ಕೈಗಾರಿಕೆ, ಶೈಕ್ಷಣಿಕ ವಲಯ ಮಧ್ಯೆ ಅಂತರ ತಗ್ಗಲಿ

KannadaprabhaNewsNetwork | Published : Nov 18, 2023 1:00 AM

ಸಾರಾಂಶ

ಮಧ್ಯ ಕರ್ನಾಟಕದ ಕೈಗಾರಿಕೋದ್ಯಮಿಗಳ ಸಭೆ ಉದ್ಘಾಟಿಸಿದ ಬೆಳಗಾವಿ ಸರ್ ಎಂ.ವಿಶ್ವೇಶ್ವರಯ್ಯ ತಾಂತ್ರಿಕ ಮಹಾ ವಿದ್ಯಾಲಯ ಕುಲಪತಿ ಡಾ.ಎಸ್.ವಿದ್ಯಾಶಂಕರ್ ಹೇಳಿಕೆ

ಮಧ್ಯ ಕರ್ನಾಟಕದ ಕೈಗಾರಿಕೋದ್ಯಮಿಗಳ ಸಭೆ ಉದ್ಘಾಟಿಸಿದ ಬೆಳಗಾವಿ ಸರ್ ಎಂ.ವಿಶ್ವೇಶ್ವರಯ್ಯ ತಾಂತ್ರಿಕ ಮಹಾ ವಿದ್ಯಾಲಯ ಕುಲಪತಿ ಡಾ.ಎಸ್.ವಿದ್ಯಾಶಂಕರ್ ಹೇಳಿಕೆ

ಕನ್ನಡಪ್ರಭ ವಾರ್ತೆ ದಾವಣಗೆರೆ

ಕೈಗಾರಿಕೆ ಮತ್ತು ಶೈಕ್ಷಣಿಕ ವಲಯದ ಮಧ್ಯೆ ಅಷ್ಟಾಗಿ ಸಂವಹನ ನಡೆಯುತ್ತಿಲ್ಲ, ಕಾಲೇಜು ಹಾಗೂ ಉದ್ಯಮಿಗಳ ಮಧ್ಯೆ ಏರ್ಪಟ್ಟಿರುವ ಕಂದಕ ತಗ್ಗಿಸುವುದೇ ಇಂದು ಬಹುದೊಡ್ಡ ಸವಾಲಾಗಿ ಕಾಡುತ್ತಿದೆ ಎಂದು ಬೆಳಗಾವಿಯ ಸರ್ ಎಂ.ವಿಶ್ವೇಶ್ವರಯ್ಯ ತಾಂತ್ರಿಕ ಮಹಾ ವಿದ್ಯಾಲಯದ ಕುಲಪತಿ ಡಾ.ಎಸ್.ವಿದ್ಯಾಶಂಕರ್ ತಿಳಿಸಿದರು.

ನಗರದ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರ ಮಧ್ಯ ಕರ್ನಾಟಕದ ಕೈಗಾರಿಕೋದ್ಯಮಿಗಳ ಸಭೆಯನ್ನು ವರ್ಚ್ಯುವಲ್ ಮೂಲಕ ಉದ್ಘಾಟಿಸಿ ಮಾತನಾಡಿ, ಕೈಗಾರಿಕೆಗಳು, ಇಂಜಿನಿಯರಿಂಗ್ ಕಾಲೇಜುಗಳು ಪರಸ್ಪರರ ಅಗತ್ಯತೆಗಳಿಗೆ ಸ್ಪಂದಿಸಿದಾಗ ಬದಲಾವಣೆ ಸಾಧ್ಯ ಎಂದರು. ಕಾಲೇಜುಗಳಿಂದ ಗುಣಮಟ್ಟದ ಇಂಜಿನಿಯರ್ ಗಳನ್ನು ಕೊಡುವುದು ನಮ್ಮ ಉದ್ದೇಶ. ಈ ಹಿನ್ನೆಲೆಯಲ್ಲಿ ಕೈಗಾರಿಕೋದ್ಯಮಿಗಳೊಂದಿಗೆ ರಾಜ್ಯಾದ್ಯಂತ ಸಭೆ ನಡೆಸಲಾಗುತ್ತಿದ್ದು, ಶೈಕ್ಷಣಿಕ ಕ್ಷೇತ್ರ ಹಾಗೂ ಕೈಗಾರಿಕೆಗಳ ಮಧ್ಯೆ ಇರುವ ಅಂತರವನ್ನು ತಗ್ಗಿಸಲು ಇದು ನೆರವಾಗುತ್ತದೆ ಎಂದು ಹೇಳಿದರು.

ಕೈಗಾರಿಕೆಗಳು, ಶೈಕ್ಷಣಿಕ ಸಂಸ್ಥೆಗಳು ಪರಸ್ಪರ ಸಹಭಾಗಿತ್ವದಲ್ಲಿ ಕೆಲಸ ಮಾಡಿದಾಗ ಹೆಚ್ಚು ಪ್ರಗತಿ ಸಾಧ್ಯವಾಗಲಿದೆ. ದೇಶದ ಕೈಗಾರಿಕಾ ಪ್ರಗತಿಯಲ್ಲಿ ಸಣ್ಣ ಮತ್ತು ಮಧ್ಯಮ ಉದ್ಯಮಗಳೇ ಶೇ.60ರಷ್ಟು ಪಾಲು ಹೊಂದಿವೆ. ಈ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಉದ್ಯಮಗಳೊಂದಿಗೆ ಮಾತುಕತೆಯನ್ನು ವಿಟಿಯು ನಡೆಸಿದೆ. ಈಗಾಗಲೇ 10-12 ಸಭೆ ನಡೆಸಿ, ಪರಸ್ಪರರ ಸಮಸ್ಯೆ, ನಿರೀಕ್ಷೆ, ಅಗತ್ಯತೆ ಅರಿಯುವ ಪ್ರಯತ್ನ ವಿಟಿಯು ಮಾಡಿದೆ. ಇದಕ್ಕಾಗಿ ಪ್ರತ್ಯೇಕ ತಂತ್ರಾಂಶ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ವಿವರಿಸಿದರು.

ವಿಟಿಯು ಕುಲ ಸಚಿವ ಡಾ.ಬಿ.ಇ.ರಂಗಸ್ವಾಮಿ ಮಾತನಾಡಿ, ಕೈಗಾರಿಕೆಗಳು, ಇಂಜಿನಿಯರಿಂಗ್ ಕಾಲೇಜುಗಳು ಪರಸ್ಪರ ಸಹಭಾಗಿತ್ವದಲ್ಲಿ ಕೆಲಸ ಮಾಡಬೇಕಾಗ ಅಗತ್ಯವಿದೆ. ಕೈಗಾರಿಕೆಗಳ ಅಗತ್ಯತೆ ಪೂರೈಸಬೇಕಾದ್ದು ಶೈಕ್ಷಣಿಕ ಕ್ಷೇತ್ರದ ಜವಾಬ್ದಾರಿ. ವಿದ್ಯಾರ್ಥಿಗಳಿಗೆ ಕೈಗಾರಿಕೆಗಳಲ್ಲಿ ಅನುಭವ, ಅವಕಾಶಗಳು ಸಿಗಬೇಕು. ಕೈಗಾರಿಕೆಗಳ ಅಗತ್ಯತೆಗೆ ತಕ್ಕಂತೆ ವಿದ್ಯಾರ್ಥಿಗಳ ತರಬೇತುಗೊಳಿಸಲು ಪಠ್ಯಕ್ರಮದಲ್ಲಿ ಬದಲಾವಣೆ ತಂದುಕೊಳ್ಳಬೇಕು. ಈ ನಿಟ್ಟಿನಲ್ಲಿ ವಿಟಿಯು ಸಕಾರಾತ್ಮಕ ಹೆಜ್ಜೆ ಇಡುತ್ತಿದೆ ಎಂದರು.

ಕೈಗಾರಿಕಾ ಕ್ಷೇತ್ರದ ಅನುಭವಿಗಳು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸಂವಾದ, ವಿಶೇಷ ಉಪನ್ಯಾಸದ ಮೂಲಕ ಮಾರ್ಗದರ್ಶನ ನೀಡಬಹುದು. ಕುಶಲ ಮಾನವ ಸಂಪನ್ಮೂಲ ಸೇರಿದಂತೆ ಕೈಗಾರಿಕೆಗಳ ಈಗಿನ ಅಗತ್ಯತೆಗಳಿಗೆ ಸ್ಪಂದಿಸುವುದು, ಸಮಸ್ಯೆಗಳಿಗೆ ಪರಿಹಾರ ಒದಗಿಸುವುದೂ ಅಗತ್ಯ. ಈ ಹಿನ್ನೆಲೆಯಲ್ಲಿ ಕಾಲೇಜು ಹಾಗೂ ಕೈಗಾರಿಕೆ

ಗಳು ಪರಸ್ಪರರ ಅವಶ್ಯಕತೆಗಳಿಗೆ ಸ್ಪಂದಿಸಬೇಕು. ಜ್ಞಾನ ವಿನಿಮಯದ ಮೂಲಕ ನಿಜವಾದ ಸಹಭಾಗಿತ್ವವು ಬರಬೇಕಿದೆ ಎಂದು ಅಭಿಪ್ರಾಯಪಟ್ಟರು.

ಕಾಲೇಜು ಪ್ರಾಚಾರ್ಯ ಡಾ.ಡಿ.ಪಿ.ನಾಗರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಮಾಲಿನ್ಯ ಮಂಡಳಿ ಪ್ರಾದೇಶಿಕ ಅಧಿಕಾರಿ ಡಾ.ಎಚ್.ಲಕ್ಷ್ಮೀಕಾಂತ್‌, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ರಾಜೇಂದ್ರ ನಾಮದೇವ ಕದಮ್‌, ಕಾರ್ಯಕ್ರಮ ಸಂಯೋಜನಾಧಿಕಾರಿ, ಯಾಂತ್ರಿಕ ವಿಭಾಗದ ಪ್ರಾಧ್ಯಾಪಕ ಡಾ.ಶೇಖರಪ್ಪ ಬಿ.ಮಲ್ಲೂರು, ವಿವಿ ಸಂಶೋಧನೆ ಹಾಗೂ ಆವಿಷ್ಕಾರ ವಿಭಾಗದ ಮುಖ್ಯಸ್ಥ ಸಂತೋಷ ಇಟ್ಟಣಗಿ ಇತರರು ಇದ್ದರು. ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಹಾವೇರಿ ಜಿಲ್ಲೆಗಳ ಕೈಗಾರಿಕೋದ್ಯಮಿಗಳು, ಇಂಜಿನಿಯರಿಂಗ್ ವಿದ್ಯಾರ್ಥಿಗಳಿದ್ದರು. ................. ದಾವಣಗೆರೆ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ 10 ಕೋಟಿ ರು. ವೆಚ್ಚದಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರ ನಿರ್ಮಿಸಿ, ಅಗತ್ಯ ಯಂತ್ರೋಪಕರಣ ಒದಗಿಸಲಾಗಿದೆ. ಸ್ಥಳೀಯ ಇಂಜಿನಿಯರಿಂಗ್‌, ಡಿಪ್ಲೋಮಾ, ಐಟಿಐ ಕಾಲೇಜುಗಳು ಒಡಂಬಡಿಕೆ ಮಾಡಿಕೊಳ್ಳುವ ಮೂಲಕ ಕೌಶಲ್ಯ ಅಭಿವೃದ್ಧಿ ಕೇಂದ್ರದ ಪ್ರಯೋಜನ ಪಡೆದುಕೊಳ್ಳಬೇಕು.

ಡಾ.ಬಿ.ಇ.ರಂಗಸ್ವಾಮಿ, ಕುಲ ಸಚಿವರು, ವಿಟಿಯು.

Share this article