ಕನ್ನಡಪ್ರಭ ವಾರ್ತೆ ಆನಂದಪುರ
ಸಮಗ್ರ ಕೃಷಿ ಪದ್ಧತಿ ರೈತರ ಬದುಕಿನ ಭಾಗವಾಗಿರಬೇಕು ಎಂದು ಇರುವಕ್ಕಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಿಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್.ಸಿ ಜಗದೀಶ್ ತಿಳಿಸಿದರು.ಅವರು ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಿಗಳ ವಿಶ್ವವಿದ್ಯಾನಿಲಯದ ವಿಸ್ತರಣಾ ನಿರ್ದೇಶನಾಲಯ, ರೈತ ತರಬೇತಿ ಸಂಸ್ಥೆ ಇರುವಕ್ಕಿ ಮತ್ತು ಭಾರತೀಯ ಕೃಷಿ ಸಂಶೋಧನಾ ಪರಿಷತ್, ರಾಷ್ಟ್ರೀಯ ಪಶು ರೋಗ ಸೋಂಕು ಶಾಸ್ತ್ರ ಮತ್ತು ಮಾಹಿತಿ ವಿಜ್ಞಾನ ಸಂಸ್ಥೆ ಬೆಂಗಳೂರು ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಸಮಗ್ರ ಕೃಷಿ ಪದ್ಧತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿಯಲ್ಲಿ ವೈವಿಧ್ಯತೆ ಮತ್ತು ಮಾರುಕಟ್ಟೆಗೆ ಅನುಗುಣವಾಗಿ ಬೆಳೆಗಳನ್ನು ಬೆಳೆಯಬೇಕು. ಕೃಷಿ ಪದ್ಧತಿಯ ಬಗ್ಗೆ ವೈಜ್ಞಾನಿಕವಾಗಿ ಮಾಹಿತಿ ಪಡೆದುಕೊಳ್ಳುವುದರ ಜೊತೆಗೆ ರೈತರು ಸಮಗ್ರ ಕೃಷಿ ಪದ್ಧತಿಯನ್ನು ಅನುಸರಿಸಿದಾಗ ಮಾತ್ರ ಆರ್ಥಿಕವಾಗಿ ಸದೃಢರಾಗಲು ಸಾಧ್ಯ ಎಂದರು.ಡಾ. ಕೆ.ಟಿ ಗುರುಮೂರ್ತಿ ಮಾತನಾಡಿ, ರೈತರು ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡರೆ ತಮ್ಮ ಆರ್ಥಿಕ ಮೌಲ್ಯವನ್ನು ಹೆಚ್ಚಿಸಿಕೊಂಡು ಉತ್ತಮ ಬದುಕನ್ನು ಕಾಣಲು ಸಾಧ್ಯ. ಆದ್ದರಿಂದ ರೈತರು ತಮ್ಮ ಜಮೀನಿನಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಸಲು ಕೃಷಿ ತೋಟಗಾರಿಕೆ, ಪಶುಸಂಗೋಪನೆ, ಅರಣ್ಯ , ಮೀನುಗಾರಿಕೆ ಮೊದಲಾದವುಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬೇಕೆಂದರು.
ಕಾರ್ಯಕ್ರಮಕ್ಕೆ ಆಗಮಿಸಿದ 70ಕ್ಕೂ ಹೆಚ್ಚು ರೈತರಿಗೆ ಪಶು ಸಂಗೋಪನೆಯ ಪರಿಕರಗಳು ಮತ್ತು ತೋಟಗಾರಿಕಾ ಇಲಾಖೆಯ ಗಿಡಗಳಾದ ಮಾವು, ಸಪೋಟ, ಕಾಳು ಮೆಣಸು, ಜಾಯಿಕಾಯಿ, ಕೋ ಕೋ, ಅಡಿಕೆ ಮತ್ತು ಇನ್ನಿತರ ಗಿಡಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಕುಲ ಸಚಿವ ಡಾ. ಕೆ.ಸಿ ಶಶಿಧರ್, ಡಾ. ಎಮ್. ಅಶೋಕ್, ಡಾ. ಅರುಣ್ ಕುಮಾರ್, ಡಾ. ಕೃಷ್ಣಾರೆಡ್ಡಿ ಹಾಗೂ ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದರು.