ಕೊಪ್ಪಳ: ದೇಶಾದ್ಯಂತ ಇರುವ ವೀರಶೈವರನ್ನು ಸಂಘಟಿಸುವ ಕಾರ್ಯ ಆಗಬೇಕಿದ್ದು, ಪೂರೋಹಿತರನ್ನೊಳಗೊಂಡು ವೀರಶೈವರನ್ನು ಸಂಘಟಿಸಬೇಕು ಎಂದು ಕಾಶಿ ಜ್ಞಾನಸಿಂಹಾಸನಾಧೀಶ್ವರ ಮಹಾಪೀಠದ ಜಂಗಮವಾಡಿ ಮಠದ ಜಗದ್ಗುರು ಡಾ.ಚಂದ್ರಶೇಖರ್ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ನಗರದ ಗದಗ ರಸ್ತೆಯ ಸಪ್ತಲಿಂಗೇಶ್ವರ ದೇವಸ್ಥಾನದಲ್ಲಿ ರಾಜ್ಯ ವೀರಶೈವ ಜಂಗಮ ಅರ್ಚಕ ಪುರೋಹಿತರ ಸಂಘ,ಅಮರನಾಥ ಗುರುಕುಲ ಹಾಗೂ ಜಿಲ್ಲಾ ಸಂಘದ ಸಹಯೋಗದಲ್ಲಿ ನಡೆದ ಪ್ರಥಮ ರಾಷ್ಟ್ರಮಟ್ಟದ ಗುರು ಸಭಾರಿ ಪಟ್ಟಾಧಿಕಾರ, ಜಂಗಮ ಸೇವಾಧೀಕ್ಷಾ, ಶಾಂಭವಿಧೀಕ್ಷಾ ಹಾಗೂ ಧರ್ಮ ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಪುರೋಹಿತರನ್ನೊಳಗೊಂಡಂತೆ ಒಂದೇ ವೇದಿಕೆಗೆ ವೀರಶೈವರನ್ನು ತರಬೇಕು. ವೀರಶೈವರು ಭಾರತದ ಎಲ್ಲ ಭಾಗದಲ್ಲಿ ಪಸರಿಸಿದ್ದಾರೆ.ಉತ್ತರ ಭಾರತದ ರಾಜಸ್ಥಾನ, ಹರಿಯಾಣ, ಪಂಜಾಬ್ ಓಡಿಸಾದಲ್ಲಿಯೂ ವೀರಶೈವ ಸಮಾಜ ಸಂಘಟನೆ ಮಾಡಲಾಗಿದೆ. ಸಮಾಜದ ಜಂಗಮ ಮಕ್ಕಳಿಗೆ ವೈದಿಕ ಶಿಕ್ಷಣ, ಸಂಸ್ಕೃತ ಹಾಗೂ ಆಗಮಗಳ ಕುರಿತು ಕಲಿಸಬೇಕಿದೆ. ಕಾಶಿ ಪೀಠವು ಉತ್ತರ ಪ್ರದೇಶ, ಮಹಾರಾಷ್ಟ್ರದ ಲಾತೋರ್, ರಾಜ್ಯದಲ್ಲಿ ಗದಗ ಮತ್ತು ಬಿಸರಳ್ಳಿಯಲ್ಲಿ ವೈದಿಕ ವಿಧಿವಿಧಾನ ಕಲಿಸಲು ಪರಂಪರೆ ಆರಂಭಿಸಿದೆ. ಅಲ್ಲಿನ ಗುರುಕುಲದಲ್ಲಿ ವಸತಿ, ಬಟ್ಟೆ ಆಹಾರ ಒದಗಿಸಿ ಉತ್ತಮ ಶಿಕ್ಷಣ ಕೊಡುವ ಕೆಲಸ ಮಾಡಲಾಗುತ್ತಿದೆ. ದಾವಣಗೆರೆಯಲ್ಲೂ ಗುರುಕುಲ ಆರಂಭಿಸಿ ವಿದ್ಯೆ ಕಲಿಸಲಾಗುತ್ತಿದೆ. ಗುರುಕುಲಗಳ ಆರಂಭಕ್ಕೆ ಕಾಶಿ ಪೀಠವು ಸಹಕಾರ ನೀಡುತ್ತಿದೆ ಎಂದರು.
ನಾಡಿನಲ್ಲಿ ವೈದಿಕ ಪರಂಪರೆಯ ಏಕರೂಪವಾಗಬೇಕಿದೆ. ಮುಂದಿನ ದಿನದಲ್ಲಿ ಈ ಕಾರ್ಯಗಾರ ರಾಜ್ಯಕ್ಕೆ ಸೀಮಿತವಾಗಿಡದೇ ಮಹಾರಾಷ್ಟ್ರ,ತೆಲಂಗಾಣ,ಆಂಧ್ರಪ್ರದೇಶ, ಕೇರಳ ಹಾಗೂ ತಮಿಳುನಾಡಿನ ಅರ್ಚಕ ವೈದಿಕ ಅಭ್ಯಾಸಕ್ಕೆ ಸಂಸ್ಕೃತ ಕಲಿಕೆಯುವ ಅವಶ್ಯವಾಗಿದೆ. ಸಂಸ್ಕೃತ ಕಲಿತರೆ ಮಾತ್ರ ವೈದಿಕ ವಿದ್ಯೆ ನಿಮಗೆ ಬರಲಿದೆ. ಶ್ರೀಶೈಲದಲ್ಲಿ ಆ ಪದ್ಧತಿ ಇದೆ. ಪ್ರಸ್ತುತ ವಿದೇಶಗಳಿಂದಲೂ ವೈದಿಕ ಕಲಿಕೆಯ ಬೇಡಿಕೆ ಬರುತ್ತಿದೆ ಎಂದು ಹೇಳಿದರು.ಒಬ್ಬ ವ್ಯಕ್ತಿ ವಿದ್ಯೆ ಕಲಿಯಲು ತನ್ನ ಆಯಷ್ಯ ಮುಡಿಪಾಗಿಟ್ಟರೆ ಜಗತ್ತಿನ ಎಲ್ಲ ಮೂಲೆಗಳಿಂದ ಆಮಂತ್ರಣ ಬರಲಿವೆ. ನಿಮಗೆ ಗೌರವ ಸಿಗಲಿವೆ. ವೈದಿಕ ಕಲಿತರೆ ಉಪ ಜೀವನ ನಡೆಯಲ್ಲ ಎನ್ನುತ್ತಾರೆ. ಆದರೆ ವೈದ್ಯ, ಎಂಜಿನಿಯರ್ ಪಡೆಯುಷ್ಟು ಧನ ವೈದಿಕ ಓದಿದ ವ್ಯಕ್ತಿಯು ಪಡೆಯಬಲ್ಲ. ಇಲ್ಲಿ ದುಡ್ಡು ನಮಗೆ ಮುಖ್ಯವಲ್ಲ. ದೊಡ್ಡ ಸಂಪತ್ತು ಎಂದರೆ ಸನ್ಮಾನ. ನಮ್ಮ ವಿದ್ಯಯನ್ನು ಭಕ್ತರ ಕಲ್ಯಾಣಕ್ಕೆ ಮೀಸಲಿಡಬೇಕು ಎಂದರು.
ಪುರೋಹಿತ ಎಂದರೆ ಪುರ ಜನರ ಹಿತ ಬಯಸುವುದೇ ಪುರೋಹಿತವಾಗಿದೆ. ನಿಮ್ಮ ಹಿತ ಬದಿಗಿರಿಸಿ ಸರ್ವರ ಹಿತ ಬಯಸಬೇಕಾಗುತ್ತದೆ. ಭಕ್ತಿಯ ಪೂಜೆಯಿಂದ ಕಷ್ಟಗಳ ದೂರ ಮಾಡಲು ಸಾಧ್ಯ. ಪುರೋಹಿತನು ಹೀನ ಮನೋಭಾವನೆ ಮನಸ್ಸಿನಲ್ಲಿ ತಾರಲಾರದೆ ನಾನು ಪವಿತ್ರನಾಗಿದ್ದುಕೊಂಡು ಎಲ್ಲರನ್ನೂ ಪವಿತ್ರರನ್ನಾಗಿ ಮಾಡುವೆ ಎನ್ನುವ ಭಾವನೆ ತಾಳಬೇಕು.ನಾವು ವೈದಿಕ ಮಂತ್ರ ಕಲಿತರೆ ಸಾಲದು ಪ್ರತಿ ವ್ಯಕ್ತಿ ತನ್ನ ಆತ್ಮ ಕಲ್ಯಾಣದ ಜತೆಗೆ ಲೋಕ ಕಲ್ಯಾಣ ಮಾಡಿಕೊಳ್ಳಬೇಕು. ಸಿದ್ಧಾಂತ ಶಿಖಾಮಣಿ ಅಧ್ಯಯನ ಮಾಡಬೇಕು. ಹಿಂದೆ ಗುರುಕುಲ ಪದ್ಧತಿಯಿತ್ತು. ಈಗ ಕಲಿಯಲು ಆನ್‌ಲೈನ್ ಕಾಲ ಬಂದಿದೆ. ನಾವು ದೇಶ ವಿದೇಶದ ಜನರಿಗೆ ವೇದ ವಿದ್ಯೆ ಕಲಿಸುತ್ತಿದ್ದೇವೆ. ರಷ್ಯಾ ಕಾಶಿ ಪೀಠದಿಂದ ದೀಕ್ಷೆ ಪಡೆದ ಸಾವಿರಾರು ಜನರು ಅಲ್ಲಿ ಇದ್ದಾರೆ. ಇಷ್ಟಲಿಂಗ ಎಂದರೆ ನಮ್ಮ ಅನಿಷ್ಟ ದೂರ ಮಾಡುವ ದೇವರಾಗಿವೆ. ಜನಿಸಿದರೂ ಸತ್ತರೂ ಇಷ್ಟ ಲಿಂಗ ಜತೆಗೆ ಬರುತ್ತದೆ. ನಮ್ಮ ಮಕ್ಕಳಿಗೆ ನಾವೇ ಸಂಸ್ಕಾರ ಕಲಿಸಬೇಕು. ಧರ್ಮ ಗ್ರಂಥವಾದ ಸಿದ್ಧಾಂತ ಶಿಖಾಮಣಿ ಕಲಿಸುವ ಕೆಲಸವೂ ನಡೆಯಬೇಕು. ಅರ್ಚಕರು ಸಿದ್ಧಾಂತ ಶಿಖಾಮಣಿ ಕಲಿಯಬೇಕು. ಪಾರಾಯಣ ಮಾಡಿ ಗ್ರಂಥ ಅರ್ಥ ಮಾಡಿಕೊಳ್ಳಬೇಕು ಎಂದರು.ಡಾ.ವೈ.ಸಿ.ನಂಜುಡಯ್ಯ ಮಾತನಾಡಿ, ಇಂದು ಧರ್ಮದ ಬೆಳೆ ಬಾಡಿ ಹೋಗುತ್ತಿದೆ.ಅನಾಚಾರದ ಕರ್ಮದ ಕಳೆ ಬೆಳೆಯುತ್ತಿದೆ.ಸ್ವಾಮಿ ವಿವೇಕಾನಂದ ಅಂತವರ ಚಿಂತನೆಗಳು ಇನ್ನು ಬೆಳಕಿಗೆ ಬರಬೇಕಿದೆ. ವೀರಶೈವ ಧರ್ಮ ಬೆಳೆಯಬೇಕಿದೆ. ಈ ಸಮಾಜವು ಬೆಳೆಯಲಿ ಎಂದರು.
ಮುಖಂಡ ವಿ ಎಂ ಭೂಸನೂರಮಠ, ಸಿದ್ದಲಿಂಗಯ್ಯ ಮಾತನಾಡಿದರು. ಮೈಸೂರಿನ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳು, ಶ್ರೀ ಮರಳುಸಿದ್ದ ಶಿವಾಚಾರ್ಯರು, ಚಂದ್ರಶೇಖರ ಶಾಸ್ತ್ರೀಗಳು, ಡಾ.ಮಹಾದೇವಯ್ಯ, ವಿದ್ವಾನ್ ಚಂದ್ರಶೇಖರಯ್ಯ ಶಾಸ್ತ್ರಿಗಳು, ಗುರುಬಸಯ್ಯ, ಶ್ರೀ ಸಿದ್ದಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಮುಖಂಡ ರಾಜಶೇಖರ ಹಿಟ್ನಾಳ, ವೀರೇಶ ಮಹಾಂತಯ್ಯನಮಠ, ವಿರುಪಾಕ್ಷಪ್ಪ ಮೋರನಾಳ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.