ಅಧಿಕಾರಿಗಳು ಸರ್ಕಾರ ನೀಡಿದ ಗುರಿ ತಲುಪಲಿ: ಶಾಸಕ ಯು.ಬಿ. ಬಣಕಾರ

KannadaprabhaNewsNetwork |  
Published : Jul 01, 2025, 01:47 AM ISTUpdated : Jul 01, 2025, 01:48 AM IST
30ಎಚ್‌ಕೆಆರ್1 | Kannada Prabha

ಸಾರಾಂಶ

ಕಾರ್ಮಿಕರ ಇಲಾಖೆಯಿಂದ ಕಾರ್ಮಿಕ ಕಾರ್ಡುಗಳನ್ನು ಪಡೆದ ಕಾರ್ಮಿಕರಿಗೆ ಬಹಳಷ್ಟು ಸಮಸ್ಯೆ ಇದ್ದು, ಜು. 7ರಂದು ಕಾರ್ಮಿಕರ ಅದಾಲತ್ ನಡೆಸುವ ಮೂಲಕ ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡಬೇಕು.

ಹಿರೇಕೆರೂರು: ಅಧಿಕಾರಿಗಳು ತಮ್ಮ ಕಾರ್ಯಕ್ಷಮತೆಯಿಂದ ಸರ್ಕಾರ ತಮ್ಮ ಇಲಾಖೆಗಳಿಗೆ ನಿಗದಿ ಮಾಡಿರುವ ಗುರಿ ತಲುಪುವ ಜತೆಗೆ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸುವ ಕಾರ್ಯ ಮಾಡಬೇಕು ಎಂದು ಶಾಸಕ ಯು.ಬಿ. ಬಣಕಾರ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ತಾಪಂ ಸಭಾಭವನದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಮಿಕರ ಇಲಾಖೆಯಿಂದ ಕಾರ್ಮಿಕ ಕಾರ್ಡುಗಳನ್ನು ಪಡೆದ ಕಾರ್ಮಿಕರಿಗೆ ಬಹಳಷ್ಟು ಸಮಸ್ಯೆ ಇದ್ದು, ಜು. 7ರಂದು ಕಾರ್ಮಿಕರ ಅದಾಲತ್ ನಡೆಸುವ ಮೂಲಕ ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡಬೇಕು ಎಂದು ಕಾರ್ಮಿಕ ಇಲಾಖೆ ಅಧಿಕಾರಿಗೆ ಸೂಚನೆ ನೀಡಿದರು.

ಕೃಷಿ ಇಲಾಖೆ ಅಧಿಕಾರಿಗಳು ಸತತ ಮಳೆಯಿಂದಾದ ಬೆಳೆ ಕುಂಠಿತವಾಗಿರುವುದನ್ನು ಸಮಗ್ರ ವರದಿ ಸಿದ್ಧಪಡಿಸಬೇಕು. ಮುಳ್ಳಸಜ್ಜಿ ಹತೋಟಿಗೆ ತರುವ ನಿಟ್ಟಿನಲ್ಲಿ ಕೃಷಿ ವಿವಿ ಕುಲ ಸಚಿವರು, ವಿಜ್ಞಾನಿಗಳು ನೇತೃತ್ವದಲ್ಲಿ ಜಿಲ್ಲಾ ಮಟ್ಟದಲ್ಲಿ ಒಂದು ಕಾರ್ಯಾಗಾರ ಏರ್ಪಡಿಸಿ, ಏನೇನು ಕ್ರಮ ಕೈಗೊಳ್ಳಬಹುದು ಎಂಬುದರ ಕುರಿತು ಚರ್ಚಿಸಬೇಕು. ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಬೇಕು ಎಂದು ಸಹಾಯಕ ಕೃಷಿ ನಿರ್ದೇಶಕರಿಗೆ ಸೂಚನೆ ನೀಡಿದರು.

ಈಗಾಗಲೇ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಅಂಗನವಾಡಿ ಕಾರ್ಯಕರ್ತೆಯರು ಜಾಗೃತರಾಗಿ ಪಾಲಕರ ಮನವೊಲಿಸುವ ಕಾರ್ಯ ಮಾಡಿ ಮಕ್ಕಳ ದಾಖಲಾತಿ ಸಂಖ್ಯೆ ಹೆಚ್ಚಿಸುವ ಕಾರ್ಯ ಮಾಡಬೇಕು. ಖಾಸಗಿ ಶಾಲೆಗಳ ಎಸ್‌ಎಸ್‌ಎಲ್‌ಸಿ ಮಕ್ಕಳ ದಾಖಲಾತಿ ಕುರಿತು ನಿಗಾ ಇಡಬೇಕು. ಸುಳ್ಳು ದಾಖಲಾತಿಗಳು ಆಗದಂತೆ ನೋಡಿಕೊಳ್ಳಬೇಕು ಎಂದು ಬಿಇಒ ಅವರಿಗೆ ಸೂಚನೆ ನೀಡಿದರು.

ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಹೊಸ ಹಿರೇಕೆರೂರರಿನಿಂದ ಗೊಡಚಿಕೊಂಡ, ಯತ್ತಿನಹಳ್ಳಿ, ದೂಪದಹಳ್ಳಿ ಮಾರ್ಗವಾಗಿ ನೂಲಗೇರಿಗೆ ಹಾಗೂ ಹಾದ್ರಿಹಳ್ಳಿ, ಗೊಡಚಿಕೊಂಡ ಶ್ರೀರಾಮನಕೊಪ್ಪ ಹಿರೇಕೆರೂರು ಬಸ್ ಸಂಪರ್ಕ, ಹುಲ್ಲತ್ತಿ, ಚಿಕ್ಕಯಡಚಿ, ನೇಸ್ವಿ ಮಾರ್ಗವಾಗಿ ರಾಣಿಬೆನ್ನೂರು ಹಾಗೂ ಮಾಸೂರು ಮೈದೂರು, ಅಣಜಿ ಕಮಲಾಪುರ ಮಾರ್ಗವಾಗಿ ಹೊನ್ನಾಳಿ ಬಸ್ ಸಂಚಾರ ಆರಂಭಿಸಲಾಗಿದೆ. ಸಂಜೆ ಹಿರೇಕೆರೂರಿನಿಂದ ಶಿರಾಳಕೊಪ್ಪ ಮತ್ತು ರಾಣಿಬೆನ್ನೂರಿಗೆ, ಬೆಳಗ್ಗೆ ಹಾವೇರಿಗೆ ತಲುಪುವ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬಸ್ ಸಂಪರ್ಕ ಕಲ್ಪಿಸಲಾಗಿದೆ ಎಂದು ಶಾಸಕ ಯು.ಬಿ. ಬಣಕಾರ ತಿಳಿಸಿದರು.

ಹಿರೇಕೆರೂರು ತಹಸೀಲ್ದಾರ್‌ ಎಚ್. ಪ್ರಭಾಕರ ಗೌಡ, ರಟ್ಟೀಹಳ್ಳಿ ತಹಸೀಲ್ದಾರ್‌ ಶ್ವೇತಾ ಅಮರಾವತಿ, ಆಡಳಿತಾಧಿಕಾರಿ ಎಚ್.ವೈ. ಮೀಸೆ, ಕಾರ್ಯನಿರ್ವಾಹಕ ಅಧಿಕಾರಿ ರವಿ ಎನ್., ತಾಲೂಕು ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಬುರಡೀಕಟ್ಟಿ, ನಾರಾಯಣಪ್ಪ ಗೌರಕ್ಕನವರ ಇದ್ದರು.

PREV

Recommended Stories

ರಾಜ್ಯದಲ್ಲಿ 5 - 6 ದಿನ ಮಳೆ ಇಳಿಮುಖ : 26ರಿಂದ ಮತ್ತೆ ಮಳೆ
ಎಮ್ಮೆ ಕೊಡಿಸುವುದಾಗಿ ಪ್ರೇಮ್‌ಗೆ ವಂಚನೆ : ₹4.75 ಲಕ್ಷ ಮೋಸ