ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಕನ್ನಡ ಭಾಷೆ ನಿಂತ ನೀರಾಗಬಾರದು, ಹರಿಯುವ ನೀರಾಗಬೇಕು. ಮೊದಲು ನಾವೆಲ್ಲರೂ ನಮ್ಮ ಕನ್ನಡ ಭಾಷೆಯನ್ನು ಪ್ರೀತಿಸಬೇಕು, ಪಂಪ, ಜನ್ನ, ಕುವೆಂಪು ಇವರೆಲ್ಲರೂ ಕನ್ನಡ ನಾಡಿಗೆ ಕೊಡುಗೆ ನೀಡಿದ್ದಾರೆ. ಕನ್ನಡಕ್ಕೆ 8 ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ. ವಿದ್ಯಾರ್ಥಿಗಳು ಏಕಾಗ್ರತೆಯಿಂದ ಪುಸ್ತಕ ಓದಿದಾಗ ಮಾತ್ರ ಜ್ಞಾನಾರ್ಜನೆ ಹೆಚ್ಚುತ್ತದೆ ಎಂದು ಜೆಎಸ್ಎಸ್ ಪ್ರಾಂಶುಪಾಲ ಡಾ. ಕೊಂಗಳಪ್ಪ ಹೇಳಿದರು.ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ಕರುನಾಡು, ಕಪ್ಪು ಮಣ್ಣಿನನಾಡು, ಸುವಾಸನೆಯನಾಡು, ಶ್ರೀಗಂಧದ ನಾಡು ಎಂಬ ಅರ್ಥಕ್ಕೆ ಯೋಗ್ಯವಾದ ರಾಜ್ಯ ಕರ್ನಾಟಕ. ಮಹಾಭಾರತಕ್ಕಿಂತಲೂ ಮುಂಚೆಯಿಂದಲೂ ಕನ್ನಡ ನಾಡಿನಲ್ಲಿ ಜಲಸಂಪತ್ತು ಅರಣ್ಯ ಸಮೃದ್ಧತೆ ಇದೆ, ಕೊರತೆ ಇಲ್ಲದ ನಾಡು ನಮ್ಮದು. ಕಾವೇರಿಯಿಂದ ಗೋದಾವರಿಯವರೆಗೆ ಕರ್ನಾಟಕ ಇತ್ತು ಎಂದು ಉಲ್ಲೇಖವಿದೆ. ಕನ್ನಡದ ಮೊದಲ ಶಾಸನ ಹಲ್ಮಿಡಿ ಶಾಸನವಾಗಿದೆ. ನಮ್ಮ ಹಿರಿಯರು ಉತ್ತಮ ಜೀವನ ಮೌಲ್ಯವನ್ನು ಅರಿತಿದ್ದವರು, ಕನ್ನಡಿಗರು ತುಂಬಾ ಉದಾರಿಗಳು. ಕನ್ನಡ ಸಾಹಿತ್ಯ ಮನರಂಜನೆಗಾಗಿ ಮನೋಲ್ಲಾಸಕ್ಕಾಗಿ ಸುಧಾರಿಸುವ ಜೀವನ ನಡೆಸಲು ಸಹಾಯವಾಗುತ್ತದೆ ಎಂದರು.
10ನೆಯ ಶತಮಾನದ ಜೈನ ಧರ್ಮ, ೧೨ನೇ ಶತಮಾನದ ಶರಣ ಧರ್ಮ ಕನ್ನಡವನ್ನು ಶ್ರೀಮಂತಗೊಳಿಸಿದೆ. ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಮೆಟ್ಟಿದರೆ ಕನ್ನಡ ನಾಡನ್ನು ಮೆಟ್ಟಬೇಕು ಎಂಬ ನುಡಿ ಅರ್ಥಗರ್ಭಿತವಾಗಿದೆ. ಜಗಜ್ಯೋತಿ ಬಸವೇಶ್ವರರ ವಚನಗಳಲ್ಲಿ ಬರುವ “ಕಳಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ, ಇದಿರ ಹಳಿಯಲು ಬೇಡ, ಇದೇ ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ಧಿ ನಮ್ಮ ಕೂಡಲ ಸಂಗಮದೇವನೋಲಿಸುವ ಪರಿ” ಎಂಬಂತೆ ನಮ್ಮ ಬದುಕನ್ನು ಉತ್ತಮ ರೀತಿ ರೂಪಿಸಿಕೊಳ್ಳಬೇಕೆಂದರು.ತಾಲೂಕು ಕಸಾಪ ಅಧ್ಯಕ್ಷ ಲಯನ್ ಎಸ್.ನಾಗರಾಜು, ಸಿ.ಚೆನ್ನ ಮಾದೇಗೌಡ, ಲಯನ್ ತಾಯಮ್ಮ ಪ್ರೊ.ದೊಡ್ಡಲಿಂಗೇಗೌಡರು, ಲಯನ್ಸ್ ಸಂಸ್ಥೆಯ ಅಧ್ಯಕ್ಷ ಲಯನ್ ಬಿ ಚಿಕ್ಕ ಬಸವಯ್ಯ, ಶೇಖರ್ ಮತ್ತು ಚೇತನ್ ಇನ್ನಿತರರಿದ್ದರು.