ಕನ್ನಡಪ್ರಭ ವರ್ತೆ ಕಲಬುರಗಿ
ಕಲಬುರಗಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ದಕ್ಷಿಣ ವಲಯ ವತಿಯಿಂದ ನಡೆದ ಕಲ್ಬುರ್ಗಿ ವಿಭಾಗ ಮಟ್ಟದ ಎರಡನೇ ದಾಸ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನದಿಂದ ಅವರು ಮಾತನಾಡಿದರು.
ಕಲ್ಯಾಣ ಕರ್ನಾಟಕವು ದಾಸ ಸಾಹಿತ್ಯದ ಆಡಂಬೊಲವಾಗಿದೆ. ಈ ವಿಭಾಗದಲ್ಲಿಯೇ ಅತಿಹೆಚ್ಚು ದಾಸರು ಆಗಿ ಹೋಗಿದ್ದಾರೆ. ಜಾತ್ಯಾತೀತ, ಮಠಾತೀತವಾಗಿ, ಮತಾತೀತವಾಗಿ ಎಲ್ಲರಿಗೂ ದಾಸರ ಹಾಡುಗಳು ಮುದ ನೀಡುತ್ತಿವೆ ಎಂದಿರುವ ಹಿರಿಯ ವಿದ್ವಾಂಸರಾದ ಡಾ. ವಾಸುದೇವ ಅಗ್ನಿಹೋತ್ರಿ ದಾಸ ಸಾಹಿತ್ಯ ಕ್ಷೇತ್ರದಲ್ಲಿ ಇನ್ನೂ ಸಾಕಷ್ಟು ಕೆಲಸಗಳನ್ನು ಮಾಡಬೇಕಾಗಿದೆ. ಮುಖ್ಯವಾಗಿ ತರುಣ ಜನಾಂಗಕ್ಕೆ ಮನುಷ್ಯ ಜನ್ಮದ ಮಹತ್ವದ ಅರಿವು ಮೂಡಿಸಬೇಕಿದೆ. ಇದಕ್ಕಾಗಿ ಅಧ್ಯಯನ ಮತ್ತು ಸಂಶೋಧನಾ ಕೇಂದ್ರಗಳನ್ನು ತೆಗೆಯಬೇಕಾಗಿದೆ ಎಂದರು.ಮಾನ್ವಿ ಸುತ್ತುಮುತ್ತಲಿನ ಲಿಂಗಸುಗೂರು, ಮಾನ್ವಿ, ಕಲ್ಲೂರು, ಪಂಚಮುಖಿ, ಮೊಸರಕಲ್ ಉತ್ತನೂರು ಮೊದಲಕಲ್, ಗೊರೆಬಾಳ ಮೊದಲಾದ ಸ್ಥಳಗಳಲ್ಲಿ ದಾಸರು ಮತ್ತು ದಾಸ ಸಾಹಿತ್ಯದ ಮಹತ್ವದ ಅಂಶಗಳಿದ್ದು ಈ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹಾಗೂ ಅಧ್ಯಯನ ಸಂಶೋಧನೆಗೆ ಪೂರಕವಾಗಿ ಮಾನವೀಯ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗುವುದು ಉತ್ತಮ ಎಂದರು.
ದಾಸ ಸಾಹಿತ್ಯವು ದೇಸಿ ಸಾಹಿತ್ಯವಾಗಿದ್ದು ಕನ್ನಡ ಸಾಹಿತ್ಯದ ತವನಿಧಿಗಳಲ್ಲೊಂದು. ಭಕ್ತಿ ಜ್ಞಾನ ಸಾಮಾಜಿಕ ಸ್ಪಂದನೆ ಹರಿದಾಸ ಸಾಹಿತ್ಯದ ಮೂಲ ಉದ್ದೇಶವಾಗಿದ್ದು ಕಲ್ಯಾಣ ಕರ್ನಾಟಕ ಭಾಗದಲ್ಲಿ ದಾಸ ಸಾಹಿತ್ಯವು ಹುಲಸಾಗಿ ಬೆಳೆದಿದೆ. ಶರಣ ಸಾಹಿತ್ಯ ಮತ್ತು ದಾಸ ಸಾಹಿತ್ಯವು ಸಾಹಿತ್ಯ ಕ್ಷೇತ್ರದ ಎರಡು ಕಣ್ಣುಗಳಂತಿದ್ದು ಶರಣರ ಕಾಯಕ ದಾಸೋಹ ಸಂಸ್ಕೃತಿಯ ಮುಂದುವರೆದ ರೂಪವೇ ದಾಸ ಸಾಹಿತ್ಯವಾಗಿದೆ ಈ ದೇಶದ ಮೂಲ ಸಂಸ್ಕೃತಿಯನ್ನು ಕನ್ನಡದಲ್ಲಿ ಬಿತ್ತಿದ ನಿಜಾಮರ ಕಾಲದ ನಿಜವಾದ ವಾರಸುದಾರರು ಹರಿದಾಸ ರಾಗಿದ್ದರು ಎಂದರು.
ವ್ಯಕ್ತಿತ್ವ ನಿರ್ಮಾಣ ದಾಸ ಸಾಹಿತ್ಯದ ಧ್ಯೇಯ: ಕನ್ನಡ ಸಾಹಿತ್ಯದ ತವನಿಧಿಗಳಲ್ಲೊಂದಾದ ದಾಸ ಸಾಹಿತ್ಯವು ವ್ಯಕ್ತಿತ್ವ ನಿರ್ಮಾಣದ ಧ್ಯೇಯವನ್ನು ಹೊಂದಿದೆ. ದಾಸ ಸಾಹಿತ್ಯವು ಭಕ್ತಿ ಸಾಹಿತ್ಯದ ಪ್ರಾತಿನಿಧಿಕವಾಗಿವೆ. ಜೈನರ ಕಾಲದಲ್ಲಿ ಜಿನ ಭಕ್ತಿಯಾಗಿ, ಶರಣರ ಕಾಲದಲ್ಲಿ ಶಿವಭಕ್ತಿಯಾಗಿ, ದಾಸರ ಕಾಲದಲ್ಲಿ ವಿಷ್ಣು ಭಕ್ತಿಯಾಗಿ ಹೊರಹೊಮ್ಮಿತು. ದೈವಭಕ್ತಿ ಕೇಂದ್ರಿತ ಚಿಂತನೆಗಳ ಕೀರ್ತನೆಗಳನ್ನು ದಾಸರು ರಚಿಸಿದರೂ ಮಾನವ ಘನತೆಯನ್ನು ಎತ್ತಿ ಹಿಡಿದು, ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು. ಯಾವುದೇ ನಿರ್ದಿಷ್ಟ ಸಮಾಜದ ಪರವಾಗಿ ದಾಸರ ಕೀರ್ತನೆಗಳು ಇರದೇ ಸರ್ವ ಸಮಾಜದ ಜನರನ್ನು ಉದ್ದೇಶಿಸಿ ಬರೆದವುಗಳಾಗಿವೆ. ಸರ್ವ ಜನಾಂಗದ ಶ್ರೇಯಸ್ಸು ಬಯಸುವುದೇ ದಾಸ ಸಾಹಿತ್ಯದ ಉದ್ದೇಶವಾಗಿದೆ ಎಂದು ದಾಸ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ.ವಾಸುದೇವ ಅಗ್ನಿಹೋತ್ರಿ ಹೇಳಿದರು.