ಕನ್ನಡಪ್ರಭ ವಾರ್ತೆ ಬೀದರ್
ಇದೀಗ ಕರ್ನಾಟಕ ಸರ್ಕಾರ ಘೋಷಿಸಿದ್ದಾಯ್ತು, ಮುಂದಿನ ದಿನಮಾನಗಳಲ್ಲಿ ಈ ನೆಲದ ಯುಗಪುರುಷರಾದ ಬಸವಣ್ಣನವರು ನಮ್ಮ ದೇಶದ ಸಾಂಸ್ಕೃತಿಕ ನಾಯಕರೆಂದು ಕೇಂದ್ರ ಸರಕಾರವು ಘೋಷಣೆ ಮಾಡಬೇಕೆಂದು 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ನಾಡೋಜ ಬಸವಲಿಂಗ ಪಟ್ಟದ್ದೇವರು ಮನವಿಸಿದರು.ನಗರದ ಡಾ. ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಆಯೋಜಿಸಿದ್ದ 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿಶ್ವಗುರು ಬಸವಣ್ಣನವರನ್ನು ಕರ್ನಾಟಕ ರಾಜ್ಯದ ಸಾಂಸ್ಕೃತಿಕ ನಾಯಕರೆಂದು ಘೋಷಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಇದರ ಜೊತೆಗೆ ಶರಣರ ಜೀವನ ಚರಿತ್ರೆ ಹಾಗೂ ವಚನ ಸಾಹಿತ್ಯ ಎಲ್ಲ ತರಗತಿಯ ಮಕ್ಕಳ ಪಠ್ಯಪುಸ್ತಕದಲ್ಲಿ ಅಳವಡಿಸುವ ಮೂಲಕ ಬಸವಣ್ಣನವರ ಕಾಯಕ ದಾಸೋಹ, ಸಮತೆ, ವೈಚಾರಿಕತೆ, ಮಾನವೀಯತೆ ಮುಂತಾದ ಮೌಲ್ಯಗಳ ಪ್ರಜ್ಞೆಯನ್ನು ಹೆಚ್ಚಿಸುವಂತೆ ಆಗಬೇಕು ಎಂದು ಸಲಹೆಯಿತ್ತರು.
ವಿಶ್ವಗುರು ಬಸವಣ್ಣನವರು ಮಾಡಿರುವ ಸಾಹಿತ್ಯ ಕ್ರಾಂತಿ ಅರ್ಥಪೂರ್ಣವಾದದ್ದು. ಬಸವಪೂರ್ವದ ಕನ್ನಡ ಸಾಹಿತ್ಯ ಸಂಸ್ಕೃತ ಭೂಯಿಷ್ಟವಾಗಿತ್ತು. ಸಂಸ್ಕೃತ ಭಾಷೆಯಿಂದ ಪೂಜೆ ಮಾಡಿದರೆ ಮಾತ್ರ ದೇವರು ಒಲಿಯುತ್ತಾನೆ ಕನ್ನಡದಲ್ಲಿ ಹೇಳಿದರೆ ಒಲಿಯುವುದಿಲ್ಲ, ಅವನ ಕೃಪೆ ಆಗುವುದಿಲ್ಲ ಎಂದು ಜನರಿಗೆ ನಂಬಿಸಲಾಗಿತ್ತು. ಆ ನಂಬಿಕೆಯನ್ನು ನಿರಾಕರಿಸಿ ಪ್ರಪ್ರಥಮವಾಗಿ ದೇವರಿಗೂ ಕನ್ನಡ ಕಲಿಸಿ ದೇವರು ಕನ್ನಡ ಮಾತನಾಡಬಲ್ಲರು ದೇವರಿಗೆ ಕನ್ನಡ ಮಂತ್ರಗಳಾದ ವಚನಗಳ ಮೂಲಕ ನಿರ್ಭಯವಾಗಿ ಪೂಜೆ ಮಾಡಬಹುದು ಎಂದು ತೋರಿಸಿಕೊಟ್ಟವರು ಬಸವಣ್ಣನವರು. ಜನವಾಣಿಯನ್ನೆ ದೇವವಾಣಿಯನ್ನಾಗಿ ಮಾಡಿದವರು ಬಸವಣ್ಣನವರು.ಶರಣರು ಬೋಧಿಸಿದ ಮೌಲ್ಯಗಳನ್ನು ಯುವಕರಲ್ಲಿ ಬಿತ್ತುವುದಕ್ಕಾಗಿ ಸರ್ಕಾರದ ವತಿಯಿಂದ ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಲ್ಲಿ ವಚನ ಸಾಹಿತ್ಯ ಅರಿವು ಅಭಿಯಾನ ರೂಪಿಸಬೇಕು. ಜಾಗತಿಕ ಮೌಲ್ಯಗಳನ್ನು ಪ್ರತಿಪಾದಿಸುವ ಅದನ್ನು ಅನ್ಯಭಾಷೆಗೆ ಅನುವಾದಿಸುವ ಅದರ ಕುರಿತು ಸಂಶೋಧನೆ ನಡೆಸುವುದಕ್ಕಾಗಿ ಬಸವಕಲ್ಯಾಣದಲ್ಲಿ ಕರ್ನಾಟಕ ಸರ್ಕಾರದ ವತಿಯಿಂದ ವಚನ ವಿಶ್ವವಿದ್ಯಾಲಯ ಸ್ಥಾಪನೆಯಾಗಬೇಕು ಎಂದು ಆಗ್ರಹಿಸಿದರು.
ಕನ್ನಡಿಗರಾದ ನಮಗೆ ನಮ್ಮ ನೆಲದ ಮಹಾಪುರುಷರು, ನಾಯಕರು ಆದರ್ಶವಾಗಬೇಕು. ನಮ್ಮ ಆದರ್ಶಗಳು ಉತ್ತರದ ರಾಜ್ಯಗಳ ಪಠ್ಯಪುಸ್ತಕಗಳಲ್ಲಿ ಪರಿಚಯಿಸುವ ಕಾರ್ಯ ಆಗಬೇಕು. ಉತ್ತರ ಭಾರತದ ಆದರ್ಶಗಳಾದ ರಾಮ, ಕೃಷ್ಣ, ಕಬೀರ, ಮೀರಾ, ಝಾನ್ಸಿರಾಣಿ ಇವರನ್ನು ನಾವು ಓದುತ್ತೇವೆ. ಅಂದಮೇಲೆ ನಮ್ಮ ಬಸವಣ್ಣ, ಅಕ್ಕಮಹಾದೇವಿ, ಕುವೆಂಪು, ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಕಂಬಳಿ ಸಿದ್ಧಪ್ಪ ಮೊದಲಾದವರನ್ನು ಅವರು ಯಾಕೆ ಓದಬಾರದು ಎಂದು ಪ್ರಶ್ನಿಸಿದರು.ರಾಜ್ಯ ಸರ್ಕಾರ ದಕ್ಷಿಣ ಹಾಗೂ ಉತ್ತರ ಕರ್ನಾಟಕಗಳಲ್ಲಿ ನಡೆಸುವ ಎರಡು ಅಧಿವೇಶನಗಳಂತೆ ಕೇಂದ್ರ ಸರ್ಕಾರವೂ ಉತ್ತರ ಭಾರತದೊಂದಿಗೆ ದಕ್ಷಿಣ ಭಾರತದ ರಾಜ್ಯದಲ್ಲಿ ಅಧಿವೇಶನ ನಡೆಸಬೇಕು. ದಕ್ಷಿಣದ ರಾಜ್ಯಗಳಲ್ಲಿ ರಾಷ್ಟ್ರೀಯ ನಾಯಕತ್ವ ಬೆಳೆಯಬೇಕು. ಅಂದಾಗಲೇ ನಮ್ಮ ಭಾಷೆ, ಸಾಹಿತ್ಯ, ಸಂಸ್ಕೃತಿ ರಾಷ್ಟ್ರಮಟ್ಟದಲ್ಲಿ, ಜಾಗತಿಕ ಮಟ್ಟದಲ್ಲಿ ಪ್ರಸಾರ ಆಗುತ್ತದೆ ಎಂದು ಪಟ್ಟದ್ದೇವರು ತಿಳಿಸಿದರು.