ಗದಗ: ಗದಗ ಜಿಲ್ಲೆಯ ಎಲ್ಲ ರೈತರು ತಾವು ಬಿತ್ತನೆ ಮಾಡಿದ ಬೆಳೆಗೆ ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಬೇಕು. ಈ ನಿಟ್ಟಿನಲ್ಲಿ ರೈತರಿಗೆ ಕೃಷಿ ಇಲಾಖೆಯ ಅಧಿಕಾರಿಗಳು ಅರಿವು ಮೂಡಿಸುವ ಮೂಲಕ ಸೂಕ್ತ ಮಾರ್ಗದರ್ಶನ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಿ.ಶಿಖಾ ಹೇಳಿದರು.
ಮುಂಗಾರು ಬಿತ್ತನೆ ಕಾರ್ಯ ಈಗಾಗಲೇ ಆರಂಭವಾಗಿರುವುದರಿಂದ ಬಿತ್ತನೆ ಬೀಜ, ಗೊಬ್ಬರ, ಕೀಟನಾಶಕ ಸಮರ್ಪಕ ಸರಬರಾಜು ಮಾಡಬೇಕು. ಸಮಸ್ಯೆ ಉದ್ಭವಿಸದಂತೆ ಮುಂಜಾಗ್ರತೆಯಿಂದ ಇಲಾಖಾಧಿಕಾರಿಗಳು ಕಾರ್ಯನಿರ್ವಹಿಸಬೇಕು. ತಪ್ಪಿದಲ್ಲಿ ಇಲಾಖಾಧಿಕಾರಿಗಳನ್ನೇ ಹೊಣೆಗಾರರನ್ನಾಗಿಸಲಾಗುವುದು ಎಂದು ಎಚ್ಚರಿಸಿದರು.
ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ ಮಾತನಾಡಿ, 2023ರ ಮುಂಗಾರು ಹಂಗಾಮಿನಲ್ಲಿ 1,11,695 ರೈತರು ವಿಮಾ ಕಂತು ಪಾವತಿ ಮಾಡುವ ಮೂಲಕ ₹252 ಕೋಟಿ ವಿಮಾ ಮೊತ್ತ ಪಾವತಿಯಾಗಿದೆ. ರಾಜ್ಯದಲ್ಲಿಯೇ ವಿಮಾ ಕಂತು ಪಾವತಿಯಲ್ಲಿ ಗದಗ 2ನೇ ಸ್ಥಾನದಲ್ಲಿದೆ. 2023ರ ಹಿಂಗಾರು ಬೆಳೆಗಳಿಗೆ 1,00,211 ರೈತರು ವಿಮಾ ಕಂತು ಪಾವತಿಸಿದ್ದಾರೆ. ಪ್ರಸಕ್ತ ಸಾಲಿನ ಬಿತ್ತನೆಗೆ ಅಗತ್ಯದ ಗೊಬ್ಬರ, ಕೀಟನಾಶಕ , ಬಿತ್ತನೆ ಬೀಜ ಸರಬರಾಜು ಸಮರ್ಪಕವಾಗಿ ಮಾಡಲಾಗುತ್ತಿದೆ ಎಂದರು.ಜಿಲ್ಲೆಯಲ್ಲಿ ಮಳೆಗಾಲ ಆರಂಭವಾಗಿದ್ದು ಸಾರ್ವಜನಿಕರಿಗೆ ಕುಡಿಯಲು ಸರಬರಾಜು ಮಾಡುವ ನೀರಿನ ಪರೀಕ್ಷೆ ಕಡ್ಡಾಯವಾಗಿ ಮಾಡಬೇಕು. ಕುಡಿಯಲು ಸೂಕ್ತವೆಂದೆನಿಸಿದಲ್ಲಿ ಮಾತ್ರವೇ ಸರಬರಾಜು ಮಾಡಬೇಕು. ಗ್ರಾಮಗಳಲ್ಲಿ ಸಾಂಕ್ರಾಮಿಕ ರೋಗಗಳ ಕುರಿತು ಜಾಗೃತಿ ಮೂಡಿಸುವ ಮೂಲಕ ಜನಸಾಮಾನ್ಯರ ಆರೋಗ್ಯ ಸಂರಕ್ಷಣೆ ಮಾಡುವಂತೆ ಆರೋಗ್ಯ ಇಲಾಖೆ ಹಾಗೂ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳಿಗೆ ಸಿ. ಶಿಖಾ ಸೂಚಿಸಿದರು.
ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ರವಿ ಗುಂಜೀಕರ ಮಾತನಾಡಿ, ಇಲಾಖೆ ವ್ಯಾಪ್ತಿಯಲ್ಲಿ 62 ವಸತಿ ನಿಲಯಗಳಿವೆ. ಇದರಲ್ಲಿ 38 ಸ್ವಂತ ಕಟ್ಟಡ ಹಾಗೂ 24 ನಿವೇಶನ ಹೊಂದಿವೆ. ಈ ವರ್ಷ ಎರಡು ವಸತಿ ನಿಲಯಗಳು ಮಂಜೂರಾಗಿದ್ದು, ಈ ವಾರ ಆರಂಭವಾಗಲಿವೆ ಎಂದರು.
ಅಲ್ಪಸಂಖ್ಯಾತರ ಇಲಾಖೆಯ ಅಧಿಕಾರಿ ಅಮಿತ ಬಿದರಿ ಮಾತನಾಡಿ, ಜಿಲ್ಲೆಯಲ್ಲಿ ಇಲಾಖಾ ವ್ಯಾಪ್ತಿಯಿಂದ 6 ವಸತಿ ನಿಲಯಗಳು ಕಾರ್ಯನಿರ್ವಹಿಸುತ್ತಿವೆ ಎಂದರು.
ಜಿಪಂ ಸಿಇಒ ಭರತ್ ಎಸ್. ಮಾತನಾಡಿ, ರಾಷ್ಟ್ರೀಯ ತೋಟಗಾರಿಕಾ ಮಿಷನ್ ಬಳಸಿಕೊಂಡು ಶಾಶ್ವತ ತೋಟಗಾರಿಕೆ ಕ್ಷೇತ್ರವನ್ನು ಅಭಿವೃದ್ಧಿಪಡಿಸಬೇಕು. ಜಿಲ್ಲೆಯ ಮುಂಡರಗಿ, ಶಿರಹಟ್ಟಿ, ಲಕ್ಷ್ಮೇಶ್ವರ, ಗಜೇಂದ್ರಗಡ ತಾಲೂಕಿನ ಪ್ರದೇಶಗಳು ತೋಟಗಾರಿಕೆಗೆ ಉತ್ತಮ ವಾತಾವರಣ ಹಾಗೂ ನೀರಿನ ಲಭ್ಯತೆ ಇರುವುದರಿಂದ ಸದುಪಯೋಗ ರೈತರಿಗೆ ದೊರಕಿಸಿ ಎಂದರು.