ಕೃಷ್ಣಾ ಮೇಲ್ದಂಡೆಗಾಗಿ ಸಿಎಂ ಮನೆ ಮುಂದೆ ಧರಣಿ ಮಾಡೋಣ: ಶಾಸಕ ಬಸನಗೌಡ ಪಾಟೀಲ ಯತ್ನಾಳ

KannadaprabhaNewsNetwork | Published : Dec 8, 2024 1:16 AM

ಸಾರಾಂಶ

ಯಾವುದೇ ಕಾರಣಕ್ಕೂ ಹಿಂಜರಿಯಬಾರದು. ಸಿಎಂ ಸಿದ್ದರಾಮಯ್ಯ ಮನೆ ಎದುರು ಧರಣಿ ಮಾಡಿಯಾದರೂ ಹೋರಾಟ ಮಾಡೋಣ. ಇದಕ್ಕೆ ಯಾರೂ ಹಿಂಜರಿಯುವ ಅಗತ್ಯವಿಲ್ಲ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕೃಷ್ಣಾ ಮೇಲ್ದಂಡೆ ಯೋಜನೆ ಹಿಂದುಳಿಯಲು ಎಲ್ಲ ಸರ್ಕಾರಗಳು ಕಾರಣವಾಗಿವೆ. ಈ ಸಾರಿ ಬೆಳಗಾವಿ ಅಧಿವೇಶನದಲ್ಲಿ ಪಕ್ಷಾತೀತವಾಗಿ ಧ್ವನಿ ಎತ್ತೋಣ. ಮೊದಲನೇ ದಿನವೇ ನನ್ನ ಕೂಗು ಆರಂಭವಾಗಲಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನವನಗರದ ಜಿಲ್ಲಾಡಳಿತ ಭವನದ ಮುಂಭಾಗ ನಡೆಯುತ್ತಿರುವ ಕೃಷ್ಣಾ ಮೇಲ್ದಂಡೆ ಯೋಜನೆ ಬಾಧಿತ ಸಂತ್ರಸ್ತರ ಹೋರಾಟಕ್ಕೆ ಬೆಂಬಲ ವ್ಯಕ್ತ ಪಡಿಸಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಹಿಂಜರಿಯಬಾರದು. ಸಿಎಂ ಸಿದ್ದರಾಮಯ್ಯ ಮನೆ ಎದುರು ಧರಣಿ ಮಾಡಿಯಾದರೂ ಹೋರಾಟ ಮಾಡೋಣ. ಇದಕ್ಕೆ ಯಾರೂ ಹಿಂಜರಿಯುವ ಅಗತ್ಯವಿಲ್ಲ. ನೀರು ಸಿಕ್ಕರೇ ಉದ್ಧಾರ ಆಗುತ್ತವೆ. ಇಲ್ಲ ಅಂದ್ರೇ ಇಲ್ಲ ಎಂದರು.

2018ರ ಸಂದರ್ಭದಲ್ಲಿ ಕುಮಾರಸ್ವಾಮಿ ಸರ್ಕಾರ ತೆಗೆಯಲು 17 ಶಾಸಕರು ಬರುತ್ತಾರೆ. ಅವರನ್ನು ಮಂತ್ರಿ ಮಾಡಬೇಕು ತಾವು ತ್ಯಾಗ ಮಾಡಿ ಅಂತ ಯಡಿಯೂರಪ್ಪ ಹೇಳಿದರು. ನಾನು, ಸುರಪುರ ಶಾಸಕ ರಾಜುಗೌಡ, ವೀರಣ್ಣ ಚರಂತಿಮಠ ದೆಹಲಿಯಲ್ಲಿ ಓಕೆ. ನಮಗೆ ಮಂತ್ರಿ, ಕಾರು ಏನು ಬೇಡ. ಕೃಷ್ಣೆಗೆ ₹25 ಸಾವಿರ ಕೋಟಿ ಕೊಡಿ ಅಂದೆವು. ಯಡಿಯೂರಪ್ಪ ಸರ್ಕಾರ ಬಂತು. ಬಜೆಟ್ ಘೋಷಣೆ ಆಯ್ತು. ಒಂದು ರು. ಕೊಡಲಿಲ್ಲ. ನಾನು ಹಿಂದೆ ಮುಂದೆ ನೋಡಲಿಲ್ಲ. ಯಡಿಯೂರಪ್ಪಗೆ ಪ್ರಶ್ನೆ ಮಾಡಿದೆ. ತರುವಾಯ ಸಚಿವ ಗೋವಿಂದ ಕಾರಜೋಳ ಒತ್ತಡ ಹಾಕಿ ₹10 ಸಾವಿರ ಕೋಟಿ ಘೋಷಣೆ ಮಾಡಿದರು. ನಾವು ಹೋರಾಟ ಮಾಡದ ಹೊರತು ಬಿಡಿಗಾಸೂ ಸಿಗಲ್ಲ ಎಂದು ತಿಳಿಸಿದರು.

ನೀರಾವರಿ ಮಂತ್ರಿ ಆಗೋಕೆ ಬಡಿದಾಡುತ್ತಾರೆ. ಯಾಕಂದ್ರ ಕಮಿಷನ್ ಹೊಡೆಯೋಕೆ. ಆಲಮಟ್ಟಿ ಆಣೆಕಟ್ಟು ನಿರ್ಮಿಸಲು ನಡೆದ ಭ್ರಷ್ಟಾಚಾರ ನೋಡಿದ್ರೇ ಇನ್ನೂ 10 ಡ್ಯಾಂ ನಿರ್ಮಿಸಬಹುದಿತ್ತು. ದುರಂತ ಯಾವುದರ ಆಸ್ತಿ ಮಾರಿ ಪರಿಹಾರ ಧನ ಕೊಡೋದು ಬೇಡ. ತನಿಖೆ ಮಾಡಿ ತಿಮಿಂಗಲ ಭೇಟಿ ಆಡಿದ್ರೆ ₹1 ಲಕ್ಷ ಕೋಟಿ ಬರುತ್ತೆ. ಅದನ್ನು ವಸೂಲಿ ಮಾಡಿದ್ರೆ ಒಂದೇ ವರ್ಷದಾಗ ಡ್ಯಾಂ ಕೆಲಸ, ಭೂ ಸ್ವಾಧೀನ ಮುಗಿಯುತ್ತೆ ಎಂದ ಯತ್ನಾಳ, ಎಂ.ಬಿ.ಪಾಟೀಲ, ಎಚ್.ಕೆ. ಪಾಟೀಲರು ಮಾಡಿದ ನೀರಾವರಿ ಕೆಲಸಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ವೇದಿಕೆ ಮೇಲೆ ಚರಂತಿಮಠ ಪ್ರಭುಸ್ವಾಮೀಜಿ, ಮಾಜಿ ಸಚಿವ ಎಸ್.ಆರ್.ಪಾಟೀಲ, ಸಮಿತಿ ಗೌರವಾಧ್ಯಕ್ಷ ಅಜಯಕುಮಾರ ಸರನಾಯಕ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಆನಂದ ನ್ಯಾಮಗೌಡ ಇದ್ದರು.

Share this article