- ಅಮೃತಾಪುರದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ, ಪ್ರತಿಜ್ಞಾ ವಿಧಿಕನ್ನಡಪ್ರಭ ವಾರ್ತೆ ಹೊಳಲ್ಕೆರೆ ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶ. ಮತದಾನವೇ ಶ್ರೇಷ್ಠ ದಾನ. ಪ್ರಜೆಗಳು ಮತದಾನ ಮಾಡಿ ಆಯ್ಕೆ ಮಾಡುವ ಪ್ರತಿನಿಧಿಗಳಿಂದ ಭಾರತದ ಭವಿಷ್ಯ ನಿರ್ಧಾರವಾಗುತ್ತದೆ. ಯೋಗ್ಯ ನಾಯಕರ ಆಯ್ಕೆಗೆ ಮತ್ತು ಶ್ರೇಷ್ಠ ಭಾರತ ನಿರ್ಮಾಣಕ್ಕೆ ತಪ್ಪದೇ ಮತದಾನ ಮಾಡೋಣ ಎಂದು ಅಮೃತಾಪುರ ಮತಗಟ್ಟೆ ಅಧಿಕಾರಿ ಟಿ.ಪಿ.ಉಮೇಶ್ ಹೇಳಿದರು.
ತಾಲ್ಲೂಕಿನ ಅಮೃತಾಪುರದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಅವರು ಮಾತನಾಡಿ, ಕಾಲಕಾಲಕ್ಕೆ ನಡೆಯುವ ಚುನಾವಣೆಗಳಲ್ಲಿ ಅರ್ಹ ಮತದಾರರಿಂದ ಮತದಾನದ ಮೂಲಕ ಸ್ಥಳೀಯ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರಚನೆಗೊಳ್ಳುತ್ತವೆ. ಸರ್ಕಾರಗಳು ಪ್ರಜಾ ಪ್ರತಿನಿಧಿಗಳಿಂದ ನಿಯಂತ್ರಣಕ್ಕೊಳಪಟ್ಟು ದೇಶದ ಎಲ್ಲ ಜನರಿಗೆ ನ್ಯಾಯಸಮ್ಮತವಾದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ನ್ಯಾಯಿಕ ಹಾಗೂ ರಾಜಕೀಯ ಹಕ್ಕುಗಳನ್ನು ದೊರಕಿಸಿಕೊಡಲು ಶ್ರಮಿಸುತ್ತದೆ.ಭಾರತ ಚುನಾವಣಾ ಆಯೋಗ ಸ್ವತಂತ್ರ ಸಾಂವಿಧಾನಿಕ ಸಂಸ್ಥೆಯಾಗಿದ್ದು, ಅದು ರಚನೆಗೊಂಡು ಇಂದಿಗೆ ಎಪ್ಪತ್ತೈದು ವರ್ಷಗಳಾಗಿವೆ. ಚುನಾವಣಾ ಆಯೋಗದ ರಚನೆ ಸಂಸ್ಮರಣೆಗಾಗಿ ಹಾಗೂ ಮತದಾನ ಜಾಗೃತಿಗಾಗಿ ಪ್ರತಿವರ್ಷ ರಾಷ್ಟ್ರೀಯ ಮತದಾರರ ದಿನಾಚರಣೆ ಆಚರಿಸುವೆವು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಯುವ ಮತದಾರರಿಗೆ ಚುನಾವಣೆ ಗುರುತಿನ ಚೀಟಿ ವಿತರಿಸಲಾಯಿತು. ಎಲ್ಲ ಮತದಾರರಿಗೂ, ಗ್ರಾಮಸ್ಥರಿಗೂ ಮತದಾರರ ಪ್ರತಿಜ್ಞಾ ವಿಧಿ ಬೋಧಿಸ ಲಾಯಿತು. ಅಮೃತಾಪುರ ಸರ್ಕಲ್ ಗ್ರಾಮ ಆಡಳಿತಾಧಿಕಾರಿ ರಾಜು, ಮುಖ್ಯಶಿಕ್ಷಕ ಡಿ.ಸಿದ್ಧಪ್ಪ, ಸಹಶಿಕ್ಷಕರಾದ ಟಿ.ಪಿ.ಉಮೇಶ್, ಜಿ.ಎನ್.ರೇಷ್ಮಾ ಹಾಗೂ ಗ್ರಾಮಸ್ಥರಾದ ತಿಮ್ಮಮ್ಮ, ಶಾರದಮ್ಮ, ಸುಮ, ವೆಂಕಟೇಶ್ ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು ಚಿತ್ರಮಾಹಿತಿ: 26 ಹೆಚ್ ಎಲ್ ಕೆ 5: ತಾಲ್ಲೂಕಿನ ಅಮೃತಾಪುರದಲ್ಲಿ ಗ್ರಾಮಸ್ಥರಿಗೂ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.