ಜನಜೀವನ ವಿಷದಿಂದ ಅಮೃತದತ್ತ ಸಾಗಲಿ: ರಾಘವೇಶ್ವರ ಶ್ರೀ ಆಶಯ

KannadaprabhaNewsNetwork |  
Published : Jul 24, 2025, 12:47 AM IST
ಗೋಫಲ  ಟ್ರಸ್ಟ್ ನಿಂದ ರಾಸಾಯನಿಕ ರಹಿತ ದಂತಮAಜನ 'ದಂತಸುರಭಿ' ಲೋಕಾರ್ಪಣೆ ಮಾಡುತ್ತಿರುವುದು  | Kannada Prabha

ಸಾರಾಂಶ

ಭಾರತೀಯ ಸಂಸ್ಕೃತಿಯಲ್ಲಿ ಸಂಸ್ಕಾರ- ಸಂಸ್ಕೃತಿಗೆ ಮಹತ್ವದ ಸ್ಥಾನವಿದೆ.

ಗೋಕರ್ಣ: ಭಾರತೀಯ ಸಂಸ್ಕೃತಿಯಲ್ಲಿ ಸಂಸ್ಕಾರ- ಸಂಸ್ಕೃತಿಗೆ ಮಹತ್ವದ ಸ್ಥಾನವಿದೆ. ಸಂಸ್ಕೃತಿ- ಸಂಸ್ಕಾರ ಬಿಟ್ಟರೆ ಮುಂದಿನ ಪೀಳಿಗೆ ರಾಕ್ಷಸ ಕುಲವಾಗಿ ಬೆಳೆಯಬಹುದು ಎಂದು ರಾಘವೇಶ್ವರ ಭಾರತೀ ಶ್ರೀ ನುಡಿದರು.

ಅಶೋಕೆಯಲ್ಲಿ ಚಾತುರ್ಮಾಸ್ಯ ವ್ರತಾಚರಣೆಯಲ್ಲಿರುವ ಶ್ರೀಗಳು ಬುಧವಾರ ಶ್ರೀರಾಮಚಂದ್ರಾಪುರ ಮಠದ ಅಧೀನದ ಗೋಫಲ ಟ್ರಸ್ಟ್ ಹೊಸದಾಗಿ ಅಭಿವೃದ್ಧಿಪಡಿಸಿರುವ ರಾಸಾಯನಿಕ ರಹಿತ ದಂತಮಂಜನ ''''''''ದಂತಸುರಭಿ'''''''' ಲೋಕಾರ್ಪಣೆ ಮಾಡಿ ಆಶೀರ್ವಚನ ಅನುಗ್ರಹಿಸಿದರು.

ಮಂಗಲ ದ್ರವ್ಯಗಳ ದರ್ಶನ, ಬಳಕೆಯಿಂದ ನಮ್ಮ ದಿನ ಆರಂಭವಾಗಬೇಕು ಎಂದು ಶಾಸ್ತ್ರ ಹೇಳುತ್ತದೆ. ಆದರೆ ಬೆಳಿಗ್ಗೆ ಎದ್ದ ತಕ್ಷಣ ವಿಷದೊಂದಿಗೇ ದಿನ ಆರಂಭಿಸುವ ಪದ್ಧತಿ ಬೆಳೆದಿದೆ. ದಂತಮಂಜನ ಹೆಸರಿನಲ್ಲಿ ವಿಷ, ಎಲುಬಿನ ಪುಡಿಯನ್ನು ಬಾಯಿಗೆ ಹಾಕಿಕೊಳ್ಳುತ್ತೇವೆ. ಆದರೆ ಗೋಫಲ ಟ್ರಸ್ಟ್ನ ವ್ಯಾಪಕ ಚಿಂತನೆ, ಸಾಮಾಜಿಕ ಹೊಣೆಗಾರಿಕೆಯ ಫಲವಾಗಿ ವಿಶ್ವಕ್ಕೆ ವಿಷಮುಕ್ತ, ರಾಸಾಯನಿಕ ರಹಿತ ದಂತಮಂಜನ ಲಭ್ಯವಾಗುತ್ತಿದೆ ಎಂದು ಬಣ್ಣಿಸಿದರು.

ಮಂಗಲದ್ರವ್ಯಗಳನ್ನೇ ಬಳಸಿಕೊಂಡು ಅಭಿವೃದ್ಧಿಪಡಿಸಿರುವ ದಂತಸುರಭಿ, ಸಮಾಜವನ್ನು ವಿಷಮುಕ್ತಗೊಳಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಎಂದು ಹೇಳಿದರು. ವಿಶ್ವಕ್ಕೆ, ಭಾರತೀಯರಿಗೆ, ಸನಾತನ ಸಮಾಜಕ್ಕೆ ಇದು ದೊಡ್ಡ ಕೊಡುಗೆ. ಜನರು ತಮ್ಮ ಜೀವನವನ್ನು ಶುಭಕರ ಮಾಡಿಕೊಳ್ಳಲು ಇಂಥ ವಿಷಮುಕ್ತ ಹಾದಿಯಲ್ಲಿ ನಡೆಯಬೇಕು ಎಂದು ಆಶಿಸಿದರು.

ಚಾತುರ್ಮಾಸ್ಯದ ಸಂದರ್ಭದಲ್ಲಿ ಸ್ವರ್ಣಪಾದುಕೆ ಸೇವೆ ಮಾಡಿಸಿದ ಹಾಲಕ್ಕಿ ಸಮಾಜದ ಶ್ರದ್ಧೆ- ನಿಷ್ಠೆಯನ್ನು ಶ್ಲಾಘಿಸಿದ ಶ್ರೀಗಳು, ಗೋಸೇವೆ ಮತ್ತು ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿಕೊಂಡು ಬಂದಿರುವ ಹಾಲಕ್ಕಿ ಸಮುದಾಯ ಅಪರೂಪದ ಹಾಗೂ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಇದು ಉಳಿಯಬೇಕು ಎಂದು ಸೂಚಿಸಿದರು.

ಮಲೆಮಹದೇಶ್ವರ ಬೆಟ್ಟದಲ್ಲಿ ಗೋಸಂಕುಲಕ್ಕೆ ಸಂಕಷ್ಟ ಎದುರಾದ ಸಂದರ್ಭದಲ್ಲಿ ಸಾವಿರಾರು ಗೋವುಗಳಿಗೆ ಶ್ರೀಮಠ ಮೇವು ಪೂರೈಸಿದ್ದನ್ನು ನೆನೆಸಿ ಪ್ರತಿ ವರ್ಷ ಚಾತುರ್ಮಾಸ್ಯಕ್ಕೆ ಆಗಮಿಸುವ ಕೊಳ್ಳೇಗಾಲ ತಾಲೂಕು ಹನೂರು, ಕೌದಳ್ಳಿಯ ರೈತರ ಮತ್ತು ಮಠದ ಅವಿನಾಭಾವ ಸಂಬಂಧವನ್ನು ವಿವರಿಸಿದ ಶ್ರೀಗಳು, ದೂರದ ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಗೋಸೇವೆಯ ಅವಕಾಶ ಶ್ರೀಮಠದ ಪಾಲಿಗೆ ಒದಗಿಬಂದದ್ದು ನಮ್ಮ ಸುದೈವ ಎಂದು ಹೇಳಿದರು.

ಅರಣ್ಯದಲ್ಲಿ ಗೋವುಗಳು ಮೇಯಲು ಅವಕಾಶವಿಲ್ಲ ಎಂದು ಅರಣ್ಯ ಸಚಿವರು ನೀಡಿದ ಹೇಳಿಕೆ ಪ್ರಸ್ತಾಪಿಸಿದ ಶ್ರೀಗಳು, ಗೋವುಗಳಿಂದ ಖಂಡಿತ ಅರಣ್ಯಕ್ಕೆ ಅಪಾಯವಿಲ್ಲ; ಅರಣ್ಯ ಪ್ರದೇಶ ಗೋವುಗಳ ಸಹಜ ಮೇವಿನ ತಾಣ. ಇದೀಗ ಗೋಮಾಳಗಳೂ ಇಲ್ಲವೆಂದ ಮೇಲೆ ಗೋವುಗಳು ಮೇಯಲು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು.

ಗೋವುಗಳ ಹಕ್ಕನ್ನು ಕಿತ್ತುಕೊಳ್ಳುವ ಪ್ರಯತ್ನವನ್ನು ಸರ್ಕಾರ ಮಾಡಬಾರದು. ಅರಣ್ಯದಲ್ಲಿ ಮೇಯಲು ಹೋದ ಗೋವುಗಳು ಪ್ರತಿಯಾಗಿ ಗೋಮೂತ್ರ ಮತ್ತು ಗೋಮಯದ ಮೂಲಕ ಅರಣ್ಯದ ಬೆಳವಣಿಗೆಗೆ ಪೂರಕವಾಗುತ್ತದೆ. ಖಂಡಿತ ಗೋಸಂಕುಲ ಅರಣ್ಯದ ಅಭಿವೃದ್ಧಿಗೆ ಪೂರಕವೇ ಹೊರತು ಮಾರಕವಲ್ಲ ಎಂದು ಪ್ರತಿಪಾದಿಸಿದರು.

ಗೋಪಾಲನೆಯನ್ನೇ ಜೀವನಾಧಾರವಾಗಿ ಹೊಂದಿರುವ ಬೆಟ್ಟದ ತಪ್ಪಲಿನ ಜನರ ಬದುಕು ಕಿತ್ತುಕೊಳ್ಳುವ ಪ್ರಯತ್ನ ಮಾಡಬೇಡಿ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡರು.

ಹೊಸ ಉತ್ಪನ್ನದ ಬಗ್ಗೆ ವಿವರ ನೀಡಿದ ಗೋಫಲ ಟ್ರಸ್ಟ್ ವ್ಯವಸ್ಥಾಪಕ ನಿರ್ದೇಶಕ ಬಾಲಸುಬ್ರಹ್ಮಣ್ಯ, ಗೋಮಯ ಭಸ್ಮ ಮತ್ತು ಇತರ ಆಯುರ್ವೇದ ಉತ್ಪನ್ನಗಳನ್ನು ಬಳಸಿ ಬಾಯಿ ಹಾಗೂ ಹಲ್ಲಿನ ರಕ್ಷಣೆಗಾಗಿ ದಂತಸುರಭಿ ಅಭಿವೃದ್ಧಿಪಡಿಸಲಾಗಿದೆ. ೨೧ ಆಯುರ್ವೇದ ವಸ್ತುಗಳನ್ನು ಬಳಸಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. ದಂತರಕ್ಷಣೆಗೆ ಅನಿವಾರ್ಯ ಎನ್ನಲಾದ ರಾಸಾಯನಿಕಗಳು, ಇತರ ದಂತಮಂಜನಗಳಲ್ಲಿ ಬಳಸುವ ಮರಳಿನ ಪುಡಿ ಅಥವಾ ಎಲುಬಿನ ಪುಡಿಯಿಂದ ಇದು ಮುಕ್ತವಾಗಿದೆ. ಯಾವುದೇ ಮಾರ್ಜಕಗಳನ್ನೂ ಇದರಲ್ಲಿ ಬಳಸಿಲ್ಲ " ಎಂದು ಸ್ಪಷ್ಟಪಿಸಿದರು.

ಬೆಂಗಳೂರಿನ ಡಾ.ವಿಶ್ವನಾಥ ಭಟ್ ದಂಪತಿ ಸರ್ವಸೇವೆ ನೆರವೇರಿಸಿದರು. ಗೋಫಲ ಟ್ರಸ್ಟ್ ಅಧ್ಯಕ್ಷ ಪದ್ಮನಾಭ ಭಟ್ ಕೊಂಕೋಡಿ, ಟ್ರಸ್ಟಿಗಳಾದ ಡಾ.ವೈ.ವಿ.ಕೃಷ್ಣಮೂರ್ತಿ, ಮುರಳೀಧರ ಪ್ರಭು, ಕೇಶವ ಪ್ರಸಾದ್ ಮುಳಿಯ, ವ್ಯವಸ್ಥಾಪಕ ನಿರ್ದೇಶಕ ಬಾಲಸುಬ್ರಹ್ಮಣ್ಯ, ಗೋವಿಂದ ಹೆಗಡೆ, ಶಶಿಶೇಖರ ಧರ್ಬೆ, ಕುಮಾರ್, ಪ್ರಕಾಶ ಕುಮಾರ್ ನಲ್ಕ, ಡಾ.ವಿದ್ಯಾ ಸರಸ್ವತಿ, ಅಖಿಲ ಭಾರತ ಆಯುರ್ವೇದ ಸಂಸ್ಥಾನದ ಅಂತರರಾಷ್ಟ್ರೀಯ ವಿಭಾಗದ ಪ್ರಾಧ್ಯಾಫಕ ಡಾ.ರಾಜಗೋಪಾಲ್, ವಿವಿವಿ ಆಡಳಿತಾಧಿಕಾರಿ ಡಾ.ಟಿ.ಜಿ.ಪ್ರಸನ್ನಕುಮಾರ್, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಹಾಲಕ್ಕಿ ಸಮಾಜದ ಮುಖಂಡರಾದ ಹನುಮಂತ ಗೌಡ್ರು ಬೆಳ್ಳಂಬರ, ಬಿ.ಎಸ್.ಗೌಡ್ರು, ಎಸ್.ಟಿ.ಗೌಡ್ರು, ಮಂಜುನಾಥ ಗೌಡ್ರು ಕೆಕ್ಕಾರು, ಶಂಕರಗೌಡ್ರು ಹೆಗ್ರೆ, ಸರ್ವಸಮಾಜದ ಸಂಯೋಜಕ ಕೆ.ಎನ್.ಹೆಗಡೆ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''