ಕಾರವಾರ:
ಕಾರವಾರ ಮತ್ತು ಗೋವಾ ಜನರ ವಿಚಾರಧಾರೆಗಳು ವಿನಿಮಯವಾಗಬೇಕಾಗಿದೆ. ನಮ್ಮ ಸಂಸ್ಕೃತಿ ಒಂದೇ ರೀತಿ ಇದೆ ಎಂದು ಗೋವಾ ಸ್ಪೀಕರ್ ರಮೇಶ ತಾವಡಕರ ಅಭಿಪ್ರಾಯಿಸಿದರು.ನಗರದ ನ್ಯೂ ಕೆಎಚ್‌ಬಿ ಕಾಲನಿಯಲ್ಲಿ ಬುಧವಾರ ಆಯೋಜಿಸಿದ್ದ ಲೋಕೋತ್ಸವ, ಬಿಜೆಪಿ ಕಾರ್ಯಾಲಯ ಉದ್ಘಾಟನೆ, ಗ್ರಾಪಂ ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕಳೆದ ೪೦-೫೦ ವರ್ಷಗಳ ಹಿಂದೆ ನಾವೆಲ್ಲ ಒಂದೇ ಸಂಸ್ಕೃತಿ ಅನುಸರಿಸುತ್ತಿದ್ದೆವು. ಕಾಲಾನಂತರ ಬದಲಾವಣೆ ಕಂಡಿದೆ. ಗೋವಾದಲ್ಲಿ ಮರಾಠಿ ಶಾಲೆ ಸಾಕಷ್ಟು ಇತ್ತು. ಈಗ ಮರಾಠಿ ಜತೆಗೆ ಕೊಂಕಣಿ ಶಾಲೆಗಳು ಆರಂಭಗೊಂಡಿದೆ. ಕಾರವಾರದಲ್ಲೂ ಮೊದಲು ಮರಾಠಿ ಶಾಲೆಗಳಿದ್ದವು. ಜೋಯಿಡಾ ಭಾಗದ ಹೆಚ್ಚಿನ ಜನರ ಮೂಲ ಗೋವಾ ರಾಜ್ಯವಾಗಿತ್ತು. ಅವರ ಕುಲದೇವರು, ದೇವಸ್ಥಾನ ಗೋವಾದಲ್ಲಿದೆ. ಜನರು ಈಗಲೂ ಅಲ್ಲಿಗೆ ನಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಗ್ರಾಮೀಣ ಭಾಗದಲ್ಲಿ ಶಿಕ್ಷಣ ಬಲಗೊಳ್ಳಬೇಕಾಗಿದೆ. ಇದರಿಂದ ಒಂದು ಸಮಾಜ ಮಾತ್ರವಲ್ಲ, ದೇಶವೇ ಅಭಿವೃದ್ಧಿ ಆಗುತ್ತದೆ. ಶಿಕ್ಷಣ ಕ್ಷೇತ್ರಗಳು ಅಭಿವೃದ್ಧಿ ಆಗಬೇಕು. ಆದರೆ ನಮ್ಮ ಮೂಲ ಸಂಸ್ಕೃತಿಗಳನ್ನು ನಾವು ಉಳಿಸಿಕೊಳ್ಳಬೇಕು. ಅದಕ್ಕೆ ಧಕ್ಕೆಯಾಗಬಾರದು. ನಮ್ಮ ಸಂಸ್ಕೃತಿ, ಸಂಪ್ರದಾಯ, ಆಚಾರ, ವಿಚಾರವನ್ನು ಮುಂದಿನ ತಲೆಮಾರಿಗೆ ತಲುಪಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದರು.ಮಾಜಿ ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ಬಿಜೆಪಿ ಕಾರ್ಯಕರ್ತರಿಗೆ ದೇಶ ಮುಖ್ಯವಾಗಿದೆ. ದೇವಮಾನ ಪ್ರಧಾನಮಂತ್ರಿ ಸಿಕ್ಕಿದ್ದಾರೆ. ಅವರ ಕೈ ಬಲಪಡಿಸಲು ನಮ್ಮ ಹೋರಾಟ ಅವಶ್ಯತೆ ಇದೆ. ಹೀಗಾಗಿ ಮುಂದಿನ ಲೋಕಸಭಾ ಚುನಾವಣೆಯನ್ನು ನಿರ್ಲಕ್ಷ್ಯ ಮಾಡಬಾರದು. ಟಿಕೆಟ್ ಯಾರಿಗೆ ನೀಡಬೇಕು ಎಂದು ಹೈಕಮಾಂಡ್ ತೀರ್ಮಾನಿಸುತ್ತದೆ. ಅವರ ಪರ ಮನೆ-ಮನೆಗೆ ತೆರಳಿ ಪ್ರಚಾರ ಮಾಡೋಣ. ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸೋಣ ಎಂದು ಕರೆ ನೀಡಿದರು.ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಪ್ರಧಾನ ಕಾರ್ಯದರ್ಶಿ ಎನ್.ಎಸ್. ಹೆಗಡೆ, ಮನೋಜ ಭಟ್, ಸುಭಾಸ್ ಗುನಗಿ, ಮನೋಜ ಬಾಂದೇಕರ, ಅನುಶ್ರೀ ಕುಬಡೆ ಮೊದಲಾದವರು ಇದ್ದರು.