ಮುಂಡರಗಿ: ಸರ್ಕಾರ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸೌಲಭ್ಯಕ್ಕಾಗಿ ಅನೇಕ ಯೋಜನೆ ರೂಪಿಸಿದ್ದು, ಕಾರ್ಮಿಕ ಇಲಾಖೆಯಿಂದ ಅಧಿಕೃತವಾಗಿ ಕಾರ್ಮಿಕ ಕಾರ್ಡ್ ಪಡೆದಿರುವ ಎಲ್ಲ ಕಾರ್ಮಿಕರ ಮಕ್ಕಳಿಗೆ ಸರ್ಕಾರದ ಸೌಲಭ್ಯಗಳು ತಲುಪುವಂತಾಗಲಿ ಎಂದು ಶಾಸಕ ಡಾ.ಚಂದ್ರು ಲಮಾಣಿ ಹೇಳಿದರು.
ಅವರು ಸೋಮವಾರ ಪಟ್ಟಣದ ಪುರಸಭೆ ಗಾಂಧಿ ಭವನದಲ್ಲಿ ಕಾರ್ಮಿಕ ಇಲಾಖೆ ನೋಂದಾಯಿತ ಕಟ್ಟಡ ಕಾರ್ಮಿಕರ ಪ್ರತಿಭಾವಂತ ಮಕ್ಕಳಿಗೆ ಸೋಮವಾರ ಲ್ಯಾಪ್ ಟಾಪ್ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಸರ್ಕಾರ ಕಾರ್ಮಿಕರಿಗೆ ಕಾರ್ಮಿಕ ಕಾರ್ಡ್ ಕೊಡುವ ಮೂಲಕ ಮದುವೆ ಸಹಾಯಧನ, ಆಸ್ಪತ್ರೆ ಸೌಲಭ್ಯ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಮೊದಲಾದ ಯೋಜನೆ ನೀಡುತ್ತಿದ್ದು, ಅವುಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು. ಇಲಾಖೆ ಅಧಿಕಾರಿಗಳು ಸರಿಯಾಗಿ ಕಾರ್ಮಿಕರ ಮಕ್ಕಳಿಗೆ ತಲುಪಿಸಬೇಕು. ಸರ್ಕಾರ ಅರ್ಹ ಮತ್ತು ಪ್ರತಿಭಾವಂತ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಪ್ರಗತಿಗಾಗಿ ಉಚಿತ ಲ್ಯಾಪ್ ಟಾಪ್ ಕೊಡುತ್ತಿದ್ದು, ನಿಜವಾದ ಅರ್ಹ ಪ್ರತಿಭಾವಂತ ಕಾರ್ಮಿಕರ ಮಕ್ಕಳಿಗೆ ಅನ್ಯಾಯವಾಗದಂತೆ ಸರ್ಕಾರದ ನಿಯಮದ ಪ್ರಕಾರವೇ ಇಲಾಖೆ ಅಧಿಕಾರಿಗಳು ಲ್ಯಾಪ್ ಟಾಪ್ ನೀಡಬೇಕು. ಒಂದು ವೇಳೆ ಯಾರಾದರೂ ಕಾರ್ಮಿಕರ ಮಕ್ಕಳು ಅನ್ಯಾಯಕ್ಕೊಳಗಾದರೆ ಅದಕ್ಕೆ ಅಧಿಕಾರಿಗಳೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸರ್ಕಾರ ಕಾರ್ಮಿಕರ ಆರೋಗ್ಯಕ್ಕಾಗಿ ಆಸ್ಪತ್ರೆಯ ಖರ್ಚಿಗಾಗಿ ಹಣ ಮೀಸಲಿರಿಸಿದ್ದು, ನಿರ್ದಿಷ್ಟ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೆ ಆ ಹಣ ಮರುಪಾವತಿ ಮಾಡುವ ವ್ಯವಸ್ಥೆ ಇದೆ.ಮುಂಡರಗಿ, ಶಿರಹಟ್ಟಿ ಲಕ್ಷ್ಮೇಶ್ವರದಲ್ಲಿ ಚಿಕಿತ್ಸೆ ಪಡೆಯುವ ಕಾರ್ಮಿಕರಿಗೆ ಮರುಪಾವತಿ ಮಾಡುವ ವ್ಯವಸ್ಥೆ ಇಲ್ಲ. ಹೀಗಾಗಿ ಈ ಭಾಗದ ಆಸ್ಪತ್ರೆಗಳಲ್ಲಿಯೂ ಜಾರಿಗೊಳಿಸಬೇಕೆಂದು ಕಾರ್ಮಿಕ ಇಲಾಖೆ ಸಚಿವರಿಗೆ ತಾವು ಪತ್ರ ಬರೆದಿರುವದಾಗಿ ತಿಳಿಸಿದರು. ನಮ್ಮ ಕ್ಷೇತ್ರದಲ್ಲಿ ಕಾರ್ಮಿಕರಲ್ಲದವರು ಅನೇಕರು ಕಾರ್ಮಿಕ ಕಾರ್ಡ್ ಮಾಡಿಸಿಕೊಂಡಿದ್ದು, ಈ ಬಗ್ಗೆ ಪರಿಶೀಲಿಸಿ, ತಪ್ಪು ಕಂಡು ಬಂದಲ್ಲಿ ರದ್ದು ಮಾಡುವಂತೆ ಸೂಚಿಸಲಾಗಿದೆ ಎಂದರು.ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ, ಹೇಮಗಿರೀಶ ಹಾವಿನಾಳ, ಪ್ರಶಾಂತ ಗುಡದಪ್ಪನವರ, ಕುಮಾರಸ್ವಾಮಿ ಹಿರೇಮಠ, ಅಡಿವೆಪ್ಪ ಚಲವಾದಿ, ರೆಹಮಾನ್‌ಸಾಬ ಹಟ್ಟಿ, ರಾಮಪ್ಪ ಪವಾರ, ಬಸಯ್ಯ ಡಂಬಳಮಠ, ಮೈಲಾರಪ್ಪ ಕಲಕೇರಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಗೊಂದಲದ ಗೂಡಾದ ಲ್ಯಾಪ್ ಟಾಪ್ ವಿತರಣಾ ಕಾರ್ಯಕ್ರಮ: ನಾವು ನಿಜವಾದ ಕಾರ್ಮಿಕರು.ಆದರೆ ಕಾರ್ಮಿಕ ಇಲಾಖೆ ಅಧಿಕಾರಿಗಳು ನಮ್ಮ ಮಕ್ಕಳು ಹೆಚ್ಚಿನ ಅಂಕ ಪಡೆದಿದ್ರೂ ಸಹ ನಮ್ಮ ಮಕ್ಕಳಿಗೆ ಲ್ಯಾಪ್ ಟಾಪ್ ಕೊಡುತ್ತಿಲ್ಲ. 10 ಜನ ಲ್ಯಾಪ್ ಟಾಪ್ ಪಡೆದುಕೊಳ್ಳುವ ಮಕ್ಕಳನ್ನು ಆಯ್ಕೆಮಾಡಿದ್ದು,ಅದರಲ್ಲಿ ಹೆಚ್ಚಿನ ಅಂಕ ಪಡೆದವರನ್ನು ಬಿಟ್ಟು ಕಡಿಮೆ ಅಂಕ ಪಡೆದವರಿಗೆ ಆದ್ಯತೆ ನೀಡಿ ಲ್ಯಾಪ್ ಟಾಪ್ ನೀಡಲಾಗುತ್ತಿದೆ. ಇದು ಅಧಿಕಾರಿಗಳೇ ಕಾರ್ಮಿಕರ ಮಕ್ಕಳಿಗೆ ಮಾಡುತ್ತಿರುವ ಅನ್ಯಾಯವಾಗಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಸಮ್ಮುಖದಲ್ಲಿಯೇ ಕೆಲವು ಕಾರ್ಮಿಕರರು ಇಲಾಖೆ ಅಧಿಕಾರಿಗಳ ವಿರುದ್ಧ ಆರೋಪ ಮಾಡಿದರು. ಕಾರ್ಮಿಕ ಬಾಷುಸಾಬ ಕಿನ್ನಾಳ ಅವರ ಮಗಳು ಸಿಮ್ರಾನ ಕಿನ್ನಾಳ ಶೇ.78.88 ರಷ್ಟು ಅಂಕ ಪಡೆದಿದ್ದು, ಆ ವಿದ್ಯಾರ್ಥಿನಿ ಹೆಸರನ್ನು ಲ್ಯಾಪ್ ಟಾಪ್ ಪಡೆದುಕೊಳ್ಳಲಿರುವ 10 ವಿದ್ಯಾರ್ಥಿಗಳ ಆಯ್ಕೆ ಪಟ್ಟಿಯಲ್ಲಿ ಸೇರಿಸಿದ್ದು, ನಂತರ ಕೈಬಿಡಲಾಗಿದೆ ಎಂದು ಪಾಲಕರು,ಕಾರ್ಮಿಕರು ತಕರಾರು ಮಾಡಿದರು. ಹಾಗೇ ವಿರುಪಾಪುರ ಗ್ರಾಮದ ಅಶ್ವಿನಿ ಮುದ್ಲಾಪುರ ಎಂಬ ವಿದ್ಯಾರ್ಥಿನಿ ಎಸ್ಸೆಸ್ಸೆಲ್ಸಿಯಲ್ಲಿ ಶೇ 85 ರಷ್ಟು ಅಂಕ ಪಡೆದರೂ ಅವಳಿಗಿಂತ ಕಡಿಮೆ ಅಂಕ ಪಡೆದವರನ್ನು ಆಯ್ಕೆ ಮಾಡಿ ಲ್ಯಾಪ್ ಟಾಪ್ ಕೊಡಲಾಗಿದೆ ಎಂದು ಪಾಲಕರು ದೂರಿದರು.ಇದಕ್ಕೆ ಶಾಸಕ ಡಾ. ಚಂದ್ರು ಲಮಾಣಿ ಪ್ರತಿಕ್ರಿಯಿಸಿ, ಪಟ್ಟಿಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಕೊಡಲಾಗುವದು. ಕಾರ್ಮಿಕರ ದೂರಿನಂತೆ ಅರ್ಹರಿಗೆ ಆಯ್ಕೆಗೊಳಿಸಿಲ್ಲ ಎನ್ನುವುದಾದರೆ ಅಂತಹ ಮಕ್ಕಳಿಗೆ ನಿಜವಾಗಿಯೂ ಅನ್ಯಾಯವಾಗಿದ್ದರೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೇ ತಮ್ಮ ವೇತನದ ಹಣದಲ್ಲಿ ಲ್ಯಾಪ್ ಟಾಪ್ ವ್ಯವಸ್ಥೆ ಮಾಡಬೇಕು ಎಂದರು. ಕೆಲ ಕಾರ್ಮಿಕರು ಈಗಲೇ ಕೈಬಿಟ್ಟ ವಿದ್ಯಾರ್ಥಿಗೆ ಲ್ಯಾಪ್ ಟಾಪ್ ಕೊಡಬೇಕು ಎಂದು ಒತ್ತಾಯಿಸಿ ಅಧಿಕಾರಿಗಳೊಂದಿಗೆ ವಾದ ಮಾಡಿದರು. ಕಾರ್ಮಿಕ ಇಲಾಖೆಯ ಅಧಿಕಾರಿ ಭಗವಂತ ಪತ್ತಾರ, ಭೀಮರಾವ್ ಹಾದಿಮನಿ ಪರಿಶೀಲಿಸಿ ಲ್ಯಾಪ್‌ಟಾಪ್ ಕೊಡುವ ಜವಾಬ್ದಾರಿ ವಹಿಸಿಕೊಂಡರು. ಇದರಿಂದ ಕಾರ್ಯಕ್ರಮದಲ್ಲಿ ಕೆಲ ಸಮಯ ಗೊಂದಲ ಉಂಟಾಯಿತು.