ನೆರೆ ನಿರ್ವಹಣೆಗೆ ಸರ್ಕಾರ ಅನುದಾನ ನೀಡಲಿ: ಈರಣ್ಣ ಕಡಾಡಿ

KannadaprabhaNewsNetwork | Published : Aug 5, 2024 12:39 AM

ಸಾರಾಂಶ

ಪ್ರವಾಹ ಸಂತ್ರಸ್ತರಿಗೆ ರಾಜ್ಯ ಸರ್ಕಾರ ತಾಲೂಕಾಡಳಿತ, ಜಿಲ್ಲಾಡಳಿತಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ಸಂತ್ರಸ್ತರ ನೆರವಿಗೆ ಧಾವಿಸಬೇಕು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಮೂಡಲಗಿ

ಜಿಲ್ಲೆಯಲ್ಲಿ ಪಶ್ಚಿಮ ಘಟದಲ್ಲಿ ಸುರಿದ ಮಳೆಯಿಂದ ಜಿಲ್ಲೆಯ ಘಟಪ್ರಭಾ, ಕೃಷ್ಣಾ ಮತ್ತು ಮಲಪ್ರಭಾ ನದಿಗಳ ಪ್ರವಾಹ ಸಂತ್ರಸ್ತರಿಗೆ ರಾಜ್ಯ ಸರ್ಕಾರ ತಾಲೂಕಾಡಳಿತ, ಜಿಲ್ಲಾಡಳಿತಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ಸಂತ್ರಸ್ತರ ನೆರವಿಗೆ ಧಾವಿಸಬೇಕು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಆಗ್ರಹಿಸಿದರು.

ಶನಿವಾರ ಮೂಡಲಗಿ ತಾಲೂಕಿನ ಘಟಪ್ರಭಾ ನದಿ ತೀರದ ಹುಣಶ್ಯಾಳ ಪಿಜಿ, ವಡೇರಟ್ಟಿ, ಮಸಗುಪ್ಪಿ, ಪಟಗುಂದಿ, ಮುನ್ಯಾಳ ಗ್ರಾಮಗಳ ಪ್ರವಾಹ ಸಂತ್ರಸ್ತರ ಕಾಳಜಿ ಕೇಂದ್ರಕ್ಕೆ ಹಾಗೂ ಮಸಗುಪ್ಪಿ ಸೇತುವೆ ವೀಕ್ಷಿಸಿ ಗುರ್ಲಾಪುರ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂಡಲಗಿ ತಾಲೂಕು ಮತ್ತು ಅರಭಾವಿ ಕ್ಷೇತ್ರದಲ್ಲಿ ಈ ಪ್ರವಾಹದಲ್ಲಿ ಏಳು ಸೇತುವೆಗಳು, ಸುಮಾರು 11500 ಹೆಕ್ಟೇರ್ ಬೆಳೆ ಮತ್ತು ತೋಟಗಾರಿಕೆ ಬೆಳೆ, 2000 ಮನೆಗಳು ಜಲಾವೃತ್ತಗೊಂಡು ಜನ ಕಂಗಾಲಾಗಿದ್ದಾರೆ ಎಂದರು.

ಸೋಮವಾರ ಜಿಲ್ಲೆಗೆ ಆಗುಮಿಸುತ್ತಿರುವ ಮುಖ್ಯಗಳಿಗೆ ಜಿಲ್ಲಾಡಳಿತ ಬೆಳಗಾವಿ ಜಿಲ್ಲೆಯ ಪ್ರವಾಹ ಸಮಸ್ಯೆಯ ಗಂಭೀರತೆ ಮನವರಿಕೆ ಮಾಡಿಕೋಡುವಲ್ಲಿ ವಿಫಲತೆ ಆಗಬಾರದು ಎಂದ ಅವರು, ಜಿಲ್ಲೆಯ ಇಬ್ಬರು ಸಚಿವರು ಸಹ ಮುಖ್ಯಮಂತ್ರಿಗಳಿಗೆ ಒತ್ತಡ ಹಾಕಿ ದೊಡ್ಡ ಜಿಲ್ಲೆಯಾದ ಬೆಳಗಾವಿ ಜಿಲ್ಲೆಗೆ ಮೂರು ಜಿಲ್ಲೆಗಳ ಪರಿಹಾರಕ್ಕೆ ಆಗ್ರಹಿಸಬೇಕೆಂದರು.

ಮೂಡಲಗಿ ತಾಲೂಕಿನ ಮಸಗುಪ್ಪಿ ಗ್ರಾಮದ ತಿಗಡಿ ಸೇತುವೆ ಎತ್ತರ ಮಾಡುವುದ ಜೊತೆಗೆ ಹೆಚ್ಚು ಕಮಾನು ನಿರ್ಮಿಸುವುದರಿಂದ ನೀರು ಪಾಸಾಗಿ ಮಸಗುಪ್ಪಿ ಗ್ರಾಮ ಜಲಾವೃತ್ತಗೊಳ್ಳುವುದು ಕಡಿಮೆ ಆಗುತ್ತದೆ. ಮಸಗುಪ್ಪಿ ಗ್ರಾಮ ಸ್ಥಳಾಂತರ ಮಾಡುವ ಖರ್ಚನ್ನು ಸೇತುವೆಗೆ ಮಾಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿರಿಗೆ ಆಗ್ರಹಿಸಿದರು.

ಕಾಳಜಿ ಕೇಂದ್ರದಲ್ಲಿ ಸಂತ್ರಸ್ತರ ಹವಾಲು ಸ್ವೀಕರಿಸಿದರು. ಕೇಂದ್ರದಲ್ಲಿ ವಿದ್ಯಾರ್ಥಿಗಳನ್ನು ಕುಂದು-ಕೊರತೆ ವಿಚಾರಿಸಿದರು. ಪಟಗುಂದಿ ಗ್ರಾಮದಲ್ಲಿ ಸಂತ್ರಸ್ತರ ಅಹವಾಲು ಆಲಿಸಿ ನಿಜವಾದ ಸಂತ್ರಸ್ತರಿಗೆ ಸರ್ಕಾರದ ಸೌಲಭ್ಯ ಮುಟ್ಟಲು ಪ್ರಾಮಾಣಿಕ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಮೂಡಲಗಿ ತಹಸೀಲ್ದಾರ್‌ ಡಾ.ಮಹಾದೇವ ಸನಮುರಿ, ಸಿಡಿಪಿಒ ಯಲ್ಲಪ್ಪ ಗದಾಡಿ, ತಾಪಂ ಇಒ ಎಫ್. ಜಿನನ್ನವರ, ಬಿಇಒ ಅಜೀತ ಮನ್ನಿಕೇರಿ, ಸಿಪಿಐ ಶ್ರೀಶೈಲ ಬ್ಯಾಕೂಡ, ಕೃಷಿ ಅಧಿಕಾರಿ ಎಂ.ಎಂ. ನದಾಫ್, ಪಶು ಇಲಾಖೆಯ ಡಾ.ಮೋಹನ್‌ ಕಮತ, ಹೆಸ್ಕಾಂ ಅಧಿಕಾರಿ ಎಂ.ಎಸ್. ನಾಗನ್ನವರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾಪಂ ಪಿಡಿಒ ಹಾಗೂ ಗ್ರಾಮ ಆಡಳಿತಾಧಿಕಾರಿಗಳು ಮತ್ತಿತರರು ಇದ್ದರು.

Share this article