ಧಾರವಾಡ:
ಮಾಧ್ಯಮ ಸಂಶೋಧಕರು ಪ್ರಚಲಿತ ಮಾಧ್ಯಮಕ್ಕೆ ಸಂಬಂಧಿಸಿದ ವಿದ್ಯಮಾನಗಳನ್ನು ಒಳಗೊಂಡ ವಿಷಯಗಳನ್ನು ಸಂಶೋಧನೆಗೆ ಆಯ್ಕೆ ಮಾಡಿಕೊಳ್ಳಲು ಕರ್ನಾಟಕ ವಿವಿ ಪತ್ರಿಕೋದ್ಯಮ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ. ಎ.ಎಸ್. ಬಾಲಸುಬ್ರಹ್ಮಣ್ಯ ಸಲಹೆ ನೀಡಿದರು.ಕವಿವಿ ಪತ್ರಿಕೋದ್ಯಮ ವಿಭಾಗವು ಕವಿವಿ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ''''''''ಕೃತಕ ಬುದ್ಧಿಮತ್ತೆ ಯುಗದಲ್ಲಿ ಸಮೂಹ ಸಂವಹನದ ಸವಾಲುಗಳು ಮತ್ತು ಅವಕಾಶಗಳು'''''''' ಕುರಿತು ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದ ತಾಂತ್ರಿಕ ಮಾಧ್ಯಮ ಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ವಿದ್ಯಾರ್ಥಿಗಳು ಸಂಶೋಧನೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಪ್ರಸ್ತುತ ಮಾಧ್ಯಮದ ವೃತ್ತಿಪರರು ಸಹ ಇಂದು ಬೋಧನೆ ಕಡಗೆ ಆಕರ್ಷಿತರಾಗುತ್ತಿದ್ದಾರೆ. ಕಾರಣ ಪತ್ರಿಕೋದ್ಯಮ ಶಿಕ್ಷಣ ವ್ಯಾಪಕವಾಗಿ ಬೆಳೆಯುತ್ತಿದೆ ಎಂದ ಅವರು, ಮಾಧ್ಯಮ ವೃತ್ತಿಪರರಿಗೆ ಕ್ಲಾಸ್ ರೂಮ್ ಬೋಧನೆಗೆ ಅವಕಾಶ ನೀಡಬೇಕಾದ ಅವಶ್ಯಕತೆ ಇದೆ ಎಂದರು.
ಪ್ರಸ್ತುತ ಮಾಧ್ಯಮದಲ್ಲಿ ತಂತ್ರಜ್ಞಾನ ತ್ವರಿತವಾಗಿ ಬೆಳವಣಿಗೆ ಆಗುತ್ತಿದೆ. ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಡಾ. ಬಾಲಸುಬ್ರಹ್ಮಣ್ಯ ಸಲಹೆ ನೀಡಿದರು. ಕೊಪ್ಪಳ ವಿವಿ ಕುಲಪತಿ ಪ್ರೊ. ಬಿ.ಕೆ .ರವಿ ಮಾತನಾಡಿ, ಪದವಿ ಹಂತದ ವಿದ್ಯಾರ್ಥಿಗಳು ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಭಾಗವಹಿಸುವುದನ್ನು ಕಲಿಯಬೇಕು. ಮಾಧ್ಯಮದಲ್ಲಿ ಬದಲಾಗುತ್ತಿರುವ ವಿದ್ಯಮಾನಗಳನ್ನು ವಿದ್ಯಾರ್ಥಿಗಳು ಗಮನ ಹರಿಸಬೇಕು ಎಂದರು.ಮೈಸೂರು ವಿವಿ ಪ್ರಾಧ್ಯಾಪಕಿ ಡಾ. ಮಮತಾ ಮಾತನಾಡಿದರು. ತುಮಕೂರು ಮಾಧ್ಯಮ ಸಂಸ್ಥೆಯ ನಿರ್ದೇಶಕ ಡಾ. ಬಿ.ಟಿ ಮುದ್ದೇಶ, ದಾವಣಗೆರೆ ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಶಿವಕುಮಾರ ಕಣಸೋಗಿ, ಮಾಧ್ಯಮಕ್ಕೆ ಸಂಬಂಧಿಸಿದ ಹೊಸ ಹೊಸ ರೀತಿಯ ವಿಷಯಗಳನ್ನು ಒಳಗೊಂಡ ಅನೇಕ ವಿಷಯಗಳು ನಡಯುತ್ತಿದ್ದು, ಅವುಗಳನ್ನು ವಿದ್ಯಾರ್ಥಿಗಳು ಅವಲೋಕಿಸಬೇಕು ಎಂದರು. ಮಾಧ್ಯಮ ತಾಂತ್ರಿಕ ಗೋಷ್ಠಿಯಲ್ಲಿ ರಾಜ್ಯದ ಹಲವಾರು ಸಂಶೋಧಕರು. ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ತಂತ್ರಜ್ಞಾನ, ಮನೋವಿಜ್ಞಾನ, ರೇಡಿಯೋ, ಜಾಹೀರಾತು, ಆನ್‌ಲೈನ್ ಪತ್ರಿಕೋದ್ಯಮ, ಕೃತಕ ಬುದ್ಧಿಮತ್ತೆ ಸಂಬಂಧಿಸಿದ ವಿಷಯಗಳ ಕುರಿತು ಪ್ರಬಂಧ ಮಂಡಿಸಿದರು. ಡಾ. ಜೆ.ಎಂ. ಚಂದುನವರ, ಡಾ. ಸಂಜಯಕುಮಾರ ಮಾಲಗತ್ತಿ, ಡಾ. ನರಸಿಂಹ, ಡಾ. ವಿಶ್ವನಾಥ ಚಿಂತಾಮಣಿ, ಡಾ. ಮಹೇಶ ಪಾಟೀಲ, ಡಾ. ಶಕುಂತಲಾ ಸೊರಟೂರ, ಪ್ರೊ. ಸುಧಾ ಹೆಗಡೆ. ಪ್ರೊ. ಸಂದೀಪ, ಡಾ. ಪ್ರಭಾಕರ್ ಕಾಂಬಳೆ ಇದ್ದರು.