ಬಡವರ ದರ್ಶನ ಅಧಿಕಾರಿಗಳ ಮೊದಲ ಆದ್ಯತೆಯಾಗಲಿ

KannadaprabhaNewsNetwork | Published : Mar 14, 2024 2:06 AM

ಸಾರಾಂಶ

ಬಡವರ ದರ್ಶನ ಅಧಿಕಾರಿಗಳಿಗೆ ಪ್ರಥಮಾಧ್ಯತೆಯಾಗಬೇಕು. ಆಗ ಮಾತ್ರ ದೇಶದಲ್ಲಿ ಪರಿವರ್ತನೆ ಕಾಣಲು ಸಾಧ್ಯವಾಗುತ್ತದೆ.

ಚಿತ್ರದುರ್ಗ: ಬಡವರ ದರ್ಶನ ಅಧಿಕಾರಿಗಳಿಗೆ ಪ್ರಥಮಾಧ್ಯತೆಯಾಗಬೇಕು. ಆಗ ಮಾತ್ರ ದೇಶದಲ್ಲಿ ಪರಿವರ್ತನೆ ಕಾಣಲು ಸಾಧ್ಯವಾಗುತ್ತದೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.

ನಗರದ ತರಾಸು ರಂಗಮಂದಿರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರಧಾನಮಂತ್ರಿ ಸೂರಜ್ ನ್ಯಾಷನಲ್ ಪೋರ್ಟಲ್‍ನ ಉದ್ಘಾಟನೆ ಹಾಗೂ ಗ್ರಾಹಕ ಸಂಪರ್ಕ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಬಡವರು, ಶೋಷಿತ ವರ್ಗಗಳ ಆರ್ಥಿಕಾಭಿವೃದ್ಧಿ ಚಟುವಟಿಕೆಗಳಿಗಾಗಿ ಸಾಲ-ಸೌಲಭ್ಯ ನೀಡುವ ನಿಟ್ಟಿನಲ್ಲಿ ಬ್ಯಾಂಕ್‍ಗಳು ಬಡವರ ಹೆಬ್ಬಾಗಿಲಾಗಬೇಕು ಎಂದರು.

ಗ್ರಾಹಕ ಸಂಪರ್ಕ ಮೇಳದಂತಹ ಕಾರ್ಯಕ್ರಮಗಳು ನಿಂತ ನೀರಾಗಬಾರದು. ತೆರಿಗೆ ಹಣವನ್ನು ಬಡವರ ಮನೆ ಬಾಗಿಲಿಗೆ ಕೊಂಡೊಯ್ಯುವ ಸಂಕಲ್ಪ ಎಲ್ಲ ಸರ್ಕಾರಗಳು, ಜನಪ್ರತಿನಿಧಿಗಳು ಮಾಡಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳು, ಸಫಾಯಿ ಕರ್ಮಚಾರಿಗಳು ಸೇರಿದಂತೆ ಎಲ್ಲಾ ವರ್ಗಗಳ ಸಮುದಾಯಕ್ಕೆ ಸ್ವಂತ ವ್ಯವಹಾರ ಪ್ರಾರಂಭಿಸಲು ಪ್ರಧಾನಿ ಮುಂದಾಗಿದ್ದಾರೆ. ಕೇಂದ್ರ ಸರ್ಕಾರದ ಆರ್ಥಿಕ ಸಹಾಯವನ್ನು ವಿವಿಧ ರಾಜ್ಯಗಳ ಆಯಾ ಬ್ಯಾಂಕ್‍ಗಳ ಮೂಲಕ ಸಾಲ ವಿತರಣೆ ಮಾಡುವ ಪಿಎಂ-ಸೂರಜ್ ಪೋರ್ಟಲ್‍ನ್ನು ಮೋದಿ ಉದ್ಘಾಟನೆ ಮಾಡಿದ್ದಾರೆ. ರಾಷ್ಟ್ರದ ಜನತೆಗೆ ಕೇಂದ್ರ ಸರ್ಕಾರದಿಂದ ಶೋಷಿತ ವರ್ಗಕ್ಕೆ ಹಾಗೂ ದಲಿತರಿಗೆ 660 ಕೋಟಿ ರು. ಅನುದಾನ ದೇಶದ ಒಟ್ಟು 1 ಲಕ್ಷ ಮಂದಿಗೆ ಆರ್ಥಿಕ ಸಹಾಯದ ಸಾಲಸೌಲಭ್ಯ ವಿತರಣೆ ಮಾಡಿದ್ದಾರೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಚಿತ್ರದುರ್ಗ, ತುಮಕೂರು ಹಾಗೂ ದಾವಣಗೆರೆ ಜಿಲ್ಲೆಯ ಫಲಾನುಭವಿಗಳಿಗೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆವತಿಯಿಂದ ಸಾಲ-ಸೌಲಭ್ಯದ ಮಂಜೂರಾತಿ ಆದೇಶ ಪ್ರತಿ ಸಾಂಕೇತಿಕವಾಗಿ ವಿತರಣೆ ಮಾಡಲಾಯಿತು. ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಬಳ್ಳಾರಿ ಕೇಂದ್ರ ಕಚೇರಿ ಜನರಲ್ ಮ್ಯಾನೇಜನರ್ ಭಾಗ್ಯರೇಖಾ, ಎನ್‍ಎಸ್‍ಸಿಎಫ್‍ಡಿಸಿ ಸಿಜಿಎಂ ರಮೇಶ್‍ರಾವ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ತಿಪ್ಪೇಶ್, ಎನ್‍ಐಸಿ ಅಧಿಕಾರಿ ಕೆಆರ್‍ಕೆ ಶಾಸ್ತ್ರಿ, ದಾವಣಗೆರೆಯ ಕೆನರಾ ಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕ ಕೆ.ಶ್ರೀನಿವಾಸ್ ಇದ್ದರು.

Share this article