ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಪಂ ವತಿಯಿಂದ ಜಿಲ್ಲೆಯ ಎಲ್ಲಾ 101 ಗ್ರಾಮ ಪಂಚಾಯಿತಿಗಳಲ್ಲಿ ಮೇ 1ರಿಂದ ಒಂದು ತಿಂಗಳ ಕಾಲ ಕೂಲಿಕಾರರಿಗೆ 100 ದಿನಗಳ ಕೆಲಸ ಒದಗಿಸಲು "ದುಡಿಯೋಣ ಬಾ” ಅಭಿಯಾನ ಕೈಗೊಳ್ಳಲಾಗಿದೆ ಎಂದು ಜಿಪಂ ಸಿಇಒ ಡಾ.ಕೆ.ಎನ್.ಅನುರಾಧ ತಿಳಿಸಿದ್ದಾರೆ.
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸ್ಥಳೀಯ ಗ್ರಾಮೀಣ ಜನರಿಗೆ ನಿರಂತರ ಕೆಲಸವನ್ನು ಒದಗಿಸಲು ಕಾರ್ಯಕ್ರಮವನ್ನು ರೂಪಿಸಲಾಗಿದ್ದು ಇದರ ಸದುಪಯೋಗವನ್ನು ಗ್ರಾಮೀಣ ಭಾಗದ ಉದ್ಯೋಗ ಚೀಟಿಯನ್ನು ಹೊಂದಿರುವ ಸಣ್ಣ ರೈತರು, ಅತಿ ಸಣ್ಣ ರೈತರು ಮತ್ತು ಕೂಲಿಕಾರರು ನರೇಗಾ ಯೋಜನೆಯ ಸದುಪಯೋಗ ಪಡೆದುಕೊಳ್ಳುತ್ತಿದ್ದು ನಿರಂತರವಾಗಿ ಅಕುಶಲ ಕೆಲಸವನ್ನು ಒದಗಿಸುತ್ತಿರುವ ಬಗ್ಗೆ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಹೇಳಿದರು.ದುಡಿಯೋಣ ಬಾ ಅಭಿಯಾನದಡಿ ವ್ಯಾಪಕ ಜನಜಾಗೃತಿ ಮೂಡಿಸಲು ಕರಪತ್ರಗಳ ವಿತರಣೆ ಗ್ರಾಮಮಟ್ಟದಲ್ಲಿ ಮನೆಮನೆ ಭೇಟಿ ಮಹಿಳಾ ಸಂಘದ ಸದಸ್ಯರ ಸಭೆಗಳಲ್ಲಿ ಮಾಹಿತಿ ವಿತರಣೆ, ಆಟೋ, ಸ್ವಚ್ಛತಾ ವಾಹಿನಿ ಮುಖಾಂತರ ಪ್ರಚಾರವನ್ನು ಮಾಡಲಾಗುತ್ತಿದೆ. ನರೇಗಾ ಯೋಜನೆಯಡಿ ನೋಂದಾಯಿತ ಕುಟುಂಬಗಳಿಂದ ಮತ್ತು ಅಕುಶಲ ಕೆಲಸಕ್ಕಾಗಿ ಬೇಡಿಕೆಯನ್ನು ಸ್ವೀಕರಿಸಲು ತಾಲೂಕು ಐಇಸಿ ಸಂಯೋಜಕರು, ಗ್ರಾಮ ಕಾಯಕ ಮಿತ್ರ, ಹಾಗೂ ಬಿಎಫ್ ಟಿ ಕಾಯಕ ಬಂಧು, ಮಹಿಳಾ ಸ್ವಸಹಾಯ ಸಂಘದ ಸದಸ್ಯರು (ಎಂಬಿಕೆ) ರಚಿಸಿ ಮನೆಮನೆ ಭೇಟಿ ಹಾಗೂ ರಾಜ್ಯ ದಿವಸ್ ಆಚರಿಸುವ ಮೂಲಕ ಬೇಡಿಕೆಯನ್ನು ಸಂಗ್ರಹಿಸಿ ಕಾರ್ಯದೇಶವನ್ನು ನೀಡಲಾಗಿದೆ. ಹೊಸದಾಗಿ ಉದ್ಯೋಗ ಚೀಟಿಯನ್ನು ಪಡೆಯುವವರ ಹತ್ತಿರ ಅರ್ಜಿಯನ್ನು ಸ್ವೀಕರಿಸಿ ಉದ್ಯೋಗ ಚೀಟಿಯನ್ನು ನೀಡಲಾಗುತ್ತಿದೆ ಎಂದರು.
ಕೆಲಸಕ್ಕೆ ಬೇಡಿಕೆ ಸಲ್ಲಿಸಿದ ಕೂಲಿಕಾರರಿಗೆ ನಿರಂತರವಾಗಿ ಕೆಲಸವನ್ನು ಒದಗಿಸಲಾಗುತ್ತಿದೆ. ಬೇಡಿಕೆ ಸಲ್ಲಿಸಿದ ವಿಶೇಷವಾಗಿ ಮಹಿಳೆಯರಿಗೆ ಮತ್ತು ವಿಶೇಷ ಚೇತನರಿಗೆ ಕೆಲಸ ಒದಗಿಸಲು ಅಗತ್ಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೂಲಿ ಕಾರ್ಮಿಕರಿಗೆ ನಿರಂತರ ಅಕುಶಲ ಕೆಲಸವನ್ನು ಒದಗಿಸುತ್ತಿರುವ ಬಗ್ಗೆ ಪ್ರತಿ ದಿನ ತಾಲೂಕು ಮಟ್ಟದಿಂದ ಮೇಲ್ವಿಚಾರಣೆ ಮಾಡುವುದು ಜೊತೆಗೆ ಜಿಲ್ಲಾ ಮಟ್ಟದಿಂದ ವಾರಕ್ಕೆ ಒಮ್ಮೆ ಪ್ರಗತಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸಿಇಒ ತಿಳಿಸಿದ್ದಾರೆ.16ಕೆಡಿಬಿಪಿ3-
ಬೆಂಗಳೂರು ಗ್ರಾಮಾಂತರ ಜಿಪಂ ವತಿಯಿಂದ ದುಡಿಯೋಣ ಬಾರ ಅಭಿಯಾನಕ್ಕೆ ಸಿಇಒ ಡಾ.ಅನುರಾದ ಚಾಲನೆ ನೀಡಿದರು.