ಎನ್ಸಿಸಿ, ರೆಡ್ ಕ್ರಾಸ್, ಸೌಟ್ಸ್ ಮತ್ತು ಗೈಡ್ಸ್ ಘಟಕಗಳ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಶಿರಸಿಓದು ಕೇವಲ ಪ್ರಮಾಣಪತ್ರಕ್ಕೆ ಸೀಮಿತವಾಗದೇ ಬದುಕಿನ ದಾರಿದೀಪವಾಗಬೇಕು. ನಮ್ಮ ನಾಳೆಗಳ ಬಗ್ಗೆ ನಾವು ಇಂದೆ ನಿರ್ಧರಿಸಿರಬೇಕು. ವಿದ್ಯಾರ್ಥಿಗಳಿಗೆ ಕೇವಲ ಅಂಕಗಳಷ್ಟೇ ಅಲ್ಲದೆ ಇತರ ಜ್ಞಾನ ಜೀವನದ ಮೌಲ್ಯಗಳು, ಹಾಗೂ ಚಟುವಟಿಕೆ ತಿಳಿದಿರಬೇಕು ಎಂದು ಸ್ಕೊಡ್‌ವೆಸ್ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯ್ಕ ಹೇಳಿದರು.
ನಗರದ ಮೋಡರ್ನ್ ಎಜುಕೇಶನ್ ಸೊಸೈಟಿಯ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ನಡೆದ ಸಂಘ ಒಕ್ಕೂಟ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ, ಎನ್ಸಿಸಿ, ರೆಡ್ ಕ್ರಾಸ್, ಸೌಟ್ಸ್ ಮತ್ತು ಗೈಡ್ಸ್ ಘಟಕಗಳ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.ವಿದ್ಯಾರ್ಥಿಗಳು ಬದುಕಲು ಕಲಿಯಲು ಹಲವಾರು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಜೀವನಕ್ಕೆ ಪರಿಪೂರ್ಣ ಅರ್ಥ ನೀಡಬೇಕೆಂದರೆ ನಮ್ಮಲ್ಲಿ ಸಂಸ್ಕಾರವಿರಬೇಕು. ಅನುಭವ ಪಡೆಯಲು ನಾವು ನಮ್ಮ ಕ್ಷೇತ್ರವನ್ನು ನಿರ್ಧರಿಸಿ ಅದರಲ್ಲಿ ತೊಡಗಿಕೊಳ್ಳಬೇಕು. ನಾನು ಇಲ್ಲಿ ಮಾತನಾಡುತ್ತಿರುವುದು ಪ್ರಮಾಣ ಪತ್ರ ಮೇಲೆ ಅಲ್ಲ ಅನುಭವದಿಂದ. ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಮತ್ತು ಎನ್‌ಸಿಸಿ ಮೂಲಕ ಶಿಸ್ತು, ಸಂಸ್ಕಾರ ಕಲಿಯುತ್ತಾರೆ. ಇಂತಹ ಶಿಬಿರಗಳಿಂದ ಜೀವನದಲ್ಲಿ ವೈಚಾರಿಕ ಜ್ಞಾನ ಕೌಶಲ್ಯಗಳು ಮತ್ತು ಪ್ರಪಂಚದ ಜ್ಞಾನ ದೊರಕುತ್ತದೆ. ಶಿಕ್ಷಣದ ಜತೆ ಇತರ ಒಳ್ಳೆಯ ಹವ್ಯಾಸಗಳನ್ನು ಮತ್ತು ಕೌಶಲ್ಯ ಬೆಳೆಸಿಕೊಳ್ಳಬೇಕು. ನಾವು ನಮ್ಮ ಸಾಮರ್ಥ್ಯವನ್ನು ಅರಿತು ನಮ್ಮ ಕೌಶಲ್ಯಗಳಿಗೆ ತಕ್ಕಂತೆ ಶಿಕ್ಷಣವನ್ನು ಪಡೆದರೆ ನಮಗೆ ಮುಂದೆ ಅವಕಾಶಗಳು ಸಿಗುತ್ತವೆ. ಜೀವನ ಸವಾಲುಮಯವಾಗಿದೆ, ಪ್ರತಿ ವರ್ಷವೂ ಲಕ್ಷಾಂತರ ಜನರು ಪದವಿ ಮುಗಿಸಿ ಹೊರ ಬರುತ್ತಾರೆ ಅವರನ್ನು ಸ್ಪರ್ಧಿಸಬೇಕು. ಇನ್ನು ಕಾಲ ಮಿಂಚಿಲ್ಲ. ಗುರಿಗಳನ್ನು ಈಗಲೇ ಪಟ್ಟಿ ಮಾಡಿಕೊಂಡು ನಮ್ಮ ಗುರಿ ತಲುಪಲು ಪರಿಶ್ರಮ ಪಡಬೇಕು ಎಂದರು.
ಕಾಲೇಜಿನಲ್ಲಿ ವಿವಿಧ ಘಟಕ ಸ್ಥಾಪಿಸಿ ಎಲ್ಲ ಉಪನ್ಯಾಸಕರಿಗೆ ಜವಾಬ್ದಾರಿ ನೀಡಿರುವುದು ಕ್ರಿಯಾತ್ಮಕ ಕೆಲಸ. ಅನೇಕ ಕಾಲೇಜುಗಳಲ್ಲಿ ಕಾಣದ ಉತ್ತಮ ಕಾರ್ಯ ಈ ಕಾಲೇಜಿನಲ್ಲಿ ಕಾಣುತ್ತಿದ್ದೇವೆ. ಕಾಲೇಜಿನ ಪ್ರಾಚಾರ್ಯರು ಮತ್ತು ಅವರ ತಂಡ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ. ಈ ಕಾರ್ಯಕ್ಕೆ ಸ್ಕೊಡ್‌ವೆಸ್ ಸಂಸ್ಥೆ ಸದಾ ಬೆಂಬಲವಾಗಿ ಸಿಲ್ಲುತ್ತದೆ ಎಂದು ಹೇಳಿದರು.ಕಾಲೇಜು ಉಪ ಸಮಿತಿಯ ಅಧ್ಯಕ್ಷ ಎಸ್.ಕೆ. ಭಾಗ್ವತ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ಕೊಡ್‌ವೆಸ್ ಸಂಸ್ಥೆಯ ಮೂಲಕ ಜನರಿಗೆ ಜೀವನ ಕಲ್ಪಿಸುತ್ತಿದ್ದಾರೆ. ಎನ್‌ಜಿಓಗಳ ಮೂಲಕ ಹಲವಾರು ಕುಟುಂಬಗಳಿಗೆ ಸಹಾಯ ಮಾಡಿದ್ದಾರೆ. ಈ ನಮ್ಮ ಸಂಸ್ಥೆ, ಕಾಲೇಜು ರಾಜ್ಯಾದ್ಯಂತ ಪ್ರಾಮುಖ್ಯತೆಯನ್ನು ಹೊಂದಲಿ. ಸಂಸ್ಥೆಯು ಇನ್ನು ಮುಂದುವರೆಯಲಿ ಎಂದು ಹೇಳಿದರು.
ಪ್ರಾಂಶುಪಾಲ ಪ್ರೊ. ಜಿ.ಟಿ. ಭಟ್ ಪ್ರಾಸ್ತಾವಿಕ ಮಾತನಾಡಿ, ಶಿಕ್ಷಣದ ಜತೆಗೆ ಪಠ್ಯೇತರ ಚಟುವಟಿಕೆ ನಡೆಸಲು ಅನೇಕ ಕೋಶಗಳು ಶ್ರಮಿಸುತ್ತಿವೆ. ಕೇವಲ ನಾಲ್ಕು ಗೋಡೆ ಅಧ್ಯಯನಕ್ಕೆ ಸೀಮಿತವಾಗದೆ ಹೊರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಅನೇಕ ಸಂಘ-ಸಂಘಟನೆಗಳನ್ನು ನಿರ್ಮಿಸಿಕೊಂಡಿದ್ದೇವೆ. ನಮ್ಮ ಕಾಲೇಜಿನಲ್ಲಿ ವಿದ್ಯೆ, ವಿನಯ, ಸಂಸ್ಕಾರ, ಸಂಸ್ಕೃತಿ ಮಕ್ಕಳಲ್ಲಿ ಬಿತ್ತಲು ನಾವೆಲ್ಲರೂ ಶ್ರಮಿಸುತ್ತಿದ್ದೇವೆ. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ತರಬೇತಿ, ಯೋಜನೆ, ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಪ್ರಾಧ್ಯಾಪಕರು, ವಿದ್ಯಾರ್ಥಿ ಪ್ರತಿನಿಧಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಷಾ ಸೌದಿ ನಿರೂಪಿಸಿದರು. ಸುಮನ ಸಂಗಡಿಗರು ಪ್ರಾರ್ಥಿಸಿದರು. ಅಪೂರ್ವ ರಾವ್ ವಂದಿಸಿದರು.