ಕನ್ನಡಪ್ರಭ ವಾರ್ತೆ ಹೊಸಪೇಟೆ
ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು, ಪದಾಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳು ಪಕ್ಷವನ್ನು ಸಂಘಟನೆ ಮೂಲಕ ಮತ್ತಷ್ಟು ಬಲಪಡಿಸುವುದು ಜನಪ್ರತಿನಿಧಿಗಳಾದ ತಮ್ಮ ಆದ್ಯ ಕರ್ತವ್ಯ. ಸಂಘಟನಾತ್ಮಕವಾಗಿ ಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸೋಣ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್ ತಿಳಿಸಿದರು.ಜಿಲ್ಲಾ ಬಿಜೆಪಿ ವತಿಯಿಂದ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಪುರಸಭೆ, ಪಟ್ಟಣ ಪಂಚಾಯಿತಿಗಳ ಬಿಜೆಪಿ ಸದಸ್ಯರಿಗೆ ಬುಧವಾರ ಹಮ್ಮಿಕೊಂಡಿದ್ದ ಪ್ರಶಿಕ್ಷಣ ವರ್ಗ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕರ್ತರೇ ಬಿಜೆಪಿಯ ಜೀವಾಳ. ಸ್ಥಳೀಯ ಸಂಸ್ಥೆಗಳಿಗೆ ಆಯ್ಕೆಯಾಗಿರುವ ಬಿಜೆಪಿ ಬೆಂಬಲಿತ ಎಲ್ಲ ಸದಸ್ಯರು ಸಹ ಸಂಘಟನೆಯಲ್ಲಿ ತೊಡಗಿಕೊಂಡು ಮನೆ ಮನೆಗೆ ಬಿಜೆಪಿ ತಲುಪಿಸಿ ಲೋಕಸಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಗೆಲ್ಲಿಸೋಣ. ಆ ಮೂಲಕ ಮೂರನೇ ಬಾರಿಗೆ ಮೋದಿಜಿ ಅವರನ್ನು ಮತ್ತೆ ಪ್ರಧಾನಿಯನ್ನಾಗಿ ಮಾಡೋಣ ಎಂದರು.ಸಂಸದ ದೇವೇಂದ್ರಪ್ಪ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಪಕ್ಷ ಯಾರಿಗೇ ಟಿಕೆಟ್ ನೀಡಿದರೂ ಅವರ ಪರವಾಗಿ ನಾನು ಸಹ ಚುನಾವಣೆಯಲ್ಲಿ ಕೆಲಸ ಮಾಡಿ ಗೆಲ್ಲಿಸುತ್ತೇನೆ. ನಾನು ಸಹ ಎರಡನೆ ಬಾರಿಗೆ ಆಕಾಂಕ್ಷಿಯಾಗಿದ್ದೇನೆ. ಆದರೆ ಪಕ್ಷದ ತೀರ್ಮಾನಕ್ಕೆ ಬದ್ಧನಾಗಿದ್ದೇನೆ. ಯಾರಿಗೇ ಕೊಟ್ಟರೂ ಸಂಪೂರ್ಣ ಸಹಕಾರ, ಬೆಂಬಲ ಇದೆ ಎಂದರು.
ಬಳ್ಳಾರಿ ವಿಭಾಗ ಸಂಘಟನಾ ಕಾರ್ಯದರ್ಶಿ ಪೂಜಪ್ಪ ಮಾತನಾಡಿ, ಬಿಜೆಪಿ ಕಾರ್ಯಕರ್ತರ ಪಕ್ಷ. ಸಂಘಟನೆಯೆ ನಮ್ಮ ಪಕ್ಷದ ಬಲ. ಹೀಗಾಗಿ ನಾವೆಲ್ಲ ಪಕ್ಷ ಸಂಘಟನೆಯಲ್ಲಿ ಸದಾ ತೊಡಗೋಣ. ವಿಧಾನಸಭೆ ಚುನಾವಣೆಯಲ್ಲಿ ಸೋತಾಕ್ಷಣ ನಾವು ಎಲ್ಲವನ್ನು ಕಳೆದುಕೊಂಡಂತಲ್ಲ. ಅದು ತಾತ್ಕಾಲಿಕ ಹಿನ್ನಡೆಯಷ್ಟೆ ಎಂದರು.ಪಕ್ಷದ ಇತಿಹಾಸ, ಸಿದ್ಧಾಂತ ಮತ್ತು ಸಮನ್ವಯ ಕುರಿತು ಜಿ. ವಿರೂಪಾಕ್ಷಗೌಡ, ಕೇಂದ್ರ ಸರ್ಕಾರದ ಅಂತ್ಯೋದಯ ಯೋಜನೆಗಳು ಮತ್ತು ಅನುಷ್ಠಾನ, ಮೋದಿಜಿಯವರ ನಾಯಕತ್ವ ಮತ್ತು ಬದಲಾದ ಭಾರತ ಕುರಿತು ಎಸ್. ವಿಶ್ವನಾಥ ಭಟ್, ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮ ನಿರ್ವಹಣೆ ಕುರಿತು ನರೇಂದ್ರಮೂರ್ತಿ ಹಾಗೂ ಸಾಮಾನ್ಯ ಶಿಷ್ಟಾಚಾರ ಮತ್ತು ಕುಶಲ ಜನಪ್ರತಿನಿಧಿ ವಿಷಯ ಕುರಿತು ಡಾ. ಎ.ಎಚ್. ಶಿವಯೋಗಿಸ್ವಾಮಿ ಅವರು ಮಾರ್ಗದರ್ಶನ ಮಾಡಿದರು.
ಬಿಜೆಪಿ ವಿಜಯನಗರ ಜಿಲ್ಲಾ ಪ್ರಭಾರಿ ಗಿರಿಗೌಡ, ಪ್ರಶಿಕ್ಷಣ ಕಾರ್ಯಕ್ರಮದ ಪ್ರಮುಖ ಸಿದ್ದಾರ್ಥ ಸಿಂಗ್, ಸಹ ಪ್ರಮುಖ ಬಲ್ಲಾಹುಣ್ಸಿ ರಾಮಣ್ಣ, ವಿರೂಪಾಕ್ಷಗೌಡ್ರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಸ್. ರಾಘವೇಂದ್ರ, ಜಿಲ್ಲಾ ಮಾಧ್ಯಮ ಸಂಚಾಲಕ ಸತ್ಯನಾರಾಯಣ, ಮಂಡಲ ಅಧ್ಯಕ್ಷ ಕಸೆಟ್ಟಿ ಉಮಾಪತಿ ಸೇರಿ ಇತರರಿದ್ದರು.ಸಂಘಟನೆ ಬಲಪಡಿಸಿ:
ಕಳೆದ ಚುನಾವಣೆಯಲ್ಲಿ ಆದ ಅಲ್ಪ ಹಿನ್ನಡೆಯಿಂದ ಹೊರಬಂದು ಪಕ್ಷವನ್ನು ಸಮರ್ಥವಾಗಿ ಸಂಘಟಿಸೋಣ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಶಿವಯೋಗಿಸ್ವಾಮಿ ಹೇಳಿದರು.ಬಿಜೆಪಿ ಪ್ರಶಿಕ್ಷಣ ವರ್ಗದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಬಿಜೆಪಿ ಮೊದಲಿನಿಂದಲೂ ತಳಮಟ್ಟದಿಂದ ಬೆಳೆದುಬಂದ ಪಕ್ಷ. ನಮ್ಮದು ತತ್ವ ಸಿದ್ಧಾಂತ ಹೊಂದಿರುವ ಸಮರ್ಥ ಪಕ್ಷವಾಗಿದೆ. ನಾವೆಲ್ಲ ವಿದ್ಯಾರ್ಥಿ ದೆಸೆಯಿಂದಲೇ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೆವು. ಅಂದಿನಿಂದ ಇಂದಿನವರೆಗೂ ಪಕ್ಷ ಬೆಳೆದುಬಂದ ದಾರಿ ಕಂಡಿದ್ದೇವೆ. ತಾತ್ಕಾಲಿಕ ಹಿನ್ನಡೆಗೆ ಎಂದಿಗೂ ಎದೆಗುಂದದೆ ಮುಂದೆ ಸಾಗೋಣ ಎಂದರು.