ತಾಯಿ ಗರ್ಭದಿಂದಲೇ ಮಗುವಿನ ಆರೈಕೆಯಾಗಲಿ: ಡಾ.ಜಿ.ತಿಮ್ಮೇಗೌಡ

KannadaprabhaNewsNetwork | Published : Mar 15, 2024 1:17 AM

ಸಾರಾಂಶ

ಗರ್ಭ ಧರಿಸಿದ ನಂತರ ಮಹಿಳೆಯರು ಕನಿಷ್ಟ ಮೂರು ನಾಲ್ಕು ಬಾರಿಯಾದರೂ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಮಕ್ಕಳ ತಜ್ಞ ಡಾ.ಜಿ.ತಿಮ್ಮೇಗೌಡ ಕಿವಿಮಾತು ಹೇಳಿದರು.

ಕನ್ನಡಪ್ರಭ ವಾರ್ತೆ ಸಿರಿಗೆರೆ

ಮಗುವಿನ ಆರೈಕೆ ತಾಯಿಯ ಗರ್ಭದಿಂದಲೇ ಆರಂಭವಾದರೆ ತಾಯಿ ಮತ್ತು ಮಗುವಿನ ಮರಣ ಪ್ರಮಾಣವನ್ನು ಕಡಿಮೆಗೊಳಿಸಬಹುದು ಎಂದು ಸಿರಿಗೆರೆ ಸಮುದಾಯ ಆರೋಗ್ಯ ಕೇಂದ್ರದ ಅಡಳಿತ ವೈದ್ಯಾಧಿಕಾರಿ ಹಾಗೂ ಮಕ್ಕಳ ತಜ್ಞ ಡಾ.ಜಿ.ತಿಮ್ಮೇಗೌಡ ಹೇಳಿದರು.

ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗರ್ಭಿಣಿಯರು ಮತ್ತು ಎದೆಹಾಲು ಉಣಿಸುವ ತಾಯಂದಿರುಗಳಿಗೆ ನವಜಾತ ಶಿಶುವಿನ ಆರೈಕೆ ಕುರಿತು ಮಾಹಿತಿ ಶಿಕ್ಷಣ ಸಂವಹನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗರ್ಭ ಧರಿಸಿದ ನಂತರ ಮಹಿಳೆಯರು ಕನಿಷ್ಟ ಮೂರು ನಾಲ್ಕು ಬಾರಿಯಾದರೂ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು. ಅವರ ಸಲಹೆ ಪಾಲಿಸುವುದಲ್ಲದೆ ಪೌಷ್ಠಿಕ ಆಹಾರ ಸೇವನೆ, ಕಬ್ಬಿಣಾಂಶ ಮತ್ತು ಕ್ಯಾಲ್ಸಿಯಂ ಮಾತ್ರೆಗಳನ್ನು ಸಕಾಲಕ್ಕೆ ಸೇವಿಸಬೇಕು ಎಂದರು.

ಮಗು ಜನಿಸಿದ ಆರು ತಿಂಗಳವರೆಗೆ ಮಗುವಿಗೆ ತಾಯಿಯ ಎದೆ ಹಾಲೇ ಆಹಾರವಾಗಬೇಕು. ಮಗುವಿನ ಆರೈಕೆಗೆ ಸೂಕ್ತ ಚಿಕಿತ್ಸೆಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ದೊರೆಯುತ್ತವೆ. ಮಗುವಿಗೆ ಸೂಕ್ತ ಲಸಿಕೆಗಳನ್ನು ಸಹ ಸಕಾಲದಲ್ಲಿ ಕೊಡಿಸಬೇಕು ಎಂದು ಕಿವಿಮಾತು ಹೇಳಿದರು.

ಹೆರಿಗೆ ಮತ್ತು ಸ್ತ್ರೀರೋಗ ತಜ್ಞೆ ಡಾ.ಪವಿತ್ರಾ ಮಾತನಾಡಿ, ೧೮ ವರ್ಷದ ಒಳಗಿರುವ ಹೆಣ್ಣು ಮಕ್ಕಳಿಗೆ ಮದುವೆ ಮಾಡಬಾರದು. ಅವರ ಮೆದುಳು ಮತ್ತು ಅಂಗಾಂಗಗಳ ಬೆಳವಣಿಗೆ ಈ ಅವಧಿಯಲ್ಲಿ ಪರಿಪೂರ್ಣವಾಗಿರುವುದಿಲ್ಲ. ಇಂತಹ ಮದುವೆ ಮಾಡುವುದರಿಂದ ಮಕ್ಕಳ ಬೆಳವಣಿಗೆಯೂ ಕುಂಠಿವಾಗುತ್ತದೆ ಎಂದರು.

ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್‌.ಮಂಜುನಾಥ್ ಮಾತನಾಡಿ, ಜೀವನ ಶೈಲಿಯ ಬದಲಾವಣೆಯಿಂದಾಗಿ ಆಧುನಿಕ ಕಾಲದಲ್ಲಿ ಕುರುಕಲು ತಿಂಡಿಗಳಿಗೆ ಮಾರು ಹೋಗದೆ ಕಾಲಮಾನಕ್ಕೆ ಸಿಗುವ ಹಣ್ಣು ಹಂಪಲು ಹಸಿ ತರಕಾರಿ ಪೌಷ್ಟಿಕಾಂಶ ಇರುವ ಧಾನ್ಯಗಳ ಬಳಕೆ ಮಾಡಿಕೊಂಡು, ಮೊಳಕೆ ಕಾಳು, ಹಾಲು, ದ್ರವರೂಪದ ಆಹಾರ ಸೇವನೆಯೊಂದಿಗೆ ಉತ್ತಮ ಆರೋಗ್ಯ ಹೊಂದಬೇಕೆಂದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮಾತನಾಡಿ, ಅಪಾಯಕಾರಿ ಚಿಹ್ನೆಗಳು, ಜ್ವರ, ಮಲದಲ್ಲಿ ರಕ್ತ, ವೇಗದ ಉಸಿರಾಟ, ಕಷ್ಟದ ಉಸಿರಾಟ, ಜಡತ್ವ ಅಥವಾ ಪ್ರಜ್ಞಾ ಹೀನತೆ, ಮಗು ಎಲ್ಲವನ್ನೂ ವಾಂತಿ ಮಾಡುತ್ತಿದ್ದರೆ, ಗುಳಿ ಬಿದ್ದ ಕಣ್ಣು, ಪಕ್ಕೆಸೆಳೆತ ಇಂತಹ ಲಕ್ಷಣಗಳು ಕಂಡು ಬಂದಲ್ಲಿ ತುರ್ತಾಗಿ ವೈದ್ಯರಲ್ಲಿ ಪರೀಕ್ಷಿಸಬೇಕು ಎಂದರು .

ಶ್ರೀಮತಿ ಜಾನಕಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಇವರು ಮಕ್ಕಳಿಗೆ 12 ಮಾರಕ ರೋಗಗಳ ವಿರುದ್ಧ ನೀಡುವ ಲಸಿಕೆಗಳು ಮತ್ತು ಅದರ ಮಹತ್ವದ ಬಗ್ಗೆ ಮಾಹಿತಿ ನೀಡಿದರು.

ಡಾ.ಪ್ರಸನ್ನಕುಮಾರ್ ದಂತ ವೈದ್ಯರು ಮಾತನಾಡಿ, ಆರೋಗ್ಯವಂತ ಮಗು ದೇಶದ ಸಂಪತ್ತು ಸೂಕ್ಷ್ಮ ಹಂತದಲ್ಲಿ ಮಗುವಿಗೆ ಸಮಸ್ಯೆಗಳು ಕಂಡ ತಕ್ಷಣ ವೈದ್ಯಾಧಿಕಾರಿಗಳಲ್ಲಿ ಪರೀಕ್ಷೆ ಮಾಡಿಸಿ , ಮೂಡನಂಬಿಕೆ ತೊಡೆದು ಹಾಕಿ ಸೂಕ್ತ ಚಿಕಿತ್ಸೆ ಪಡೆದು ಮಗುವನ್ನು ಸಂರಕ್ಷಿಸಬೇಕೆಂದರು. ಕಾರ್ಯಕ್ರಮದಲ್ಲಿ ಫಾರ್ಮರ್ಸಿ ಅಧಿಕಾರಿ ಮೋಹನ್ ಕುಮಾರ್ ಶುಶ್ರೂಷಾಧಿಕಾರಿ ತಾರಾ, ಪ್ರೇಮ, ನಾಗವೇಣಿ, ಪಿಎಚ್‌ಸಿ ಓ.ಶಾರದಮ್ಮ. ಆರೋಗ್ಯ ನಿರೀಕ್ಷಣಾಧಿಕಾರಿ ಸುನಿಲ್ ಕುಮಾರ್, ಕೌನ್ಸಿಲರ್ ಕಾವ್ಯ, ಆರೋಗ್ಯ ಮಿತ್ರ ಶಿವರಾಜ್, ಆಶಾ ಕಾರ್ಯಕರ್ತೆಯರು 30ಕ್ಕೂ ಹೆಚ್ಚು ಎದೆ ಹಾಲುಣಿಸುವ ತಾಯಂದಿರು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.

Share this article