ರಾಹುಲ್ ಜೀ ದೊಡ್ಮನಿ
ಕನ್ನಡಪ್ರಭ ವಾರ್ತೆ ಚವಡಾಪುರಮಹಾರಾಷ್ಟ್ರ ರಾಜ್ಯದಲ್ಲಿ ಭೀಮಾ ನದಿ ಪಾತ್ರದಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಅಲ್ಲಿನ ಜಲಾಶಯಗಳು ಭರ್ತಿಯಾಗುತ್ತಿವೆ. ಮಹಾರಾಷ್ಟ್ರದ ವೀರಭಟ್ಕರ್ ಜಲಾಶಯದಿಂದ 5 ದಿನಗಳ ಹಿಂದೆ 55 ಸಾವಿರ ಕ್ಯುಸೆಕ್ ನೀರು ಭೀಮಾ ನದಿಗೆ ಹರಿಬಿಡಲಾಗಿದೆ. ಅದಾದ ಬಳಿಕ 2 ದಿನಗಳ ಹಿಂದೆ ಮತ್ತೆ 20 ಸಾವಿರ ಕ್ಯುಸೆಕ್ ನೀರು ಭೀಮಾ ನದಿಗೆ ಬಿಡಲಾಗಿದೆ. ಹೀಗಾಗಿ ಭೀಮಾ ನದಿ ರೌದ್ರಗೊಳ್ಳುವ ಮುನ್ನ ಪ್ರವಾಹ ಪೂರ್ವ ಸಿದ್ಧತೆಗಳನ್ನು ತಾಲೂಕು ಆಡಳಿತ ಮತ್ತು ಪ್ರವಾಹಕ್ಕೆ ತುತ್ತಾಗುವ ಗ್ರಾಮ ಪಂಚಾಯ್ತಿಗಳವರು ಮಾಡಿಕೊಳ್ಳಬೇಕಿದೆ ಇಲ್ಲವಾದರೆ 2020ರಲ್ಲಿ ಆದ ಅವಾಂತರಗಳು ಮತ್ತೇ ಮರುಕಳಿಸಿದರೂ ಅಚ್ಚರಿ ಪಡಬೇಕಾಗಿಲ್ಲ.
ನಾಲ್ಕು ವರ್ಷಗಳ ಹಿಂದೆ 2020ರಲ್ಲೂ ಮಹಾರಾಷ್ಟ್ರ ರಾಜ್ಯದಲ್ಲಿ ಮತ್ತು ಭೀಮಾ ನದಿ ಜಲಾನಯನ ಪ್ರದೇಶದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಅಫಜಲ್ಪುರ ತಾಲೂಕಿನಲ್ಲಿ ರಕ್ಕಸ ಪ್ರವಾಹ ಉಂಟಾಗಿತ್ತು. ಮುಖ್ಯವಾಗಿ ಭೀಮಾ ನದಿ ದಂಡೆಯಲ್ಲಿನ ಪುಣ್ಯಕ್ಷೆತ್ರಗಳಾದ ಮಣೂರ ಗ್ರಾಮದ ವೇದೇಶತೀರ್ಥ ಸಂಸ್ಕೃತ ಪಾಠ ಶಾಲೆ ಮುಳುಗಡೆಯಾಗಿತ್ತು. ಅಲ್ಲದೆ ನಾವಾಡಿ ಓಣಿ, ಕೆರಗೇರಿ, ಹಾಗೂ ದಲಿತ ಕಾಲೋನಿಗಳು ಮುಳುಗಡೆಯಾಗುತ್ತವೆ. ಅಲ್ಲದೆ ಸುಕ್ಷೇತ್ರಗಳಾದ ದೇವಲ ಗಾಣಗಾಪೂರ, ಘತ್ತರಗಾದಲ್ಲಿ ಭೀಮಾ ನದಿಗೆ ಅಡ್ಡಲಾಗಿ ಕಟ್ಟಿರುವ ಬ್ರೀಜ್ ಕಂ ಬ್ಯಾರೇಜ್‌ಗಳು ಮುಳುಗಡೆಯಾಗುವುದರಿಂದ ದತ್ತಾತ್ರೇಯ ದೇವಸ್ಥಾ, ಭಾಗ್ಯವಂತಿ ದೇವಸ್ಥಾನಕ್ಕೆ ಬರುವ ಸಹಸ್ರಾರು ಭಕ್ತರಿಗೆ ಸಂಪರ್ಕ ಕಡಿತವಾಗುತ್ತದೆ. ಅಲ್ಲದೆ ನದಿ ಪಾತ್ರದ ಹಲವು ಗ್ರಾಮಗಳು ಪ್ರವಾಹಕ್ಕೆ ತುತ್ತಾತಿ ಜನ ಜಾನುವಾರುಗಳಿಗೆ ಸಂಕಷ್ಟ ಉಂಟಾಗುತ್ತದೆ. 2020ರಲ್ಲೂ ಅಪಾರ ಆಸ್ತಿಪಾಸ್ತಿಗಳಿಗೆ ನಷ್ಟ ಉಂಟಾಗಿತ್ತು. ಪ್ರವಾಹಕ್ಕೆ ಸಿಲುಕಿದ ಸಾವಿರಾರು ಜನ ಕಾಳಜಿ ಕೇಂದ್ರಗಳಲ್ಲಿ ಇದ್ದು ಜೀವ ಉಳಿಸಿಕೊಳ್ಳುವಂತಾಗಿತ್ತು.ಭೀಮೆಗೆ 75 ಸಾವಿರ ಕ್ಯುಸೆಕ್ ಮಹಾ ನೀರು ಹರಿವು: ಸಧ್ಯ ಮಹಾರಾಷ್ಟ್ರದಲ್ಲಿ ಆಗುತ್ತಿರುವ ವ್ಯಾಪಕ ಮಳೆಯಿಂದ ಅಲ್ಲಿನ ಜಲಾಶಯಗಳು ಭರ್ತಿಯಾಗುತ್ತಿದ್ದು ಅಲ್ಲಿನ ವೀರ್ ಭಟ್ಕರ್ ಜಲಾಶಯದಿಂದ ಭೀಮಾ ನದಿಗೆ 75 ಸಾವಿರ ಕ್ಯುಸೆಕ್ ನೀರು ಹರಿಬಿಡಲಾಗಿದ್ದು ಈ ನೀರು ಸೊನ್ನ ಬ್ಯಾರೇಜ್ ತಲುಪಿದೆ. ಹೀಗಾಗಿ ಸೊನ್ನ ಬ್ಯಾರೇಜ್‌ನಿಂದ ಜು.28ರ ಬೆಳಗಿನ ಜಾವ 12 ಸಾವಿರ ಕ್ಯುಸೆಕ್ ಮತ್ತು ಮದ್ಯಾಹ್ನದಿಂದ 12 ಸಾವಿರ ಕ್ಯುಸೆಕ್ ನೀರನ್ನು ಹೊರಗಡೆ ಹರಿಬಿಡಲಾಗುತ್ತಿದೆ. ಜು.31ರವರೆಗೆ ನೀರಿನ ಹೊರಹರಿವಿನ ಪ್ರಮಾಣ 15 ಸಾವಿರ ಕ್ಯುಸೆಕ್‌ಗೆ ಬಂದು ತಲುಪಿದೆ ಎಂದು ಕೆಎನ್‌ಎನ್‌ಎಲ್ ಅಧಿಕಾರಿ ಸಂತೋಷ ಸಜ್ಜನ್ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಸೊನ್ನ ಬ್ಯಾರೇಜ್‌ನ ಅಪಾಯಕಾರಿ ಸ್ಥಳದಲ್ಲಿ ಯುವಕರ ಹುಚ್ಚಾಟ: ಒಂದು ಕಡೆ ಪ್ರವಾಹ ಪರಿಸ್ಥಿತಿ ಉಂಟಾಗಿ ಆಸ್ತಿಪಾಸ್ತಿಗಳಿಗೆ ಹಾನಿ ಉಂಟಾಗಲಿದೆ ಎನ್ನುವ ಆತಂಕದಲ್ಲಿ ನದಿ ಪಾತ್ರದ ಜನರಿದ್ದರೆ, ಇತ್ತ ಸೊನ್ನ ಗ್ರಾಮದಲ್ಲಿನ ಭೀಮಾ ಏತ ನೀರಾವರಿ ಜಲಾಶಯದಲ್ಲಿ ನೀರು ತುಂಬಿಕೊಂಡು ರುದ್ರರಮಣೀಯ ರೀತಿಯಲ್ಲಿ ಕಾಣುತ್ತಿರುವುದನ್ನು ನೋಡುವ ಧಾವಂತದಲ್ಲಿ ನೂರಾರು ಜನ ಬ್ಯಾರೇಜ್‌ಗೆ ಭೇಟಿ ನೀಡುತ್ತಿದ್ದಾರೆ. ಆದರೆ ಇವರಲ್ಲಿ ಅನೇಕ ಯುವಕರು ಹುಚ್ಚಾಟ ಮೆರೆಯುತ್ತಿದ್ದು ಬ್ಯಾರೇಜ್‌ನ ಅಪಾಯಕಾರಿ ಜಾಗದಲ್ಲಿ ನಿಂತು ಸೇಲ್ಫಿ ತೆಗೆದುಕೊಳ್ಳುವುದು, ರೀಲ್ಸ್ ಮಾಡುವುದನ್ನು ಮಾಡುತ್ತಿದ್ದಾರೆ. ಇವುಗಳಿಗೆ ಕಡಿವಾಣ ಹಾಕದಿದ್ದರೂ ಕೂಡ ಅಪಾಯಕ್ಕೆ ಆವ್ಹಾನ ಕೊಟ್ಟಂತಾಗಲಿದೆ.-----
2020ರಲ್ಲಿ ವ್ಯಾಪಕ ನೀರು ಭೀಮಾ ನದಿಗೆ ಹರಿದು ಬಂದಿದ್ದರಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಧ್ಯಕ್ಕೆ ಯಾವುದೇ ಪ್ರವಾಹ ಪರಿಸ್ಥಿತಿ ಇಲ್ಲವಾದರೂ ಕೂಡ ಮಹಾರಾಷ್ಟ್ರದಲ್ಲಿ ಆಗುತ್ತಿರುವ ಮಳೆಯಿಂದ ನಾವು ಕೂಡ ಪ್ರವಾಹ ಪರಿಸ್ಥಿತಿ ಎದುರಿಸಲು ಪೂರ್ವ ಸಿದ್ಧತೆಯಲ್ಲಿದ್ದೇವೆ. ಪ್ರವಾಹ ಪರಿಸ್ಥಿತಿ ನಿರ್ಮಾಣವಾದರೆ ಕಾಳಜಿ ಕೇಂದ್ರಗಳನ್ನು ಆರಂಭಿಸಿ ಜನರ ಜೀವ ಕಾಪಾಡಲಾಗುತ್ತದೆ. ಈಗ ನದಿಗೆ ನೀರು ಹೆಚ್ಚುತ್ತಿದ್ದು ನದಿ ಪಾತ್ರದ ರೈತರು, ಜನಸಾಮಾನ್ಯರು, ಮೀನುಗಾರರು ನದಿ ದಂಡೆಗಳಿಗೆ ಹೋಗುವುದು ಉಚಿತವಲ್ಲ, ರೈತರು ತಮ್ಮ ಪಂಪ್‌ಸೆಟ್‌ಗಳನ್ನು ಈಗಿನಿಂದಲೇ ತೆರವುಗೊಳಿಸಿಕೊಳ್ಳುವುದು ಒಳ್ಳೆಯದು.- ಸಂಜೀವಕುಮಾರ ದಾಸರ್, ತಹಸೀಲ್ದಾರ್ ಅಫಜಲ್ಪುರ