ಕಂಪ್ಲಿ: ಪಟ್ಟಣದ ಸತ್ಯ ನಾರಾಯಣ ಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗೂ ಪುರಸಭೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಜನ ಸ್ಪಂದನ ಕಾರ್ಯಕ್ರಮ ಶುಕ್ರವಾರ ಯಶಸ್ವಿಯಾಗಿ ಜರುಗಿತು.
ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ ಮಾತನಾಡಿ, ಸರ್ಕಾರಿ ಸೇವೆಯಲ್ಲಿ ಅಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಿದಾಗ ಮಾತ್ರ ಜನರು ಸಮಸ್ಯೆಗಳಿಂದ ದೂರವಿರಲು ಸಾಧ್ಯ. ಜನಸ್ಪಂದನ ಕಾರ್ಯಕ್ರಮವು ಕೇವಲ ವೇದಿಕೆ ಕಾರ್ಯಕ್ರಮಕ್ಕೆ ಸೀಮಿತವಾಗಬಾರದು. ಜನರ ಅಹವಾಲುಗಳಿಗೆ ಪರಿಹಾರ ದೊರೆತಾಗ ಮಾತ್ರ ಜನಸ್ಪಂದನ ಕಾರ್ಯಕ್ರಮ ಅರ್ಥಪೂರ್ಣವಾಗುತ್ತದೆ. ತ್ವರಿತ ಗತಿಯಲ್ಲಿ ಎಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಅಧಿಕಾರಿಗಳು ಶ್ರಮ ವಹಿಸಬೇಕು ಎಂದರು.ಪಟ್ಟಣದಲ್ಲಿ ತಾತ್ಕಾಲಿಕ ಕೋರ್ಟ್ ಆರಂಭಿಸಲು ಅತಿಥಿ ಗೃಹ ಆವರಣದ ಹಳೆ ಕಟ್ಟಡ ಜಾಗವನ್ನು ನೀಡುವಂತೆ ಒತ್ತಾಯಿಸಿ, ತಾಲೂಕು ಕ್ರೀಡಾಂಗಣ ವ್ಯವಸ್ಥೆ ಕಲ್ಪಿಸುವಂತೆ, ಒಬಿಸಿ ಹಾಸ್ಟೆಲ್ ನಿರ್ಮಿಸಿವಂತೆ, ಮನೆ ಮಂಜೂರಾತಿ ಬಗ್ಗೆ, ಪಟ್ಟಾ ವಿತರಣೆ ಮಾಡುವಂತೆ, ದೇವಸಮುದ್ರ ಗ್ರಾಮದ ಬಳಿಯ ತೋಟಗಳಲ್ಲಿ ಕರಡಿ ಹಾವಳಿ ಹೆಚ್ಚಾಗಿದ್ದು ಕರಡಿ ಸೆರೆ ಹಿಡಿಯುವಂತೆ, ರೈತರಿಗೆ ಸೋಲಾರ್ ವಿದ್ಯುತ್ ಗೆ ಸಬ್ಸಿಡಿ ನೀಡುವಂತೆ, ರಾಮಸಾಗರ ಗ್ರಾಮಕ್ಕೆ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸುವಂತೆ, ವಿದ್ಯುತ್ ತಂತಿಗಳ ಸರಿ ಪಡಿಸುವ ಬಗ್ಗೆ, ನಂ.10 ಮುದ್ದಾಪುರ ಗ್ರಾಮ ವ್ಯಾಪ್ತಿಯ ಜಮೀನುಗಳಿಗೆ ತೆರಳುವ ದಾರಿ ಬಿಡಿಸುವಂತೆ, ಪಟ್ಟಣದಲ್ಲಿ ಕಿಸಾನ್ (ರೈತ ) ಮೂರ್ತಿ ನಿರ್ಮಾಣಕ್ಕೆ ಅನುದಾನ ನೀಡುವಂತೆ, ಮೆಟ್ರಿ ಗ್ರಾಮವನ್ನು ಹೋಬಳಿ ಕೇಂದ್ರವನ್ನಾಗಿಸುವಂತೆ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಾಗ ನೀಡುವಂತೆ, ಶೌಚಾಲಯ ನಿರ್ಮಾಣ, ಸಮರ್ಪಕ ನೀರು ಪೂರೈಸುವಂತೆ, ಹಿರೇ ಜಾಯಿಗನೂರು ಗ್ರಾಮದಲ್ಲಿ ಮುಸ್ಲಿಂ ಸಮುದಾಯದವರಿಗೆ ಸ್ಮಶಾನ ಜಾಗ ನೀಡುವಂತೆ, ಪಟ್ಟಣದಲ್ಲಿ ಎಸ್ ಸಿ ಹಾಗೂ ಎಸ್ ಟಿ ಸಮುದಾಯದವರಿಗೆ ಸ್ಮಶಾನಕ್ಕೆ ಜಾಗ ನೀಡುವಂತೆ, ನೆಲ್ಲುಡಿಯಲ್ಲಿ ಅಂಗನವಾಡಿ ಕೇಂದ್ರ ಆರಂಭಿಸಲು, ದೇವಸಮುದ್ರ ಗ್ರಾಮದಲ್ಲಿ ಗ್ರಾಮ ಒನ್ ಕೇಂದ್ರ ಆರಂಭಿಸುವಂತೆ ಒತ್ತಾಯಿಸಿ ಸಾರ್ವಜನಿಕರು ಮನವಿ ಸಲ್ಲಿಸಿದರು. ಒಟ್ಟಾರೆ 307 ಅರ್ಜಿಗಳು ಸಲ್ಲಿಕೆಗೊಂಡಿವೆ.
ಈ ಸಂದರ್ಭದಲ್ಲಿ ಶಾಸಕ ಜೆ.ಎನ್.ಗಣೇಶ್, ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರು, ಎಎಸ್ ಪಿ ನವೀನ್ ಕುಮಾರ್, ತಹಸೀಲ್ದಾರ್ ಶಿವರಾಜ್ ಶಿವಪುರ, ತಾ ಪಂ ಇಒ ಆರ್.ಕೆ.ಶ್ರೀಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿದ್ದರು.ಮಳೆಯಲ್ಲೇ ತೆರಳಿದ ಅಧಿಕಾರಿಗಳು: ಜನ ಸ್ಪಂದನ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಭಾರಿ ಗಾಳಿ ಸಹಿತ ಮಳೆ ಆರಂಭವಾಯಿತು. ಕಾರ್ಯಕ್ರಮಕ್ಕೆ ಹಾಕಲಾಗಿದ್ದ ಶಾಮಿಯಾನ ಗಾಳಿಗೆ ನೆಲಕ್ಕುರುಳಿತು. ಕಾರ್ಯಕ್ರಮ ಮುಗಿದಿದ್ದರಿಂದ ಜನರು ಶಾಮಿಯಾನ ಬಳಿ ಇರದ ಕಾರಣ ಯಾವುದೇ ಸಮಸ್ಯೆ ಉಂಟಾಗಲಿಲ್ಲ. ಮಧ್ಯಾಹ್ನ 3 ಗಂಟೆಗೆ ಆರಂಭವಾದ ಮಳೆ ಸಂಜೆ 6 ಗಂಟೆವರೆಗೂ ಸುರಿಯಿತು. ವಿವಿಧ ಇಲಾಖೆಗಳ ಅಧಿಕಾರಿಗಳು ಮಳೆಯಲ್ಲೇ ಓಡುತ್ತಾ ತಮ್ಮ ವಾಹನ ಹತ್ತಿ ತೆರಳಿದರು.