ಗದಗ: ವ್ಯಕ್ತಿ ಪರಿಪೂರ್ಣವಾಗಲು ಜ್ಞಾನ ಹಾಗೂ ಇಚ್ಛಾಶಕ್ತಿ ಅತ್ಯಗತ್ಯವಾಗಿದ್ದು. ಗ್ರಾಮೀಣ ಕಲೆ ಉಳಿಸಿ ಬೆಳೆಸುವ ಪ್ರಯತ್ನ ನಾವೆಲ್ಲರೂ ಮಾಡಬೇಕಿದೆ ಎಂದು ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಪತಿ ಡಾ. ಸುರೇಶ್ ನಾಡಗೌಡರ ಹೇಳಿದರು.
ಅವರು ಗದಗ ತಾಲೂಕಿನ ನಾಗಾವಿಯ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಗ್ರಾಮ ಗಂಗೋತ್ರಿ ಆವರಣದ ಕೌಶಲ್ಯ ವಿಕಾಸ ಭವನದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರು ಹಾಗೂ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಜರುಗಿದ ಲಾವಣಿ ಹಾಗೂ ಗೀಗಿ ಪದ ಶಿಬಿರದ ಸಮಾರೋಪ ಮತ್ತು ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ವಿಶ್ವವಿದ್ಯಾಲಯದ ಉದ್ದೇಶ ಗ್ರಾಮೀಣ ಬೇರು ಜಾಗತಿಕ ಮೇರು ಎಂಬುದಾಗಿದೆ.ಗ್ರಾಮೀಣ ಕಲೆಗಳಾದ ಲಾವಣಿ ಪದ ಗೀಗಿ ಪದ ಜನಪದ ಇವೆಲ್ಲವುಗಳನ್ನು ಯುವ ಪೀಳಿಗೆಗೆ ಕಲಿಸಿಕೊಡುವ ಪ್ರಯತ್ನ ಸಾಗಿದ್ದು ಉತ್ತಮವಾಗಿದೆ. ನಮ್ಮ ವ್ಯಕ್ತಿತ್ವದ ಸರ್ವಾಂಗಣ ಅಭಿವೃದ್ಧಿಗೆ ಹಾಗೂ ವಿಕಾಸಕ್ಕೆ ನಮ್ಮ ನಾಡಿನ ಸಂಸ್ಕೃತಿ ಜನಪದ ಕಲೆಗಳು ಪೂರಕವಾಗಿವೆ. ಗ್ರಾಮೀಣ ಕಲೆ ಸಂಸ್ಕೃತಿ ಕುರಿತಂತೆ ಹಲವಾರು ಕಾರ್ಯಕ್ರಮ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದು ಅಂತಹ ಕಾರ್ಯಕ್ರಮಕ್ಕೆ ವಿಶ್ವವಿದ್ಯಾಲಯ ಸದಾ ಸಹಕಾರ ನೀಡಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿವೇಕಾನಂದ ಗೌಡ ಪಾಟೀಲ ಮಾತನಾಡಿ, ಹಂತಿ ಪದ, ಗೀಗಿ ಪದ ಸೇರಿದಂತೆ ಜನಪದ ಉಳಿಸಿ ಬೆಳೆಸುವ ಮೂಲಕ ನಮ್ಮ ನಾಡಿನ ಕಲೆ ಪರಂಪರೆ ಯುವ ಪೀಳಿಗೆಗೆ ಪರಿಚಯಿಸಿ ಪ್ರೋತ್ಸಾಹಿಸಿ ಬೆಳೆಸುವ ಕೆಲಸ ಆಗಬೇಕಿದೆ ಎಂದರು.ಬನಹಟ್ಟಿಯ ಜನಪದ ವಿದ್ವಾಂಸರು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿ.ಆರ್. ಪೊಲೀಸಪಾಟೀಲ ಲಾವಣಿ ಮತ್ತು ಗಿಗಿ ಪದ ಕಲೆಯ ಪ್ರಸ್ತುತ ಕುರಿತಂತೆ ಮಾಡಿದರು.
ಸಂಸ್ಕೃತಿ ಚಿಂತಕ ಡಾ. ಜಿ.ಬಿ.ಪಾಟೀಲ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ವಸಂತ ಮಡ್ಲೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಬಿ.ಹಿರೇಮಠ ಉಪಸ್ಥಿತರಿದ್ದರು.ಹಿರಿಯ ಕಲಾವಿದರಾದ ಯಲ್ಲವ್ವ ಸಾಲಿಮನಿ, ಲಕ್ಷ್ಮೀಬಾಯಿ ಮಾದರ, ಸಾವಿತ್ರಿಬಾಯಿ ಪೂಜಾರ, ಬಸವರಾಜ್ ಹಡಗಲಿ, ನಿಂಗಪ್ಪ ದಿಂಡೂರ, ವೀರಣ್ಣ ಅಂಗಡಿ ಸೇರಿದಂತೆ ಇತರರನ್ನು ಸನ್ಮಾನಿಸಲಾಯಿತು.
ಜಾನಪದ ಅಕಾಡೆಮಿ ಸದಸ್ಯ ಶಂಕ್ರಣ್ಣ ಸಂಕಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೌನೇಶ್ ಬಡಿಗೇರ ಸ್ವಾಗತಿಸಿದರು. ಚಂದ್ರಪ್ಪ ಬಾರಂಗಿ ವಂದಿಸಿದರು, ಸಂಜಯಕುಮಾರ್ ಹಾರೋಬಿಡಿ ನಿರೂಪಿಸಿದರು.