ಮನೆಯಲ್ಲಿ ಶ್ರೀರಾಮ ಉತ್ಸವ ನಿತ್ಯ ನಡೆಯಲಿ: ಪೇಜಾವರ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿ

KannadaprabhaNewsNetwork |  
Published : Mar 15, 2024, 01:16 AM IST
14ಕೆಡಿವಿಜಿ14, 15-ದಾವಣಗೆರೆಯಲ್ಲಿ ಗುರುವಾರ 31ನೇ ಶ್ರೀ ರಾಘವೇಂದ್ರ ಸಪ್ತಾಹ ಮಹೋತ್ಸವದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಉಡುಪಿಯ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವ ಪ್ರಸನ್ನತೀರ್ಥ ಶ್ರೀಪಾದಂಗಳವರು. ಉಡುಪಿ ಶ್ರೀ ಪಾಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀ ಪಾದಂಗಳವರು ಇದ್ದರು. | Kannada Prabha

ಸಾರಾಂಶ

ಶ್ರೀ ರಾಘವೇಂದ್ರರು ಶ್ರೀರಾಮಚಂದ್ರನ ಆರಾಧನೆಯಿಂದ ಕಾಮಧೇನು, ಕಲ್ಪವೃಕ್ಷವಾಗುವ ಮೂಲಕ ಅಂದೇ ರಾಯರು ಇಂತಹ ಆರಾಧನೆಯಿಂದ ಫಲ ಏನೆಂಬುದು ತೋರಿಸಿಕೊಟ್ಟಿದ್ದಾರೆ. ಇಂದಿಗೂ ಅದು ಮುಂದುವರಿದಿದೆ. ಅಂತಹ ಸಂತೃಪ್ತಿ ನಾವು, ನೀವು ಹೊಂದಬೇಕೆಂದು ಬಯಸಿದರೆ ನಮ್ಮ ಹೃದಯದಲ್ಲೂ ರಾಮ ಮಂದಿರವಾಗಬೇಕು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು ಮಂದಿರವನ್ನು ಮಂದಿರವಾಗಿಯೇ ಉಳಿಸುವ ಸರ್ಕಾರವನ್ನು ನಾವು ತರಬೇಕು ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ಕರೆ ನೀಡಿದರು.

ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಗುರುವಾರ ಶ್ರೀರಾಘವೇಂದ್ರ ಗುರು ಸಾರ್ವಭೌಮರ ಪಟ್ಟಾಭಿಷೇಕ ಮತ್ತು ಜನ್ಮದಿನಗಳ ಸಂಸ್ಮರಣೆ ನಿಮಿತ್ತ ಹಮ್ಮಿಕೊಂಡಿದ್ದ 31ನೇ ಶ್ರೀ ರಾಘವೇಂದ್ರ ಸಪ್ತಾಹ ಮಹೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿ, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಆಗಬೇಕೆಂಬುದು ಶತ ಶತಮಾನಗಳ ಕೋಟ್ಯಾಂತರ ಭಕ್ತರ ಕನಸಾಗಿತ್ತು. ನಾವೆಲ್ಲರೂ ಅದನ್ನು ಸಂಭ್ರಮದಿಂದ ಸ್ವಾಗತಿಸಿ, ಹಬ್ಬ ಆಚರಿಸಿದ್ದೇವೆ. ಆದರೆ, ಇದು ಒಂದು ದಿನಕ್ಕೆ ಮುಗಿದು ಹೋಗಬಾರದು. ನಮ್ಮ ನಮ್ಮ ಗ್ರಾಮಗಳಲ್ಲಿ, ಮನೆ ಮನೆಗಳಲ್ಲಿ ಹೃದಯದಲ್ಲಿ ಶ್ರೀರಾಮ ಉತ್ಸವ ಪ್ರತಿನಿತ್ಯ ನಡೆಯಬೇಕು ಎಂದು ಕಿವಿಮಾತು ಹೇಳಿದರು.

ಶ್ರೀ ರಾಘವೇಂದ್ರರು ಶ್ರೀರಾಮಚಂದ್ರನ ಆರಾಧನೆಯಿಂದ ಕಾಮಧೇನು, ಕಲ್ಪವೃಕ್ಷವಾಗುವ ಮೂಲಕ ಅಂದೇ ರಾಯರು ಇಂತಹ ಆರಾಧನೆಯಿಂದ ಫಲ ಏನೆಂಬುದು ತೋರಿಸಿಕೊಟ್ಟಿದ್ದಾರೆ. ಇಂದಿಗೂ ಅದು ಮುಂದುವರಿದಿದೆ. ಅಂತಹ ಸಂತೃಪ್ತಿ ನಾವು, ನೀವು ಹೊಂದಬೇಕೆಂದು ಬಯಸಿದರೆ ನಮ್ಮ ಹೃದಯದಲ್ಲೂ ರಾಮ ಮಂದಿರವಾಗಬೇಕು ಎಂದು ತಿಳಿಸಿದರು.

ಸಂಸ್ಕೃತಿ ಉಳಿಸುವ ಹೆಸರಿಡಿ:

ನಮ್ಮ ಸಂಸ್ಕೃತಿ ಉಳಿಸುವ ಕೆಲಸ ನಾಮಕರಣದಿಂದಲೇ ಶುರು ಮಾಡಬೇಕು. ಮಕ್ಕಳಿಗೆ ಎರಡಕ್ಷರ, ಮೂರು ಅಕ್ಷರಗಳ ಅರ್ಥವಿಲ್ಲದ ಹೆಸರುಗಳನ್ನಿಡದೇ, ಸಂಸ್ಕೃತಿ ಉಳಿಸುವ ಹೆಸರಿಡಬೇಕು. ನಾವು ಹೆತ್ತು, ಹೊತ್ತು, ಸಲುಹಿದ ಮಕ್ಕಳು ಅಕ್ಕಪಕ್ಕದ ಮನೆಯವರನ್ನು ಅಪ್ಪ, ಅಮ್ಮನೆಂದು ಕರೆದರೆ ನಾವು ಒಪ್ಪಿಕೊಳ್ಳುತ್ತೇವಾ? ಹಾಗಿರುವಾಗ ನಮ್ಮ ಸಂಸ್ಕೃತಿಯಲ್ಲಿ ಹುಟ್ಟಿ, ಇನ್ನ್ಯಾವುದೋ ಸಂಸ್ಕೃತಿಯ ಆಚಾರ, ವಿಚಾರ, ನಡೆ, ನುಡಿಗಳಲ್ಲಿ, ಕೊನೆಗೆ ಹೆಸರನ್ನೂ ಅಪ್ಪಿಕೊಂಡರೆ ಪಾಲಕರಾದ ನಿಮಗೆ ಒಪ್ಪಿಗೆಯೇ ಎಂದು ಪೇಜಾವರರು ಮಾರ್ಮಿಕವಾಗಿ ಪ್ರಶ್ನಿಸಿದರು.

ಉಡುಪಿ ಶ್ರೀ ಪಾಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀ ಪಾದಂಗಳವರಿದ್ದರು. ಬೆಳಿಗ್ಗೆಯಿಂದಲೂ ವಿವಿಧ ಧಾರ್ಮಿಕ ಕಾರ್ಯ ನೆರವೇರಿದವು. ಸುಪ್ರಭಾತ ಪ್ರಾತಃಸ್ಮರಣೆಯ ವಿದ್ವಾನ್ ಕೆ. ಅಪ್ಪಣ್ಣ ಆಚಾರ್ಯ, ಡಾ. ಜೆ.ಸದಾನಂದ ಶಾಸ್ತ್ರಿ ನಡೆಸಿಕೊಟ್ಟರು. ಪಲಿಮಾರು ಮಠದ ಸುಧಾ ವಿದ್ಯಾರ್ಥಿಗಳಿಂದ ಪ್ರವಚನ ನಡೆಯಿತು. ವಿದ್ವಾನ್ ಭೀಮಸೇನಾಚಾರ್ ಪುರೋಹಿತ್ ತತ್ವವಾದಕ್ಕೆ ಗುರುರಾಯರ ಕೊಡುಗೆ ಕುರಿತು ಪ್ರವಚನ ನೀಡಿದರು. ಮಧ್ಯಾಹ್ನ ಶ್ರೀ ಗುರುಜಗನ್ನಾಥದಾಸರು ವಿರಚಿತ "ಕನ್ನಡ ರಾಘವೇಂದ್ರ ವಿಜಯ " ಸಾಮೂಹಿಕ ಪಾರಾಯಣ ಇತ್ತು. ಸಂಜೆ ವಿದ್ವಾನ್ ಪ್ರಾಣೇಶಾಚಾರ್ ಕಡೂರ್ ರಿಂದ ದಾಸ ಸಾಹಿತ್ಯದಿಂದಾದ ಉಪಕಾರ ಕುರಿತು ಹಾಗೂ ಉಡುಪಿಯ ವಿದ್ವಾನ್ ಕುತ್ಪಾಡಿ ಕೃಷ್ಣರಾಜ ಭಟ್ಟ ಅವರಿಂದ ಕರ್ಮಣ್ಯೇವಾಧಿಕಾರಸ್ತೇ ಕುರಿತು‌ ಪ್ರವಚನ, ವಿದ್ವಾನ್ ಮೈಸೂರು ರಾಮಚಂದ್ರಾಚಾರ್ಯರಿಂದ ದಾಸವಾಣಿ ನಡೆಯಿತು.

ಹಿಂದೂಗಳು ಸದಾ ಜಾಗೃತರಾಗಿರಿ

ಹಿಂದೂಗಳು ದೇಶದಲ್ಲಿ ಬಹು ಸಂಖ್ಯಾತರಾಗಿರುವಷ್ಟು ಕಾಲವೂ ಶ್ರೀರಾಮ ಮಂದಿರ ಮಂದಿರವಾಗಿಯೇ ಉಳಿಯುತ್ತದೆ. ನೆರೆಯ ಅಫಘಾನಿಸ್ತಾನದಲ್ಲಿ ಬುದ್ಧನ ವಿಗ್ರಹ, ದೇಶ ಪರಕೀಯರ ಕೈವಶವಾಗುತ್ತಿದ್ದಂತೆಯೇ ಛಿದ್ರವಾಗಿ ಹೋಯಿತು. ಇಂತಹ ಅಪಾಯ ಎಲ್ಲಾ ಕಡೆ ಇರುವಂತಹದ್ದು. ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಸದಾ ಜಾಗೃತರಾಗಿರಬೇಕು. ಅಯೋಧ್ಯೆಯ ರಾಮ ಮಂದಿರ ನಿರ್ಮಾಣವಾದ ಉತ್ಸಾಹದಲ್ಲಿ ನಾವ್ಯಾರೂ ಮೈಮರೆಯಬಾರದು.ರಾಮ ಮಂದಿರ ರಾಮ ಮಂದಿರವಾಗಿಯೇ ಉಳಿಯಬೇಕು. ಅಂದರೆ, ಹಿಂದೂಗಳು ಹಿಂದೂಗಳಾಗಿಯೇ ಉಳಿಯಬೇಕು.

ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಉಡುಪಿ ಪೇಜಾವರ ಮಠ

ಆಂಜನೇಯ ಜನ್ಮಸ್ಥಳ ಅಭಿವೃದ್ಧಿಗೆ ಟ್ರಸ್ಟ್‌ ರಚಿಸಿ: ಪೇಜಾವರ ಶ್ರೀ

ಶ್ರೀರಾಮ ಮಂದಿರವನ್ನು ಅಯೋಧ್ಯೆಯಲ್ಲಿ ನಿರ್ಮಾಣ ಮಾಡಿದಂತೆಯೇ ಕರ್ನಾಟಕದಲ್ಲಿರುವ ಆಂಜನೇಯನ ಜನ್ಮಸ್ಥಳದ ಅಭಿವೃದ್ಧಿಗೂ ಟ್ರಸ್ಟ್‌ವೊಂದನ್ನು ರಚಿಸಬೇಕು. ಅಯೋಧ್ಯೆಯಲ್ಲಿ ಬಾಲರಾಮದ ಪ್ರಾಣ ಪ್ರತಿಷ್ಠಾಪನೆಯಾದ ನಂತರ ಕಳೆದ 42 ದಿನಗಳ ಕಾಲ ಮಂಡಲೋತ್ಸವ ನೆರವೇರಿದೆ. ಶ್ರೀರಾಮನ ನಾಡಿನಿಂದ ಹನುಮನ ನಾಡಿಗೆ ನಾವು ಬಂದಿದ್ದೇವೆ. ರಾಮ ಮಂದಿರದ ಶತಮಾನಗಳ ಕನಸು ಈಗ ನನಸಾಗಿದೆ. ಇನ್ನು ರಾಮರಾಜ್ಯವಾಗಲು ಶ್ರೀರಾಮನ ಅನುಗ್ರಹ ಬೇಕಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನಿಸೋಣ ಎಂದು ಹೇಳಿದರು.ದೇವಸ್ಥಾನಗಳ ಕಾಣಿಕೆ ಹುಂಡಿಯ ಹಣದ ವಿಚಾರದಲ್ಲಿ ಸರ್ಕಾರ ಯಾವುದೇ ಕಾರಣಕ್ಕೂ ಹಸ್ತಕ್ಷೇಪ ಮಾಡಬಾರದು. ಅದರ ಜವಾಬ್ದಾರಿಯನ್ನು ಹಿಂದು ಸಮಾಜಕ್ಕೆ ಬಿಟ್ಟು ಕೊಡಬೇಕು. ಬೇರೆ ಬೇರೆ ಧರ್ಮದ ಧಾರ್ಮಿಕ ಕೇಂದ್ರಗಳಲ್ಲಿ ಸರ್ಕಾರವು ಹಸ್ತಕ್ಷೇಪ ಮಾಡುತ್ತಿಲ್ಲ. ಅದೇ ರೀತಿ ದೇವಸ್ಥಾನಗಳ ವಿಚಾರದಲ್ಲೂ ಹಸ್ತಕ್ಷೇಪ ಮಾಡಬಾರದು ಎಂದು ಸರ್ಕಾರಕ್ಕೆ ಕಿವಿಮಾತು ಹೇಳಿದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ