್ಲ ಸಂಘಗಳ ಸದಸ್ಯರಿಗೆ ಹಂತ ಹಂತವಾಗಿ ಹೆಚ್ಚುವರಿ ಸಾಲ ನೀಡುತ್ತಿದೆ. ಕಟಬಾಕಿದಾರರಿಗೆ ಹಣ ಪಾವತಿಸಲು ಸೂಚಿಸಿ ಹೆಚ್ಚುವರಿ ಸಾಲ ನೀಡುವ ಸೌಲಭ್ಯವನ್ನು ಪಡೆದುಕೊಳ್ಳಲು ಜಾಗೃತಿ ಮೂಡಿಸುವುದು ಹಾಗೂ ಠೇವಣಿ ಸಂಗ್ರಹಣೆಗೆ ಆದ್ಯತೆ ನೀಡಬೇಕೆಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಧಾರವಾಡ ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಎಸ್. ಪಾಟೀಲ ಮಾತನಾಡಿ, ಬ್ಯಾಂಕಿನಲ್ಲಿ ಖಾತೆ ಇಲ್ಲದವರಿಗೆ ಬ್ಯಾಂಕಿನ ವ್ಯಾಪ್ತಿಯಲ್ಲಿ ಬರುವ ಧಾರವಾಡ, ಹಾವೇರಿ ಹಾಗೂ ಗದಗ ಜಿಲ್ಲೆಗಳಲ್ಲಿನ ಪ್ರತಿ ಗ್ರಾಮಗಳ ಮನೆ ಮನೆಗೆ ನಮ್ಮ ಬ್ಯಾಂಕಿನ ಸಿಬ್ಬಂದಿ ತೆರಳಿ ಖಾತೆಗಳನ್ನು ತೆರೆಯುವ ಕಾರ್ಯವನ್ನು ಮಾಡುತ್ತಿದ್ದು, ಪ್ರತಿ ತಿಂಗಳು ೧೦ ಸಾವಿರ ಖಾತೆ ತೆರೆಯಲಾಗುತ್ತಿದೆ. ಸಹಕಾರ ಸಂಘದಲ್ಲಿರುವ ಸಹಕಾರಿಗಳೊಂದಿಗೆ ಅಲ್ಲಿನ ಸೌಲಭ್ಯಗಳ ಕುರಿತು ಚರ್ಚಿಸಲಾಗುತ್ತಿದೆ. ಹಣಕಾಸಿನ ವ್ಯವಹಾರದಲ್ಲಿ ಉತ್ತಮವಾಗಿರುವ ಸಹಕಾರಿಗಳಿಂದ ಹಣ ಪಡೆದು ಠೇವಣಿ ರೂಪದಲ್ಲಿ ಸಂಗ್ರಹಿಸಿ ಯಾರು ಹಣಕಾಸಿನ ತೊಂದರೆಯಲ್ಲಿ ಇರುತ್ತಾರೋ ಅವರ ಅರ್ಜಿ ಪಡೆದುಕೊಳ್ಳುವ ಮೂಲಕ ಸಾಲ ಸೌಲಭ್ಯ ನೀಡುವ ಕೆಲಸ ಮಾಡಲಾಗುತ್ತದೆ ಎಂದರು.

ತರಬೇತಿ ಕಾರ್ಯಾಗಾರದಲ್ಲಿ ವ್ಯಾಪಾರ ಅಭಿವೃದ್ಧಿ ಯೋಜನೆ ಹಾಗೂ ಸಹಕಾರ ಸಂಘಗಳ ಕಾನೂನಿನಲ್ಲಿರುವ ಪ್ರಮುಖ ಅಂಶಗಳ ಕುರಿತು ಸಹಕಾರ ಇಲಾಖೆಯ ನಿವೃತ್ತ ಅಪರ ನಿಬಂಧಕ ಎಂ.ಜಿ. ಪಾಟೀಲ, ಸಹಕಾರ ಸಂಘಗಳಲ್ಲಿ ಗೊಬ್ಬರ ಮಾರಾಟದಿಂದ ಲಾಭದಾಯಕತೆ, ರೈತರಿಗೆ ಆರ್ಥಿಕ ಹೊರೆ ಕಡಿಮೆ, ಕೃಷಿಯಲ್ಲಿ ನ್ಯಾನೋ ಯೂರಿಯಾ ಹಾಗೂ ಡಿಎಪಿ ಬಳಕೆ ಕುರಿತು ಇಫ್ಕೋ ಸಂಸ್ಥೆಯ ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಮ್ಯಾನೇಜರ್ ಡಾ. ಸಿ. ನಾರಾಯಣಸ್ವಾಮಿ ಹಾಗೂ ಸಹಕಾರದಿಂದ ಸಮೃದ್ಧಿ ಸಾಮಾನ್ಯ ಸೇವಾ ಕೇಂದ್ರಗಳ ಯೋಜನೆ ಕುರಿತು ಶಿರಸಿ ಅಗ್ರಿಕಲ್ಚರಲ್ ಸರ್ವಿಸ್ ಡೆವಲೆಪ್‌ಮೆಂಟ್ ಕೋ-ಆಪ್ ಸೊಸೈಟಿ ಅಧ್ಯಕ್ಷ ಭಾಸ್ಕರ ಹೆಗಡೆ ಕಾಗೇರಿ ಉಪನ್ಯಾಸ ನೀಡಿದರು.

ಕೆಸಿಸಿ ಬ್ಯಾಂಕ್‌ ನಿರ್ದೇಶಕ ಎಂ.ಎಫ್. ಕಲಗುಡಿ, ಮಂಜುನಾಥ ಮುರಳ್ಳಿ, ಎನ್.ಬಿ. ಸಂಕದ, ಜಿ.ವೈ. ಪಾಟೀಲ, ಎಸ್.ಬಿ. ಸಪ್ಪೂರಿ, ಎಂ.ಜಿ. ನಿಂಗಜ್ಜನವರ, ಸಿ.ಬಿ. ದೊಡ್ಡಗೌಡ್ರ, ಎಸ್.ಎಸ್. ಕಬಾಡೆ, ವಿದ್ಯಾ ಎ. ಹೊನ್ನಶೆಟ್ಟಿ ಹಾಗೂ ಪ್ರಧಾನ ವ್ಯವಸ್ಥಾಪಕ ಎಸ್.ವಿ. ಹೂಗಾರ ಉಪಸ್ಥಿತರಿದ್ದರು.

Share this article