ಸಿದ್ದಾಪುರ: ನಮ್ಮ ನಾಡ ದೇವಿ ಭುವನೇಶ್ವರಿಯ ಸ್ಥಳವಾದ ಭುವನಗಿರಿಯಿಂದ ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ಜ್ಯೋತಿಗೆ ಚಾಲನೆ ದೊರೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು. ಭಾನುವಾರ ತಾಲೂಕಿನ ಭುವನಗಿರಿ ಭುವನೇಶ್ವರಿ ದೇವಾಲಯದಲ್ಲಿ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಡೆದ ಕನ್ನಡ ಜ್ಯೋತಿ ರಥಯಾತ್ರೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ನಮ್ಮ ನಾಡಿಗೆ ಕರ್ನಾಟಕ ಎಂದು ನಾಮಕರಣ ಆಗಿ ೫೦ ವರ್ಷ ಕಳೆದಿವೆ. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಅದ್ಧೂರಿಯಾಗಿ ನಡೆಯಬೇಕು. ನಮ್ಮ ಸರ್ಕಾರಕ್ಕೆ ಕನ್ನಡ ಭಾಷೆ ಮತ್ತು ಸಾಹಿತಿಗಳ ಕುರಿತು ಅಪಾರ ಗೌರವವಿದ್ದು, ಮುಖ್ಯಮಂತ್ರಿಗಳು ಸಮ್ಮೇಳನದ ಯಶಸ್ಸಿಗೆ ₹೩೦ ಕೋಟಿ ಅನುದಾನ ನೀಡಲು ನಿರ್ಧರಿಸಿದ್ದಾರೆ. ಜಿಲ್ಲೆಯಲ್ಲಿ ಸಂಚರಿಸುವ ಕನ್ನಡ ರಥಕ್ಕೆ ಎಲ್ಲ ಕಡೆ ಅದ್ಧೂರಿ ಸ್ವಾಗತ ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲರೂ ಸಹಕರಿಸಬೇಕು ಎಂದರು. ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಮಹೇಶ ಜೋಶಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಧ್ಯಾತ್ಮದಲ್ಲಿ ನಂಬಿಕೆ, ವಿಶ್ವಾಸ ಮುಖ್ಯ. ಅಂತಹ ವಿಶ್ವಾಸ ಇಟ್ಟು ಭುವನಗಿರಿಗೆ ಬಂದಿದ್ದೇವೆ. ೮೬ನೇ ಸಾಹಿತ್ಯ ಸಮ್ಮೇಳನ ೧೧ ಲಕ್ಷ ಜನಸಂಖ್ಯೆಯೊಂದಿಗೆ ದಾಖಲೆ ನಿರ್ಮಾಣ ಮಾಡಿತು. ಇದು ಕನ್ನಡ ದೇವತೆಯ ಪವಾಡಕ್ಕೆ ಸಾಕ್ಷಿ. ಬೇರೆ ಬೇರೆ ಮಾತೃಭಾಷೆಯಿಂದ ಕನ್ನಡನಾಡಿಗೆ ಬಂದ ಸಾಹಿತಿಗಳು ಕನ್ನಡ ಕಲಿತು ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ಬರುವಂತಹ ಸಾಹಿತ್ಯವನ್ನು ರಚಿಸಿದ್ದಾರೆ. ಇದು ಕನ್ನಡಕ್ಕಿರುವ ಶಕ್ತಿ. ಮನೆಯಲ್ಲಿ ಹೇಗೆ ತಾಯಿಗೆ ಅಗ್ರಸ್ಥಾನ ನೀಡಲಾಗುತ್ತದೆಯೊ ಅಂತೆಯೆ ಕರ್ನಾಟಕದಲ್ಲಿ ಕನ್ನಡಕ್ಕೆ ಅಗ್ರಸ್ಥಾನ ದೊರೆಯಬೇಕು. ಸಿದ್ದಾಪುರ ತಾಲೂಕಿನಲ್ಲಿ ಕನ್ನಡ ನಾಡಿನ ಸಂಸ್ಕೃತಿ ಉಳಿಸಿಕೊಂಡಿರುವುದರ ಜತೆಗೆ ಅಚ್ಚ ಕನ್ನಡ ಮಾತನಾಡುವ ಕನ್ನಡಿಗರಿದ್ದಾರೆ. ಹೀಗಾಗಿ ತಾಲೂಕನ್ನು ಕರ್ನಾಟಕದ ಪ್ರತಿನಿಧಿ ಎಂದರೆ ತಪ್ಪಾಗಲಾರದು ಎಂದರು. ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಮತ್ತು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಮಾತನಾಡಿದರು. ಶಿರಸಿ ಸಹಾಯಕ ಆಯುಕ್ತೆ ಕಾವ್ಯಾರಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಸ್ವಾಗತಿಸಿದರು. ತಹಸೀಲ್ದಾರ್ ಎಂ.ಆರ್. ಕುಲಕರ್ಣಿ, ಕಸಾಪ ರಾಜ್ಯ ಪದಾಧಿಕಾರಿಗಳು, ವಿವಿಧ ಜಿಲ್ಲಾಧ್ಯಕ್ಷರು, ತಾಲೂಕು ಅಧ್ಯಕ್ಷರು, ದೇವಾಲಯ ಸಮಿತಿ ಅಧ್ಯಕ್ಷ ಶ್ರೀಕಾಂತ ಹೆಗಡೆ ಉಪಸ್ಥಿತರಿದ್ದರು. ತಾಲೂಕು ಕಸಾಪ ಅಧ್ಯಕ್ಷ ಗೋಪಾಲ ನಾಯ್ಕ ವಂದಿಸಿದರು. ಎಂ.ಕೆ. ನಾಯ್ಕ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಕನ್ನಡ ಜ್ಯೋತಿ ರಥಕ್ಕೆ ಚಾಲನೆ ನೀಡಲಾಯಿತು.ಸಾಹಿತಿ, ಕಲಾವಿದರಿಲ್ಲದ ವೇದಿಕೆಕನ್ನಡ ರಥಜ್ಯೋತಿ ಉದ್ಘಾಟನೆಯ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಕೇವಲ ಜನಪ್ರತಿನಿಧಿಗಳು, ಅಧಿಕಾರಿಗಳು, ಕಸಾಪ ಪದಾಧಿಕಾರಿಗಳನ್ನು ಹೊರತುಪಡಿಸಿ ತಾಲೂಕಿನಲ್ಲಿ, ಜಿಲ್ಲೆಯಲ್ಲಿ ಅದೆಷ್ಟೋ ಪ್ರಸಿದ್ಧ ಸಾಹಿತಿಗಳು, ಕಲಾವಿದರುಗಳಿದ್ದರೂ ಅವರ ಉಪಸ್ಥಿತಿ ಇರಲಿಲ್ಲ. ಸಂಪೂರ್ಣವಾಗಿ ಸರ್ಕಾರಿ ಕಾರ್ಯಕ್ರಮದಂತಿತ್ತು. ಕಾರ್ಯಕ್ರಮದ ಆರಂಭದಲ್ಲಿ ನಾಡಗೀತೆಗೆ ಜಿಲ್ಲೆಯ ಅಸ್ಮಿತೆಯಾದ ಯಕ್ಷಗಾನದ ನೃತ್ಯ ಮಾಡುತ್ತಿದ್ದ ಪುಟಾಣಿ ಕಲಾವಿದೆಯ ನೃತ್ಯವನ್ನು ಸಮಯಾಭಾವದ ಕಾರಣದಲ್ಲಿ ಅರ್ಧದಲ್ಲೇ ರಾಜ್ಯಾಧ್ಯಕ್ಷರ ಸೂಚನೆಯ ಮೇರೆಗೆ ಮೊಟಕುಗೊಳಿಸಲಾಯಿತು. ಈ ಸಂಗತಿಗಳು ಪಾಲ್ಗೊಂಡಿದ್ದ ಅಪಾರ ಸಂಖ್ಯೆಯ ಕನ್ನಡಾಭಿಮಾನಿಗಳಲ್ಲಿ ಚರ್ಚೆಗೆ ಕಾರಣವಾಯಿತು.ಭುವನಗಿರಿಯಲ್ಲಿ ಕನ್ನಡ ಜ್ಯೋತಿ ರಥಕ್ಕೆ ಚಾಲನೆಸಿದ್ದಾಪುರ: ಇಲ್ಲಿಯ ಭುವನಗಿರಿಯ ಭುವನೇಶ್ವರಿ ಸನ್ನಿಧಿಯಲ್ಲಿ ಭಾನುವಾರ ಕನ್ನಡ ರಥಕ್ಕೆ ಚಾಲನೆ ನೀಡಲಾಯಿತು.
ಮಂಡ್ಯದಲ್ಲಿ ಡಿ. ೨೦, ೨೧, ೨೨ರಂದು ಜರುಗಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಭುವನಗಿರಿಯ ಕನ್ನಡದ ಅಧಿದೇವತೆ ಭುವನೇಶ್ವರಿ ದೇವಿಯ ಸನ್ನಿಧಿಯಿಂದ ಜ್ಯೋತಿಯನ್ನು ಕೊಂಡೊಯ್ಯಲಾಗುತ್ತದೆ. ಜ್ಯೋತಿಯನ್ನು ಹೊತ್ತ ರಥ ರಾಜ್ಯಾದ್ಯಂತ ಸಂಚರಿಸಿ ಮಂಡ್ಯಕ್ಕೆ ತಲುಪಲಿದೆ.ಭುವನೇಶ್ವರಿ ದೇವಿಯ ಸನ್ನಿಧಿಯಿಂದ ತಂದ ಜ್ಯೋತಿಯನ್ನು ಕನ್ನಡ ರಥದಲ್ಲಿನ ಪ್ರಜ್ವಲಿಸುವ ಮೂಲಕ ಸಚಿವ ಮಂಕಾಳ ವೈದ್ಯ ಚಾಲನೆ ನೀಡಿದರು. ಕಸಾಪ ರಾಜ್ಯಾಧ್ಯಕ್ಷ ಮಹೇಶ ಜೋಶಿ, ಸ್ಥಳೀಯ ಶಾಸಕ ಭೀಮಣ್ಣ ನಾಯ್ಕ, ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಉಪವಿಭಾಗಾಧಿಕಾರಿ ಕವಿತಾರಾಣಿ, ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ, ತಹಸೀಲ್ದಾರ್ ಎಂ.ಆರ್. ಕುಲಕರ್ಣಿ, ತಾಲೂಕು ಅಧ್ಯಕ್ಷ ಗೋಪಾಲ ನಾಯ್ಕ ಹಾಗೂ ಕಸಾಪ ರಾಜ್ಯ, ಜಿಲ್ಲೆ, ತಾಲೂಕು ಪದಾಧಿಕಾರಿಗಳು ಉಪಸ್ಥಿತರಿದ್ದರು.ಭುವನೇಶ್ವರಿ ದೇವಾಲಯದ ಮುಂಭಾಗದಿಂದ ಡೊಳ್ಳು ಕುಣಿತ, ವೀರಗಾಸೆ ನೃತ್ಯಗಳೊಂದಿಗೆ ಕನ್ನಡ ರಥವು ಸಿದ್ದಾಪುರ ಪಟ್ಟಣಕ್ಕೆ ಆಗಮಿಸಿತು. ಈ ಮಧ್ಯೆ ಕನ್ನಡ ರಥವನ್ನು ಶಾಲಾ ಮಕ್ಕಳು, ಸಾರ್ವಜನಿಕರು ಸಂಭ್ರಮದಿಂದ ಸ್ವಾಗತಿಸಿದರು. ಸಿದ್ದಾಪುರ ಪಟ್ಟಣದ ಆರಂಭದಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ಸ್ವಾಗತ ಕೋರಲಾಯಿತು. ಆನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಬಳಿಕ ಕನ್ನಡ ರಥವು ಹೊನ್ನಾವರಕ್ಕೆ ತೆರಳಿತು. ಸಂಜೆ ಕುಮಟಾವನ್ನು ತಲುಪಲಿದ್ದು ಸೆ. ೨೩ರಂದು ಬೆಳಗ್ಗೆ ಅಂಕೋಲಾ, ಮಧ್ಯಾಹ್ನ ಕಾರವಾರ, ಸಂಜೆ ಗೋವಾ ರಾಜ್ಯದ ಗಡಿಭಾಗ ಕಾಣಕೋಣ, ಸೆ. ೨೪ರಂದು ಬೆಳಗ್ಗೆ ಜೋಯಿಡಾ, ದಾಂಡೇಲಿ, ಮಧ್ಯಾಹ್ನ ಹಳಿಯಾಳ, ಸೆ. ೨೫ರಂದು ಬೆಳಗ್ಗೆ ಯಲ್ಲಾಪುರ, ಮಧ್ಯಾಹ್ನ ಶಿರಸಿ ಮುಂತಾದ ತಾಲೂಕು ಕೇಂದ್ರಗಳಲ್ಲಿ ಸಂಚರಿಸಿ ಆನಂತರ ಹಾವೇರಿ ಜಿಲ್ಲೆಗೆ ತೆರಳಲಿದೆ.