ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ವರ್ಧಮಾನ ಪ್ಯಾರ ಮೆಡಿಕಲ್ ಕಾಲೇಜಿನಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿಸಿದ್ದ 110ನೇ ಸಂಸ್ಥಾಪನ ದಿನ ಉದ್ಘಾಟಿಸಿ ಮಾತನಾಡಿ, ನಾಡಪ್ರಭು ಕೆಂಪೇಗೌಡ ಅವರು ಕಟ್ಟಿದ ಬೆಂಗಳೂರಿನಲ್ಲಿ ಶೇ.30 ರಿಂದ 40 ರಷ್ಟು ಮಾತ್ರ ಕನ್ನಡಿಗರು ವಾಸವಿದ್ದಾರೆ. ಇನ್ನುಳಿದ ಶೇ.60 ಮಂದಿ ಅನ್ಯಭಾಷಿಕರು ಬೆಂಗಳೂರನ್ನು ಅವರಿಸಿಕೊಂಡಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಕನ್ನಡಿಗರಾದ ನಾವು ಅನ್ಯ ಭಾಷಿಕರನ್ನು ಸೌಹಾರ್ಧಯುತವಾಗಿ ಕೈಬೀಸಿ ಕರೆದು ಸ್ವಾಗತಿಸಿ ಅವರ ಭಾಷೆಯನ್ನು ಅನುಕರಿಸುತ್ತಿದ್ದೇವೆ. ಆದರೆ, ಅವರಿಗೆ ಕನ್ನಡ ಕಲಿಸುವ ಕೆಲಸವನ್ನು ನಾವು ಮಾಡದಿರುವುದು ಬೇಸರ ತಂದಿದೆ ಎಂದರು.ರಾಜ್ಯದಲ್ಲಿ ಅತಿ ಹೆಚ್ಚು ಕನ್ನಡ ಮಾತನಾಡುವ ಜಿಲ್ಲೆ ಮಂಡ್ಯದಲ್ಲಿ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆ ತಂದ ವಿಷಯ. ನನ್ನ ಜನ್ಮ ಭೂಮಿ ಬೇರೆಯಾದರು ಕರ್ಮ ಭೂಮಿ ಮಂಡ್ಯವಾಗಿದೆ. ನನ್ನ 18 ವರ್ಷ ಸೇವೆಯಲ್ಲಿ 9 ವರ್ಷ ಮಂಡ್ಯ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ್ದೇನೆ ಎಂದರು.
ನಾಡು, ನುಡಿ, ನೆಲ, ಜಲ, ಭಾಷೆಗೆ ಧಕ್ಕೆ ಬಂದಾಗ ನಮಗೆ ನ್ಯಾಯ ಸಿಗಲು ಬೀದಿಗಿಳಿದು ಹೋರಾಟ ಮಾಡಲೇಬೇಕು. ಕನ್ನಡ ಭಾಷೆ ಶ್ರೀಮಂತ ಭಾಷೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಪ್ರತಿಯೊಬ್ಬ ಕನ್ನಡಿಗನು ಪರಿಷತ್ತು ಪ್ರತಿಯೊಬ್ಬರೂ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಬೇಕು ಎಂದು ಮನವಿ ಮಾಡಿದರು.
ಕನ್ನಡಿಗರಾದ ನಾವೇ ಕನ್ನಡವನ್ನು ಕಡೆಗಣಿಸಿದರೆ ಮುಂದಿನ ದಿನಗಳಲ್ಲಿ ಕನ್ನಡ ನಾಡಿನಲ್ಲಿ ಕನ್ನಡ ಅಲ್ಪಸಂಖ್ಯಾ ಭಾಷೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಎಚ್ಚರಿಸಿದರು. ವಳಗೆರಹಳ್ಳಿ ಪ್ರಮೀಳ ವೀರಪ್ಪ ಪ್ರೌಢಶಾಲೆ ನಿವೃತ ದೈಹಿಕ ಶಿಕ್ಷಕ ದೇಶಹಳ್ಳಿ ಸಿದ್ದರಾಜು ಅವರನ್ನು ಅಭಿನಂದಿಸಲಾಯಿತು. ಕಲಾವಿದ ಮತ್ತು ಗಾಯಕ ಅಂಬರಹಳ್ಳಿ ಸ್ವಾಮಿ ಮತ್ತು ತಂಡದವರು ಕನ್ನಡ ಗೀತೆಗಳನ್ನು ಹಾಡುವ ಮೂಲಕ ರಂಜಿಸಿದರು.