ಅನುದಾನ ಸಮರ್ಪಕ ಬಳಕೆಯಾಗಲಿ: ಶಾಸಕ ನಾಯಕ

KannadaprabhaNewsNetwork | Published : Dec 6, 2024 9:01 AM

ಸಾರಾಂಶ

Let the grant be used adequately: MLA leader

-ಹುಣಸಗಿ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆ

-------

ಕನ್ನಡಪ್ರಭ ವಾರ್ತೆ ಹುಣಸಗಿ

ಪಟ್ಟಣ ಪಂಚಾಯಿತಿ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಪಟ್ಟಣದ ಅಭಿವೃದ್ಧಿಗೆ ಎಲ್ಲಾ ಸದಸ್ಯರು ಒತ್ತು ನೀಡಬೇಕೆಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಹೇಳಿದರು.

ಪಟ್ಟಣದ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಜನರಿಗೆ ಕುಡಿವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ರಸ್ತೆ, ಚರಂಡಿ, ವಿದ್ಯುತ್ ಸಂಪರ್ಕ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಬೇಕು ಹಾಗೂ ಅಮೃತ 2.0 ಅಡಿಯಲ್ಲಿ 24*7 ಕುಡಿವ ನೀರಿನ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದಲ್ಲಿ ಕುಡಿವ ನೀರಿನ ಸಮಸ್ಯೆ ಆಗದಂತೆ ನಿಗಾವಹಿಸಿ, ಈಗಾಗಲೇ ಇರುವ 10 ಬಾವಿಗಳಲ್ಲಿ ಕುಡಿಯಲು ನೀರು ಯೋಗ್ಯವಿದ್ದರೆ ಅಂತಹವುಗಳಿಗೆ ಅಗತ್ಯ ಕೆಲಸ ನಿರ್ವಹಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು. ಉಳಿದವು ಅವುಗಳ ಯಾವ ರೀತಿ ಉಪಯೋಗಿಸಬಹುದೆಂದು ಪರಿಶೀಲಿಸಿ ವರದಿ ನೀಡಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ತ್ಯಾಜ್ಯ ವಿಲೇವಾರಿ ಘಟಕಕ್ಕೆ ಈಗಾಗಲೇ ಜಮೀನು ಇದ್ದು, ಅಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸುವ ಸಿದ್ಧತೆ ಮಾಡಿಕೊಂಡಿದೆ ಎಂದು ಸಭೆಯಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಿದ್ರಾಮಪ್ಪ ಶಖಾಪುರ ಗಮನಕ್ಕೆ ತಂದರು. ಇದಕ್ಕೆ ಸದಸ್ಯ ಮಲ್ಲು ಹೆಬ್ಬಾಳ ಅವರು ಪ್ರತಿಕ್ರಿಯಿಸಿ, ಸುಮಾರು ವರ್ಷಗಳಿಂದ ಬಡ ರೈತರು ಜಮೀನು ಸಾಗುವಳಿ ಮಾಡಿಕೊಂಡಿದ್ದಾರೆ. ಬೆಳೆ ಕೂಡ ಬೆಳೆದಿದ್ದಾರೆ. ಹೀಗಾಗಿ ಬೇರೆ ಕಡೆಗೆ ವಿಲೇವಾರಿ ಘಟಕ ಸ್ಥಾಪಿಸುವಂತೆ ಒತ್ತಾಯಿಸಿದರು.

ಸದಸ್ಯ ಸಿದ್ರಾಮಪ್ಪ ಮುದಗಲ್ ಹಾಗೂ ಶರಣು ದಂಡಿನ್ ಅವರು, ದೇವಾಪುರ ಕುಡಿವ ನೀರಿನ ಬಾವಿಗೆ ನಿರಂತರ ವಿದ್ಯುತ್ ಒದಗಿಸಿದರೆ ಸಾರ್ವಜನಿಕರಿಗೆ ನೀರಿನ ಅನುಕೂಲ ಆಗಲಿದೆ. ಪಟ್ಟಣದಲ್ಲಿ ಹಳೆಯ ಕಂಬಳ ತೆಗೆದು ಹೊಸದಾಗಿ ವಿದ್ಯುತ್ ವೈರ್ ಜೋಡಣೆ ಸಹಿತ ಕಂಬಗಳಿಗೆ ನಂಬರೀಕರಣ ಶೀಘ್ರ ನೆಡುಹಾಕಬೇಕು ಎಂದು ಕೆಲವೊಂದು ಮಹತ್ವದ ಸೌಕರ್ಯಗಳ ಕುರಿತು ಪ್ರಸ್ತಾಪಿಸಿದರು.

ಒಮ್ಮತ: ಚನ್ನಮ್ಮ ವೃತ್ತದಿಂದ ನೀಲಕಂಠೇಶ್ವರ ದೇವಸ್ಥಾನದವರಿಗೂ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದ ವಿಷಯವಾಗಿ ಸಭೆಯಲ್ಲಿ ಎಲ್ಲಾ ಸದಸ್ಯರು ಒಮ್ಮತ ಸೂಚಿಸಿದರು. ರಸ್ತೆ ಇಕ್ಕಟಾಗಿದ್ದು, ಹದ್ದುಮೀರಿದ ಸಣ್ಣಪುಟ್ಟ ಕಟ್ಟಡ ತೆರವುಗೊಳಿಸಿ, ರಸ್ತೆ ಅಗಲೀಕರಿಸುವುದು ಸೂಕ್ತವಾಗಿದೆ ಎಂದು ನಿರ್ಣಯ ಕೈಗೊಂಡಾಗ, 12ನೇ ವಾರ್ಡ್ ಹಾಗೂ 13 ನೇ ವಾರ್ಡ್ ಗಳಲ್ಲಿ ಅಂಗನವಾಡಿ ಕಟ್ಟಡವಿಲ್ಲ. ಕಟ್ಟವಿದ್ದರೂ ಅಂಗನವಾಡಿ ಕಾರ್ಯಕರ್ತೆ ಹುದ್ದೆ ಕೊರತೆ ಇದೆ ಎಂದು ಸಮಸ್ಯೆ ಕುರಿತು ಸಭೆಯಲ್ಲಿ ಸದಸ್ಯರು ಬಿಚ್ಚಿಟ್ಟರು.

ನಂತರ ಬಸವೇಶ್ವರ ವೃತ್ತದ ಮೆಟ್ಟಿಲು ನಿರ್ಮಾಣ ಹಾಗೂ ಕಾನೂನು ಸಲಹೆಗಾರ ನೇಮಕ, ವಾಣಜ್ಯ ಕಟ್ಟಡ ದುರಸ್ತಿಗೊಳಿಸುವುದು ಸೇರಿದಂತೆ ಪ್ರಮುಖ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಿ ಅನುಮತಿಸಲಾಯಿತು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ತಿಪ್ಪಣ್ಣ ರಾಠೋಡ, ಉಪಾಧ್ಯಕ್ಷ ಶಾಂತಣ್ಣ ಮಲಗಲದಿನ್ನಿ, ಮುಖ್ಯಾಧಿಕಾರಿ ಸಿದ್ರಾಮಪ್ಪ ಹಾಗೂ ಸದಸ್ಯರಾದ ಜಯಶ್ರೀ ವಾಲಿ, ಅನ್ನಮ್ಮ ಸಿ. ಮಲಗಲದಿನ್ನಿ, ನಿಖಿತಾ, ಕಾಶೀಮಸಾಬ ಟೊಣ್ಣೂರು, ಭೀಮವ್ವ ಕಡಿಮನಿ, ಮಲ್ಲಣ್ಣ , ಮರಲಿಂಗಪ್ಪ ನಾಟೇಕರ ಸೇರಿದಂತೆ ಅಧಿಕಾರಿಗಳು ಇದ್ದರು.

-----

ಫೋಟೋ: ಹುಣಸಗಿ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆಯ ವಹಿಸಿ ಶಾಸಕ ರಾಜಾ ವೇಣುಗೋಪಾಲ ನಾಯಕ ಮಾತನಾಡಿದರು.

5ವೈಡಿಆರ್7

Share this article