ಕನ್ನಡ ಜ್ಞಾನ ವಿಶ್ವ ಮಟ್ಟದಲ್ಲಿ ಹರಡಲಿ: ರಾಜ್ಯಪಾಲ

KannadaprabhaNewsNetwork | Published : Apr 5, 2025 12:48 AM

ಸಾರಾಂಶ

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಜ್ಞಾನವನ್ನು ಹರಡಲು, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಕನ್ನಡದ ಹೆಚ್ಚು ಮೌಲ್ಯಯುತ ಪುಸ್ತಕಗಳನ್ನು ಅನುವಾದಿಸಿ ಪ್ರಕಟಿಸಬೇಕಿದೆ.

ಕನ್ನಡಪ್ರಭ ವಾರ್ತೆ ಹೊಸಪೇಟೆ

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಜ್ಞಾನವನ್ನು ಹರಡಲು, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಕನ್ನಡದ ಹೆಚ್ಚು ಮೌಲ್ಯಯುತ ಪುಸ್ತಕಗಳನ್ನು ಅನುವಾದಿಸಿ ಪ್ರಕಟಿಸಬೇಕಿದೆ ಎಂದು ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್‌ ಹೇಳಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ನವರಂಗ ಬಯಲು ರಂಗಮಂದಿರದಲ್ಲಿ ನಡೆದ 33ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಕನ್ನಡ ವಿವಿ ಪ್ರಸಾರಾಂಗವು ಕನ್ನಡದ ಜತೆಗೆ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಕೆಲವು ಅಮೂಲ್ಯ ಪುಸ್ತಕಗಳನ್ನು ಅನುವಾದಿಸಿ ಪ್ರಕಟಿಸಿದೆ ಎಂದು ತಿಳಿದು ನನಗೆ ಸಂತೋಷವಾಯಿತು. ಕನ್ನಡ ಜ್ಞಾನವನ್ನು ಇನ್ನಷ್ಟು ಹರಡಬೇಕು ಎಂದರು.

ವಿಶ್ವವಿದ್ಯಾನಿಲಯವು ಹತ್ತಿರದ ಐದು ಹಳ್ಳಿಗಳನ್ನು ದತ್ತು ತೆಗೆದುಕೊಂಡು ತನ್ನ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಯನ್ನು ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಿರುವುದು ಸೂಕ್ತವಾಗಿದೆ. ವಿಶ್ವವಿದ್ಯಾನಿಲಯ ಉದ್ದೇಶಿಸಿರುವ ಸಮುದಾಯ ಬಾನುಲಿ ಕೇಂದ್ರದ ಮೂಲಕ ಸಾಮಾಜಿಕ ಕಾರ್ಯಕ್ರಮಗಳನ್ನು ವಿಸ್ತರಿಸಲು ಅವಕಾಶವಿದೆ. ಹಂಪಿ ವಾಸ್ತುಶಿಲ್ಪ ಮತ್ತು ಶಿಲ್ಪಕಲೆ ಮಾದರಿಯಲ್ಲಿ ನಿರ್ಮಿಸಲಾದ ವಿಶ್ವವಿದ್ಯಾನಿಲಯದ ಅನೇಕ ಕಟ್ಟಡಗಳು ಇತಿಹಾಸವನ್ನು ನೆನಪಿಸುತ್ತವೆ. ಗಿರಿಸೀಮೆ ಆವರಣವು ಬುಡಕಟ್ಟು ಸಂಸ್ಕೃತಿಯನ್ನು ಚಿತ್ರಿಸುತ್ತದೆ, ದೇಶದ ಶಿಲ್ಪಕಲಾ ವೈಭವವನ್ನು ಮರುಸೃಷ್ಟಿಸುವ ಶಿಲ್ಪ. ವಿಶ್ವವಿದ್ಯಾನಿಲಯದ ವಸ್ತುಸಂಗ್ರಹಾಲಯವನ್ನು ಮತ್ತಷ್ಟು ಅಭಿವೃದ್ಧಿಪಡಿಸಬೇಕಾಗಿದೆ ಎಂದರು.ಘಟಿಕೋತ್ಸವದ ಮೆರವಣಿಗೆ:

ಕನ್ನಡ ವಿವಿಯ ಅಕ್ಷರ ಗ್ರಂಥಾಲಯದ ಬಳಿಯಿಂದ ಘಟಿಕೋತ್ಸವದ ಮೆರವಣಿಗೆ ಸಾಗಿ ಬಂತು. ಬಳಿಕ ಕಳಶ ಸ್ಥಾಪನೆ ಮಾಡಲಾಯಿತು. ನಾಡೋಜ ಗೌರವ ಪದವಿ, ಡಿ.ಲಿಟ್‌, ಪಿಎಚ್‌ಡಿ ಪದವಿ ಪ್ರದಾನ ಮಾಡಿದ ಬಳಿಕ, ಘಟಿಕೋತ್ಸವದ ಭಾಷಣ ಹಾಗೂ ಅತಿಥಿಗಳ ಭಾಷಣದ ಬಳಿಕ ಮೆರವಣಿಗೆ ನಿರ್ಗಮಿಸಿತು.

ದೇಸಿ ಮಾದರಿಯಲ್ಲಿ ಘಟಿಕೋತ್ಸವ:ಕನ್ನಡ ವಿವಿಯ ನುಡಿಹಬ್ಬ-ಘಟಿಕೋತ್ಸವ ದೇಸಿ ಸಂಸ್ಕೃತಿಯಲ್ಲಿ ನಡೆಯಿತು. ಗೌನ್‌ ಧರಿಸದೇ ಸಂಶೋಧನಾರ್ಥಿಗಳು ಹಾಗೂ ನಾಡೋಜ ಗೌರವ ಪದವಿ ಪುರಸ್ಕೃತರು ಶ್ವೇತವರ್ಣದ ಉಡುಪು ಧರಿಸಿ ಆಗಮಿಸಿದ್ದರು. ಇನ್ನೂ ಗಣ್ಯರು ಹಾಗೂ ಅತಿಥಿಗಳು ಕೂಡ ದೇಸಿ ಶ್ವೇತ ವರ್ಣದ ಉಡುಪು ಧರಿಸಿದ್ದರು.

ಕಿಕ್ಕಿರಿದು ತುಂಬಿದ್ದ ನವರಂಗ ಬಯಲು ಮಂದಿರ:ಕನ್ನಡ ವಿವಿಯ ನುಡಿಹಬ್ಬದಲ್ಲಿ 198 ಪಿಎಚ್‌ಡಿ ಸಂಶೋಧನಾರ್ಥಿಗಳು ಹಾಗೂ 7 ಜನ ಡಿಲಿಟ್‌ ಪದವಿ ಸ್ವೀಕಾರ ಮಾಡಿದ್ದರಿಂದ ಅವರ ಕುಟುಂಬ ಸದಸ್ಯರು ಸೇರಿದಂತೆ ಕನ್ನಡ ಅಭಿಮಾನಿಗಳು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿದ್ದರಿಂದ; ಘಟಿಕೋತ್ಸವ ನಡೆದ ನವರಂಗ ಬಯಲು ಮಂದಿರ ಕಿಕ್ಕಿರಿದು ತುಂಬಿತ್ತು.

ನಾಡೋಜ ಎಂದರೇನು?:ಕನ್ನಡ ವಿಶ್ವವಿದ್ಯಾಲಯ ಪ್ರತಿ ವರ್ಷ ಆಚರಿಸುವ ನುಡಿಹಬ್ಬದಲ್ಲಿ ಕರ್ನಾಟಕದ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆಯ ಕ್ಷೇತ್ರಗಳಿಗೆ ಮಹತ್ವದ ಕೊಡುಗೆಗಳನ್ನು ಕೊಟ್ಟಿರುವ ಗಣ್ಯರನ್ನು ಗುರುತಿಸಿ ಅವರಿಗೆ ನಾಡೋಜ ಗೌರವ ಪದವಿಯನ್ನು ನೀಡುತ್ತಾ ಬಂದಿದೆ. ಆದಿಕವಿ ಪಂಪನಿಗೆ ಸಂಬಂಧಿಸಿದ ನಾಡೋಜ ಎಂಬ ಪದವು ಕರ್ನಾಟಕದ ಪರಂಪರೆಯ ಸಾಹಿತ್ಯವನ್ನೂ, ನಾಡನ್ನು ಕಟ್ಟಿದವರು ಎಂಬ ಮನ್ನಣೆಯನ್ನೂ ಸೂಚಿಸುವಂತಾಗಿದೆ.

Share this article