ನೋಂದಣಿ ಪ್ರಕ್ರಿಯೆಯಲ್ಲಿ ಹೆಚ್ಚಿನ ರೈತರು ಭಾಗವಹಿಸಲಿ

KannadaprabhaNewsNetwork | Published : Nov 9, 2024 1:21 AM

ಸಾರಾಂಶ

ಭತ್ತ ಸರಬರಾಜು ಮಾಡಿದ ರೈತರಿಗೆ 15 ದಿನದೊಳಗೆ ಅವರ ಬ್ಯಾಂಕ್ ಖಾತೆಗೆ ಹಣ ನೇರ ನಗದು ವರ್ಗಾವಣೆ ಮುಖಾಂತರ ಪಾವತಿಸಬೇಕು

ಗದಗ: ಸರ್ಕಾರದ ಆದೇಶಾನುಸಾರ ಮುಂಗಾರು ಹಂಗಾಮಿನ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಎಫ್.ಎ.ಕ್ಯೂ ಗುಣಮಟ್ಟದ ಭತ್ತ ಉತ್ಪನ್ನ ಖರೀದಿಸಲು ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ನೋಂದಣಿ ಪ್ರಕ್ರಿಯೆಯಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕ್ರಮ ಕೈ ಗೊಳ್ಳಬೇಕೆಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ 2024-25ನೇ ಸಾಲಿನ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಭತ್ತ ಉತ್ಪನ ಖರೀದಿಸುವ ಕುರಿತು ಜಿಲ್ಲಾ ಟಾಸ್ಕ್ ಫೋರ್ಸ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಬೆಂಬಲ ಬೆಲೆ ಖರೀದಿ ಮಾರ್ಗಸೂಚಿಗಳನ್ವಯ ಭತ್ತ ಉತ್ಪನ್ನ ಖರೀದಿ ನೋಂದಣಿ ನ.15 ರಿಂದ ಡಿ.31ರ ಅವಧಿಯನ್ನು ನಿಗದಿಪಡಿಸಲಾಗಿದೆ. ಜಿಲ್ಲೆಯಲ್ಲಿ ತೆರೆಯಲಾಗುವ ಭತ್ತ ಉತ್ಪನ್ನ ಖರೀದಿ ಕೇಂದ್ರಗಳಲ್ಲಿ ಖರೀದಿಸಲಾಗುವ ಎಫ್‌ಎಕ್ಯೂ ಗುಣಮಟ್ಟ ಪರಿಶೀಲನೆಗೆ ಗ್ರೇಡರ್‌ ನೇಮಕ ಮಾಡಬೇಕು ಮತ್ತು ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಕುರಿತು ರೈತರಿಗೆ ತಿಳಿವಳಿಕೆ ನೀಡಲು ವ್ಯಾಪಕ ಪ್ರಚಾರ ಕೈಗೊಳ್ಳಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ಭತ್ತದ ಹಲ್ಲಿಂಗ್ ಕಾರ್ಯ ಕೈ ಗೊಳ್ಳಲು ಅಕ್ಕಿ ಗಿರಣಿಗಳು ನೊಂದಾಯಿಸಿಕೊಳ್ಳದಿದ್ದಲ್ಲಿ ಜಿಲ್ಲೆಯಲ್ಲಿ ಸಂಗ್ರಹಿಸಿದ ಭತ್ತ ಪಕ್ಕದ ಜಿಲ್ಲೆಯಲ್ಲಿ ನೋಂದಾಯಿತ ಅಕ್ಕಿ ಗಿರಣಿಗಳಿಗೆ ಸಾಗಾಣಿಕೆ ಮಾಡಿ ಭತ್ತದ ಹಲ್ಲಿಂಗ್ ಹಾಗೂ ಸಾರವರ್ಧಿತ ಕಾರ್ಯ ಕೈಗೊಳ್ಳಬೇಕು. ಭತ್ತ ಸರಬರಾಜು ಮಾಡಿದ ರೈತರಿಗೆ 15 ದಿನದೊಳಗೆ ಅವರ ಬ್ಯಾಂಕ್ ಖಾತೆಗೆ ಹಣ ನೇರ ನಗದು ವರ್ಗಾವಣೆ ಮುಖಾಂತರ ಪಾವತಿಸಬೇಕು. ಈ ಬಗ್ಗೆ ಜಂಟಿ ಕೃಷಿ ನಿರ್ದೇಶಕರು ಹಾಗೂ ರಾಜ್ಯ ಸಹಕಾರ ಮಾರಾಟ ಮಂಡಳದ ಜಿಲ್ಲಾ ಶಾಖಾ ವ್ಯವಸ್ಥಾಪಕರು ಕ್ರಮ ವಹಿಸುವಂತೆ ತಿಳಿಸಿದರು.

ಆಹಾರ ಇಲಾಖೆಯ ಜಂಟಿ ನಿರ್ದೇಶಕ ವಿನೋದಕುಮಾರ್ ಹೆಗ್ಗಳಗಿ ಮಾತನಾಡಿ, ಎಫ್.ಎ.ಕ್ಯೂ ಗುಣಮಟ್ಟದ ಭತ್ತ ಹುಟ್ಟುವಳಿಗೆ ಪ್ರತಿ ಕ್ವಿಂಟಲ್‌ಗೆ ಭತ್ತ ಸಾಮಾನ್ಯ ₹ 2300, ಭತ್ತ ಗ್ರೇಡ್ ಎ ₹2320 ಗಳಂತೆ ನಿಗದಿಪಡಿಸಲಾಗಿದೆ. ಕೇಂದ್ರ ಸರ್ಕಾರದ ಬೆಂಬಲ ಬೆಲೆ ಖರೀದಿ ಮಾರ್ಗಸೂಚಿಗಳನ್ವಯ ರಾಜ್ಯ ಸಹಕಾರ ಮಾರಾಟ ಮಹಾಮಂಡಳ (ಮಾರ್ಕಫೆಡ್ ) ಸಂಸ್ಥೆಯನ್ನು ರಾಜ್ಯದ ವತಿಯಿಂದ ಖರೀದಿ ಸಂಸ್ಥೆಯನ್ನಾಗಿ ನೇಮಿಸಿ ಆದೇಶಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಖರೀದಿ ಮಾರ್ಗಸೂಚಿಯನ್ವಯ ಮುಂಡರಗಿ ಎಪಿಎಂಸಿ ಪ್ರಾಂಗಣದಲ್ಲಿ ಭತ್ತ ಉತ್ಪನ ಖರೀದಿಸಲು ಖರೀದಿ ಕೇಂದ್ರ ತೆರೆಯಲು ತೀರ್ಮಾನಿಸಲಾಯಿತು.

ಈ ವೇಳೆ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಸಹಕಾರಿ ಸಂಘಗಳ ಉಪನಿಬಂಧಕರು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

Share this article