ಕನ್ನಡಪ್ರಭ ವಾರ್ತೆ ಚನ್ನಗಿರಿ
ಹಾಲುಮತ ಸಮಾಜದ ಬಹುದಿನಗಳ ಕನಸಾಗಿದ್ದ ಶ್ರೀ ಬೀರಲಿಂಗೇಶ್ವರ ಸ್ವಾಮಿಯ ನೂತನ ದೇವಾಲಯ ನಿರ್ಮಾಣವಾಗಿ ಸೋಮವಾರ ಉದ್ಘಾಟನೆಗೊಂಡಿರುವುದು ಸಂತಸ ತಂದಿದೆ ಎಂದು ಕಾಗಿನೆಲೆ ಕ್ಷೇತ್ರದ ಶ್ರೀನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.ಪಟ್ಟಣದ ಕುರುಬರ ಬೀದಿಯಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಬೀರಲಿಂಗೇಶ್ವರ ಸ್ವಾಮಿ ದೇವಸ್ಥಾನದ ನೂತನ ಆಲಯ ಪ್ರವೇಶ, ದೇವತಾ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿ ಹಬ್ಬ, ಗೃಹಪ್ರವೇಶ, ಶುಭ ಸಮಾರಂಭಗಳ ನಮ್ಮಲ್ಲಿರುವ ಕಲಹಗಳು, ವೈ ಮನಸ್ಸುಗಳ ಬಗೆಹರಿಸಿಕೊಳ್ಳುವ ಉದ್ದೇಶದಿಂದ ಈ ಕಾರ್ಯಕ್ರಮಗಳ ಮಾಡುತ್ತೇವೆ. ಹೊದಿಗೆರೆ, ದುಮ್ಮಿ, ಬನ್ನಿಹಟ್ಟಿ, ಚನ್ನಗಿರಿ ಈ ಗ್ರಾಮಗಳ ಹಾಲುಮತ ಸಮಾಜಗಳು ಒಗ್ಗೂಡಬೇಕು. ವ್ಯಕ್ತಿ ಪ್ರತಿಷ್ಠೆಗಿಂತ ದೈವ ಪ್ರತಿಷ್ಠೆ ಮುಖ್ಯವಾಗಲಿ ಎಂದರು.
ಅಂಬೇಡ್ಕರ್ ಹೇಳಿದಂತೆ ಯಾವ ದೇಶದಲ್ಲಿ ದೇವಸ್ಥಾನದ ಗಂಟೆಗಿಂತ ಶಾಲೆ ಗಂಟೆಗಳು ಹೆಚ್ಚು ಬಾರಿಸುತ್ತವೆಯೋ ಆಗ ಸಮಾಜ ಉದ್ಧಾರವಾಗುತ್ತದೆ ಎಂದಿದ್ದಾರೆ ಆದರೆ ನಮ್ಮ ಭಕ್ತಿಗೆ ದೇವಸ್ಥಾನ ಬೇಕು ಅದರ ಜೊತೆಯಲ್ಲಿ ಶಿಕ್ಷಣವೂ ಬೇಕು. ಯಾವ ಸಮಾಜದಲ್ಲಿ ಶಿಕ್ಷಣ ಮತ್ತು ಆರ್ಥಿಕವಾಗಿ ಜಾಗೃತಿ ಹೊಂದಿವೆಯೋ ಅಂತಹ ಸಮಾಜಗಳು ಈ ರಾಜ್ಯ ಆಳುತ್ತವೆ. ಆದ್ದರಿಂದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಹಿಂದುಳಿದ, ದಲಿತ, ಶೋಷಿತ ಸಮುದಾಯದವರು ಬಾಯಿ ಚಪಲದ ಹಬ್ಬಗಳ ಯಾವಾಗ ನಿಲ್ಲಿಸುತ್ತಾರೋ ಆಗ ಈ ಸಮುದಾಯಗಳು ಆರ್ಥಿಕ, ಶೈಕ್ಷಣಿಕವಾಗಿ ಮುಂದೆ ಬರಲು ಸಾಧ್ಯ. ಕಂದಾಚಾರ, ಮೌಢ್ಯದ ಆಚರಣೆಗಳಿಂದ ಹೊರ ಬರಬೇಕು ಎಂದರು.200ಕ್ಕೂ ಹೆಚ್ಚು ದೇವಾಲಯಕ್ಕೆ ಅನುದಾನ:
ಡೊಳ್ಳು ಬಾರಿಸಿ ಸಮಾರಂಭ ಉದ್ಘಾಟಿಸಿದ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ ಒಗ್ಗಟ್ಟಿನಿಂದ ಇದ್ದಾಗ ಏನಾದರೂ ಸಾಧಿಸಬಹುದು ಎಂಬುದಕ್ಕೆ ಈ ದೇವಾಲಯವೇ ಸಾಕ್ಷಿ. ಯಾವುದೇ ಪಕ್ಷ-ಭೇದ ಭಿನ್ನಾಭಿಪ್ರಾಯಗಳಿದ್ದರೂ ಅವುಗಳ ಮರೆತು ಒಟ್ಟಾಗಿ ಸೇರಲು ಧಾರ್ಮಿಕ ಕಾರ್ಯಕ್ರಮಗಳಿಂದ ಮಾತ್ರ ಸಾಧ್ಯ. ದೇವರ ಮೇಲಿನ ಭಕ್ತಿ-ಭಾವನೆಗಳು ನಶಿಸುತ್ತಿರುವ ಸಂದರ್ಭದಲ್ಲಿ ಈ ಸುಂದರ ದೇವಾಲಯ ನಿರ್ಮಿಸಿರುವುದು ಸಂತಸ ತಂದಿದೆ. ನಾನು ಶಾಸಕನಾಗಿದ್ದಾಗ ಕ್ಷೇತ್ರದಾದ್ಯಂತ ಸುಮಾರು 200ಕ್ಕೂ ಹೆಚ್ಚಿನ ದೇವಾಲಯಗಳ ನಿರ್ಮಿಸಲು ಅನುದಾನ ನೀಡಿದ್ದೆ ಎಂದರು.ಈಶ್ವರಪ್ಪ-ಸಿದ್ದರಾಮಯ್ಯ ಈ ಸಮುದಾಯದ ಎರಡು ಕಣ್ಣುಗಳಿದ್ದಂತೆ, ನಾನು ಶಾಸಕನಾಗಿದ್ದಾಗ ಹಾಲುಮತ ಸಮಾಜಕ್ಕೆ ರಾಜಕೀಯ ಶಕ್ತಿ ತುಂಬುವ ಕೆಲಸ ಮಾಡಿದ್ದೆ ಎಂದರು.
ಸಮಾರಂಭದಲ್ಲಿ ಇನ್ ಸೈಟ್ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಜಿ.ಬಿ.ವಿನಯ್ ಕುಮಾರ್, ಕಾಂಗ್ರೆಸ್ ಮುಖಂಡ ಹೊದಿಗೆರೆ ರಮೇಶ್, ತಾಲೂಕು ಬಿಜೆಪಿ ಮುಖಂಡ ಮಾಡಾಳು ಮಲ್ಲಿಕಾರ್ಜುನ್ ಮಾತನಾಡಿದರು. ಸಮಾರಂಭದಲ್ಲಿ ತಿಂಥಿಣಿಯ ಶ್ರೀ ಸಿದ್ದರಾಮನಂದಪುರಿ ಸ್ವಾಮೀಜಿ, ಶಿವಾನಂದಪುರಿ ಸ್ವಾಮೀಜಿ, ಚಿನ್ಮಯನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಾಲುಮತ ಸಮಾಜದ ಮುಖಂಡರಾದ ಸಿ.ಕೆ.ಎಚ್.ಮಹೇಶ್ವರಪ್ಪ, ಕೆ.ಆರ್.ಮಂಜುನಾಥ್, ಕೆ.ಆರ್.ಗೋಪಿ, ಕರಡೇರ್ ರಾಮಣ್ಣ, ರಾಜು ಕರಡೇರ್, ಮಂಜುನಾಥ್, ಸಿದ್ದಪ್ಪ, ದುಮ್ಮಪ್ಪ, ಆನೆಪ್ಪ, ಸಿ.ರಮೇಶ್, ಪುರಸಭಾ ಸದಸ್ಯರಾದ ಪಟ್ಲಿನಾಗರಾಜ್, ಪಾರಿ ಪರಮೇಶ್, ಮೊಟ್ಟೆ ಚಿಕ್ಕಣ್ಣ, ಜಯಲಕ್ಷ್ಮಿ, ಪರಮೇಶ್ವರಪ್ಪ, ಬೆಳಲಗೆರೆ ಶಿವಣ್ಣ,, ಪರಶುರಾಮ್, ಉಮಾರಾಜಣ್ಣ, ಬಸವರಾಜ್, ಲೋಕಣ್ಣ, ಸಿರಿ, ರಾಜಣ್ಣ ಸೇರಿ ಇತರರಿದ್ದರು.