ವಕೀಲರು ಸಂವಿಧಾನದ ಮೌಲ್ಯ ಎತ್ತಿ ಹಿಡಿಯುವ ಕೆಲಸ ಮಾಡಲಿ

KannadaprabhaNewsNetwork | Published : Dec 8, 2024 1:19 AM

ಸಾರಾಂಶ

ದಾವಣಗೆರೆ ಜಿಲ್ಲಾ ವಕೀಲರ ಭವನದಲ್ಲಿ ವಕೀಲರ ದಿನಾಚರಣೆ ಸಮಾರಂಭವನ್ನು ರಾಜ್ಯ ವಕೀಲರ ಪರಿಷತ್ ಉಪಾಧ್ಯಕ್ಷ ವಿನಯ್‌ ಬಾಳಾ ಸಾಹೇಬ್‌ ಮಾಂಗಳೇಕರ್ ಉದ್ಘಾಟಿಸದರು.

ವಕೀಲರ ಭವನದಲ್ಲಿ ವಕೀಲರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ವಿನಯ್ ಬಾಳಾ ಸಾಹೇಬ್ ಮಾಂಗಳೇಕರ್‌ ಕರೆ

ಕನ್ನಡಪ್ರಭ ವಾರ್ತೆ ದಾವಣಗೆರೆ

ಪರಿವರ್ತನೆಯ ಇಂದಿನ ದಿನಮಾನಗಳಲ್ಲಿ ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸವನ್ನು ಎಲ್ಲಾ ವಕೀಲರು ಮಾಡಬೇಕು ಎಂದು ರಾಜ್ಯ ವಕೀಲರ ಪರಿಷತ್ ಉಪಾಧ್ಯಕ್ಷ ವಿನಯ್‌ ಬಾಳಾ ಸಾಹೇಬ್‌ ಮಾಂಗಳೇಕರ್ ಕರೆ ನೀಡಿದರು.

ನಗರದ ಜಿಲ್ಲಾ ವಕೀಲರ ಭವನದಲ್ಲಿ ಶನಿವಾರ ವಕೀಲರ ದಿನಾಚರಣೆ-2024ರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾನೂನು ವಲಯದಲ್ಲಿ ಇಂದು ಸಾಕಷ್ಟು ಬದಲಾವಣೆ ಯಾಗುತ್ತಿದ್ದು, ಕೃತಕ ಬುದ್ಧಿಮತ್ತೆಯು ಸಾಕಷ್ಟು ಪರಿಣಾಮಕಾರಿ ಬದಲಾವಣೆ ತರುತ್ತಿದೆ ಎಂದು ಹೇಳಿದರು.

ಕೃತಕ ಬುದ್ಧಿಮತ್ತೆಯು ನಮ್ಮ ವೃತ್ತಿಗೆ ಸಹಕಾರಿಯಾಗಿದ್ದು, ಅದನ್ನು ಬಳಸಿಕೊಂಡು ನಾವು ನಮ್ಮ ನೈತಿಕತೆಯನ್ನು ಮರೆಯದೇ, ಸಮಾಜದ ಪ್ರತಿಯೊಬ್ಬರಿಗೂ ನ್ಯಾಯ ಒದಗಿಸಬೇಕು. ಅಲ್ಲದೆ ಪರಿವರ್ತನೆಯ ಜೊತೆಗೆ ಸಂವಿಧಾನದ ಆಶಯಗಳನ್ನು ನಾವು ಕಾಪಾಡಬೇಕೆಂಬ ಅರಿವು ಹೊಂದಿರಬೇಕು ಎಂದು ತಿಳಿಸಿದರು.

ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದ ರಚನಾಕಾರರು. ಸಂವಿಧಾನಕ್ಕೆ ಅಂಬೇಡ್ಕರ್‌ಕ ಕೊಡುಗೆ ದೊಡ್ಡದಿದೆ. ಆದರೂ, ಸರ್ವಪಲ್ಲಿ ರಾಧಾಕೃಷ್ಣರ ವಕೀಲಿ ದಕ್ಷತೆಯ ಕಾರಣಕ್ಕೆ ರಾಧಾಕೃಷ್ಣರ ಹೆಸರಿನಲ್ಲಿ ವಕೀಲರ ದಿನಾಚರಣೆಯನ್ನು ಆಚರಿಸುತ್ತೇವೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್.ಅರುಣಕುಮಾರ ಮಾತನಾಡಿ, ಜಿಲ್ಲಾ ಸಂಘಕ್ಕೆ ರಾಜ್ಯ ಪರಿಷತ್‌ನಿಂದ ಬರುವ ಕಾರ್ಯಾಗಾರದ ಅನುದಾನವನ್ನು ಹೆಚ್ಚಿಸಬೇಕು. ನಮ್ಮ ಬಾರ್‌ ರಾಜ್ಯದಲ್ಲಿಯೇ ಹೆಸರಾಗಿದೆ. ಸಂವಿಧಾನ ರಚನಾ ಕರಡು ಸಮಿತಿಯಲ್ಲಿದ್ದ ಸದಸ್ಯರಾದವರು ನಮ್ಮ ಸಂಘದವರು ಎಂಬ ಹೆಮ್ಮೆ ನಮಗೆಲ್ಲರಿಗೂ ಇದೆ ಎಂದರು.

1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜಪ್ಪ ಹನುಮಂತಪ್ಪ ಅಣ್ಣಯ್ಯನವರ, 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಆರ್.ಎನ್.ಪ್ರವೀಣಕುಮಾರ, ಜಿಲ್ಲಾ ಮತ್ತು ಸತ್ರ ನ್ಯಾಯಾಧಶ ಮತ್ತು ಎಸ್‌ಟಿಎಫ್‌ಸಿ-1ರ ನ್ಯಾಯಾಧೀಶ ಶ್ರೀರಾಮ ನಾರಾಯಣ ಹೆಗಡೆ, ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಶಿವಪ್ಪ ಗಂಗಪ್ಪ ಸಲಗೆರೆ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಟಿ.ಎಂ.ನಿವೇದಿತಾ, ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಮ.ಕರೆಣ್ಣವರ, ಹಿರಿಯ ವಕೀಲರಾದ ಎ.ಆರ್.ಗುರುಬಸವರಾಜ, ಲೋಕಿಕೆರೆ ಸಿದ್ದಪ್ಪ ಮಾತನಾಡಿದರು.

ಸಂಘದ ಕಾರ್ಯದರ್ಶಿ ಎಸ್.ಬಸವರಾಜ, ಸಹ ಕಾರ್ಯದರ್ಶಿ ಎ.ಎಸ್.ಮಂಜುನಾಥ, ಕಾರ್ಯಕಾರಿ ಸದಸ್ಯರಾದ ಬಿ.ಅಜ್ಜಯ್ಯ, ಆರ್.ಭಾಗ್ಯಲಕ್ಷ್ಮಿ, ಎಂ.ಚೌಡಪ್ಪ, ಟಿ.ಎಚ್.ಮಧುಸೂದನ್‌, ಎಲ್.ನಾಗರಾಜ, ಕೆ.ಎಂ.ನೀಲಕಂಠಯ್ಯ, ಎಂ.ರಾಘವೇಂದ್ರ, ಜಿ.ಜೆ.ಸಂತೋಷಕುಮಾರ, ವಾಗೀಶ ಕಟಿಗಿಹಳ್ಳಿ ಮಠ ಸೇರಿದಂತೆ ಹಿರಿಯ, ಕಿರಿಯ ವಕೀಲರು ಭಗವಹಿಸಿದ್ದರು. ಈ ವೇಳೆ ಜಿಲ್ಲಾ ಸರ್ಕಾರಿ ವಕೀಲರು, ಹಿರಿಯ ವಕೀಲರನ್ನು ಸನ್ಮಾನಿಸಲಾಯಿತು. ಹಿರಿಯ ವಕೀಲ ಎಂ.ಆರ್.ಮಹೇಶ್ವರಪ್ಪ ತಮ್ಮ ಪುಸ್ತಕ ಭಂಡಾರವನ್ನು ಜಿಲ್ಲಾ ನ್ಯಾಯಾಲಯದ ಗ್ರಂಥಾಲಯಕ್ಕೆ ಅರ್ಪಿಸಿದರು. ನ್ಯಾಯಾಲಯ ಸಿಬ್ಬಂದಿ ಅನಿತಾ ಪ್ರಾರ್ಥಿಸಿದರು. ಉಪಾಧ್ಯಕ್ಷ ಜಿ.ಕೆ.ಬಸವರಾಜ್ ಪ್ರಾರ್ಥಿಸಿದರು. ಸಹ ಕಾರ್ಯದರ್ಶಿ ಎ.ಎಸ್.ಮಂಜುನಾಥ್ ವಂದಿಸಿದರು.

Share this article