ಸೌಹಾರ್ದ ಮಾನವ ಸರಪಳಿ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಹಾವೇರಿಭಾರತವು ಸೌಹಾರ್ದ ಹಾಗೂ ಸದ್ಭಾವದ ದೇಶವೆಂದು ಜಗತ್ತು ಕೊಂಡಾಡುತ್ತದೆ. ಭಾವೈಕ್ಯತೆಯೇ ನಮ್ಮ ಅಂತಸತ್ವವಾಗಿದೆ. ಈ ಭಾವೈಕ್ಯತೆ, ಸಾಮರಸ್ಯ ಇನ್ನು ಗಟ್ಟಿಗೊಳ್ಳುವ ಅಗತ್ಯವಿದೆ ಎಂದು ಹೊಸಮಠದ ಬಸವ ಶಾಂತಲಿಂಗ ಶ್ರೀಗಳು ಅಭಿಪ್ರಾಯ ಪಟ್ಟರು.
ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಮಂಗಳವಾರ ಸೌಹಾರ್ದ ಕರ್ನಾಟಕ ಹಾವೇರಿ ನೇತೃತ್ವದಲ್ಲಿ ನಡೆದ ಸೌಹಾರ್ದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಾಮರಸ್ಯ ಪರಂಪರೆಯು ಚಿರಸ್ಥಾಯಿಯಾಗಿ ಉಳಿಯಬೇಕು. ಹಲವಾರು ನಿಂದನೆ, ಅವಮಾನ ಎದುರಿಸಿದರೂ ಅನಿಷ್ಠ ಅಸ್ಪೃಶ್ಯತೆಯನ್ನು ತೊಲಗಿಸಲು ದಿಟ್ಟ ಹೆಜ್ಜೆ ಇಟ್ಟ ಗಾಂಧೀಜಿ ದೇಶಕ್ಕಾಗಿ ನಿಸ್ವಾರ್ಥ ಸೇವೆ ಮಾಡಿದರು ಎಂದು ಸ್ಮರಿಸಿದರು.ಹಲವು ಅವಯವಗಳನ್ನು ಹೊಂದಿರುವ ನಮ್ಮ ದೇಹದಂತೆ ದೇಶವು ಕೂಡ ಐಕ್ಯತೆ, ಸೌಹಾರ್ದತೆಯಿಂದ ಕೂಡಿರಬೇಕಾಗುತ್ತದೆ. ಮೇಲು ಕೀಳು, ಜಾತಿ ಭೇದ ತಾರತಮ್ಯವಿಲ್ಲದೇ ಜಾತ್ಯತೀತ ತತ್ವದಡಿಯಲ್ಲಿ ಪ್ರೀತಿಯಿಂದ ಈ ದೇಶವನ್ನು ಕಟ್ಟಿರುವುದನ್ನು ನಾವೆಲ್ಲರೂ ಉಳಿಸಿಕೊಳ್ಳಬೇಕಿದೆ ಎಂದು ಕರೆ ನೀಡಿದರು.
ಪ್ರಮುಖ ಬಸವರಾಜ ಹಾದಿಮನಿ ಮಾತನಾಡಿ, ಸೌಹಾರ್ದತೆಯ ಸಂದೇಶವನ್ನು ಬಲಪಡಿಸುವ ಸಂವಿಧಾನದ ಆಶಯದಂತೆ ದೇಶದ ಏಕತೆ, ಸಮಾನತೆ, ಬಂಧುತ್ವ, ಸಾರ್ವಭೌಮತ್ವ ಕಾಪಾಡುವುದು ಅತ್ಯಗತ್ಯವಾಗಿದೆ ಎಂದರು.ಈ ಸಂದರ್ಭದಲ್ಲಿ ಗೌರಿ ಮಠದ ಶ್ರೀ ಗುರುಪಾದಯ್ಯ ದೇವರು, ಸೇಂಟ್ ಆ್ಯನ್ ಚರ್ಚ್ ಪಾದ್ರಿ ಜೋಸೆಫ್ ಆಲಯ, ಮೌಲ್ವಿ ದಾದಾಪೀರ್ ಮುಲ್ಲಾ ಶಾಂತಿ, ಸೌಹಾರ್ದತೆಯ ಸಂದೇಶ ನೀಡಿದರು.
ಹಿರಿಯ ಸಾಹಿತಿ ಸತೀಶ ಕುಲಕರ್ಣಿ, ಹಸೀನಾ ಹೆಡಿಯಾಲ, ಪರಿಮಳ ಜೈನ್, ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ಜಿಲ್ಲಾ ಸಂಚಾಲಕ ನಾರಾಯಣ ಕಾಳೆ ಮಾತನಾಡಿದರು.ಮಹಾತ್ಮ ಗಾಂಧೀಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಗಾಂಧೀ ವೃತ್ತದಿಂದ ಹೊಸಮನಿ ಸಿದ್ದಪ್ಪ ವೃತ್ತದವರೆಗೂ ಭಾವೈಕ್ಯ ಮೆರವಣಿಗೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಎಸ್., ರೈತ ಮುಖಂಡರಾದ ಶಿವಬಸಪ್ಪ ಗೋವಿ, ಅಲೆಮಾರಿ ಸಂಘಟನೆಯ ಶೆಟ್ಟಿ ವಿಭೂತಿ, ಅಶೋಕ ಮರೆಣ್ಣನವರ, ನಿಂಗಪ್ಪ ಗಾಳೆಮ್ಮನವರ, ಎಂ.ಕೆ. ಮಕಬುಲ್, ಕಾರ್ಮಿಕ ಸಂಘಟನೆಯ ಮುಖಂಡ, ಜಿಲಾನಿ ಪಟವೇಗಾರ, ರಮೇಶ ಜಾಲಿಹಾಳ, ಶೋಭಾ ಮುದೇನೂರು ಇತರರು ಇದ್ದರು.