ಸಾಹಿತ್ಯದ ಮೇಲಿನ ಅತ್ಯಾಚಾರ ನಿಲ್ಲಲಿ: ನರಹಳ್ಳಿ ಬಾಲಸುಬ್ರಹ್ಮಣ್ಯ

KannadaprabhaNewsNetwork | Published : Nov 21, 2024 1:04 AM

ಸಾರಾಂಶ

ಸಾಹಿತ್ಯ ಸಮ್ಮೇಳನಗಳಲ್ಲಿ ಸಾಹಿತಿಗಳು, ಲೇಖಕರಿಗೆ ಮೊದಲ ಪ್ರಾಶಸ್ತ್ಯವಿರಬೇಕು. ಆದರೆ, ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಸಾಹಿತಿಗಳು, ಲೇಖಕರನ್ನು ಬಿಟ್ಟು ಬೇರೆಯವರು ವಿಜೃಂಭಿಸುತ್ತಿದ್ದಾರೆ. ಮರಾಠಿ ಸಾಹಿತ್ಯ ಸಮ್ಮೇಳನಗಳಲ್ಲಿ ಸಾಹಿತಿಗಳನ್ನು ಹೊರತುಪಡಿಸಿ ಉಳಿದವರ್‍ಯಾರಿಗೂ ವೇದಿಕೆಯಲ್ಲಿ ಅವಕಾಶವಿರುವುದಿಲ್ಲ. ಮುಖ್ಯಮಂತ್ರಿಯಾದವರೇ ಕೆಳಗೆ ಕುಳಿತಿರುತ್ತಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಸಾಹಿತ್ಯಕ್ಕೆ ಒಂದು ಪಾವಿತ್ರ್ಯತೆ ಇದೆ. ಅದನ್ನು ಅಪವಿತ್ರಗೊಳಿಸುವುದು ಬೇಡ. ಸಾಹಿತ್ಯ ಸಮ್ಮೇಳನಗಳಲ್ಲಿ ಸಾಹಿತಿಗಳಿಗೆ, ಲೇಖಕರಿಗೆ ಗೌರವ ಸಿಗದಿದ್ದರೆ ಅದು ಸಾಹಿತ್ಯದ ಮೇಲೆ ನಡೆಸುವ ಅತ್ಯಾಚಾರ ಎಂದು ಹಿರಿಯ ಸಾಹಿತಿ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಕಟುವಾಗಿ ಹೇಳಿದರು.

ಬುಧವಾರ ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ನಡೆದ ವಾರದ ಅತಿಥಿ ಸಾಹಿತಿ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿ, ಸಾಹಿತ್ಯ ಸಮ್ಮೇಳನಗಳಲ್ಲಿ ಸಾಹಿತಿಗಳು, ಲೇಖಕರಿಗೆ ಮೊದಲ ಪ್ರಾಶಸ್ತ್ಯವಿರಬೇಕು. ಆದರೆ, ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಸಾಹಿತಿಗಳು, ಲೇಖಕರನ್ನು ಬಿಟ್ಟು ಬೇರೆಯವರು ವಿಜೃಂಭಿಸುತ್ತಿದ್ದಾರೆ. ಮರಾಠಿ ಸಾಹಿತ್ಯ ಸಮ್ಮೇಳನಗಳಲ್ಲಿ ಸಾಹಿತಿಗಳನ್ನು ಹೊರತುಪಡಿಸಿ ಉಳಿದವರ್‍ಯಾರಿಗೂ ವೇದಿಕೆಯಲ್ಲಿ ಅವಕಾಶವಿರುವುದಿಲ್ಲ. ಮುಖ್ಯಮಂತ್ರಿಯಾದವರೇ ಕೆಳಗೆ ಕುಳಿತಿರುತ್ತಾರೆ. ಕನ್ನಡ ಸಾಹಿತ್ಯ ಸಮ್ಮೇಳನ ಕೂಡ ಅದೇ ರೀತಿ ನಡೆಯಬೇಕು. ಆ ನಿಟ್ಟಿನಲ್ಲಿ ಸಾಹಿತ್ಯ ಸಮ್ಮೇಳನದ ಸ್ವರೂಪ ಬದಲಾಗಬೇಕು ಎಂದರು.

ಸಾಹಿತ್ಯ ಸಮ್ಮೇಳನದಲ್ಲಿ ಯಾವ ವಿಷಯಗಳು ಚರ್ಚೆಯಾಗಬೇಕು, ಪ್ರಸ್ತುತ ದಿನಮಾನಗಳಲ್ಲಿ ಕನ್ನಡ ಭಾಷೆಯನ್ನು ಉಳಿಸುವ, ಬೆಳೆಸುವುದಕ್ಕೆ ಸಂಬಂಧಿಸಿದ ವಿಚಾರಗಳು ಮುನ್ನೆಲೆಗೆ ಬಂದು ಚರ್ಚೆಯಾಗಬೇಕಿತ್ತು. ಆದರೆ, ಮಂಡ್ಯ ಸಾಹಿತ್ಯ ಸಮ್ಮೇಳನ ನಡೆಯಲಿರುವ ಪರ್ವಕಾಲದಲ್ಲಿ ಸಾಹಿತ್ಯ ಬಿಟ್ಟು ಉಳಿದ ವಿಷಯಗಳೆಲ್ಲವೂ ಚರ್ಚೆಯಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಸಮ್ಮೇಳನಕ್ಕೆ ಅದ್ಧೂರಿತನ ಬೇಡ:

ಸರಳತೆಯೇ ಸಾಹಿತ್ಯ ಸಮ್ಮೇಳನದ ದೊಡ್ಡ ಆದರ್ಶ. ಇಲ್ಲಿ ಆಡಂಬರ, ಅದ್ಧೂರಿತನ ಪ್ರದರ್ಶಿಸುವ ಅವಶ್ಯಕತೆ ಇಲ್ಲ. ಅದಕ್ಕೆ ಮಾಡುವ ಖರ್ಚಿನಲ್ಲಿ ಒಂದು ಗ್ರಂಥಾಲಯವನ್ನು ತೆರೆದು ಅದರಲ್ಲಿ ಜಿಲ್ಲೆಯ ಪ್ರಮುಖ ಲೇಖಕರ ಪುಸ್ತಕಗಳು ಒಂದೇ ಸೂರಿನಡಿ ದೊರೆಯುವಮತೆ ಮಾಡಬೇಕು. ಜಿಲ್ಲೆಯ ಸಾಹಿತ್ಯದ ಕುರಿತಾದ ಅಧ್ಯಯನಕ್ಕೆ ಒಂದು ಲೈಬ್ರರಿ ಇಲ್ಲ. ಸಾಹಿತ್ಯದ ಅಧ್ಯಯನದಲ್ಲಿ ತೊಡಗಿರುವವರಿಗೆ ಸಾಹಿತ್ಯದ ಅಧ್ಯಯನ ಸಾಮಗ್ರಿಗಳು ಒಂದೇ ಸೂರಿನಡಿ ಸಿಗುತ್ತಿಲ್ಲ. 2.5 ಕೋಟಿ ರು. ವೆಚ್ಚದಲ್ಲಿ ಒಂದು ಲೈಬ್ರರಿ ಸ್ಥಾಪಿಸಬಹುದು ಎಂದು ಸಲಹೆ ನೀಡಿದರು.

ಮಂಡ್ಯ ವೈಶಿಷ್ಟ್ಯತೆ ರಾಷ್ಟ್ರಮಟ್ಟಕ್ಕೆ ತಲುಪಲಿ:

ಮಂಡ್ಯ ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತ ಜಿಲ್ಲೆ. ರಾಜ್ಯದ ಬೇರಾವ ಜಿಲ್ಲೆಗೂ ಇಲ್ಲದ ಸಾಂಸ್ಕೃತಿಕ ವೈಶಿಷ್ಟ್ಯತೆಯನ್ನು ಇಲ್ಲಿ ಕಾಣಬಹುದು. ಯಕ್ಷಗಾನದ ಮೂಲ ಮಂಡ್ಯ. ಅದನ್ನು ನಾವು ಎದೆ ತಟ್ಟಿಕೊಂಡು ಹೇಳಬೇಕಿದೆ. ಕರಾವಳಿಯವರು ಯಕ್ಷಗಾನವನ್ನು ನಮ್ಮ ಕಲೆ ಎಂದು ಹೇಳುತ್ತಿದ್ದಾರೆ. ಆದರೆ, ಆ ಕಲೆಯ ಮೂಲ ನಮ್ಮದು ಎಂಬ ಸಂದೇಶವನ್ನು ಇಡೀ ರಾಷ್ಟ್ರಕ್ಕೆ ತಲುಪುವಂತೆ ಮಾಡಬೇಕು ಎಂದು ನುಡಿದರು.

ಕೃಷಿ ಸಂಸ್ಕೃತಿ ಬೆಳೆದುಬಂದದ್ದು ಮಂಡ್ಯ ನೆಲದಿಂದ. ನೇಗಿಲಯೋಗಿ ಎಂದು ಕುವೆಂಪು ಬರೆಯುವುದಕ್ಕೆ ಸೂರ್ತಿಯಾಗಿದ್ದು ಮಂಡ್ಯ. ಮೊದಲ ಒಕ್ಕಲಿಗ ಕವಿ ಕೆಂಪಣ್ಣಗೌಡ ನಾಗಮಂಗಲದವರು. ಜಾನಪದದಲ್ಲಿ ಎಚ್.ಎಲ್.ನಾಗೇಗೌಡರು ಮಾಡಿರುವ ಸಾಧನೆಯನ್ನು ಯಾರೂ ಮಾಡಿಲ್ಲ. ನಮ್ಮ ನೆಲದಲ್ಲಿ ಕೃಷಿ, ಜನಪದ, ಕಲೆ ಸಂಸ್ಕೃತಿಯನ್ನು ಬೆಳೆಸಿದವರೇ ನಮಗೆ ಗೊತ್ತಿಲ್ಲದಂತಾಗಿದೆ. ನಮ್ಮ ಸಂಸ್ಕೃತಿಯ ನಿಧಿ ಭೂಮಿಯೊಳಗೆ ಹುದುಗಿಹೋಗಿದೆ. ಅದನ್ನು ಮತ್ತೆ ಮೇಲೆತ್ತಿ ರಾಷ್ಟ್ರಮಟ್ಟದಲ್ಲಿ ಮಂಡ್ಯ ಸಂಸ್ಕೃತಿಯನ್ನು ಪ್ರತಿಬಿಂಬಿಸದಿದ್ದರೆ ಅದು ನಾವು ಈ ಜಿಲ್ಲೆಗೆ ಮಾಡುವ ದೊಡ್ಡ ಅನ್ಯಾಯ ಎಂದು ನೇರವಾಗಿ ಹೇಳಿದರು.

ಸ್ವಾಯತ್ತತೆ ಕಳೆದುಕೊಂಡಿರುವ ಸಾಹಿತಿಗಳು:

ನಮ್ಮಲ್ಲಿರುವ ಸಾಹಿತಿಗಳು ಸ್ವಾಯತ್ತತೆ, ದಿಟ್ಟತನ ಕಳೆದುಕೊಂಡಿದ್ದಾರೆ. ಅವರು ಸಮಾಜದ ಪ್ರತಿನಿಧಿಯಾಗಿ ಮಾತನಾಡುವ ಶಕ್ತಿ ಕಳೆದುಕೊಂಡಿದ್ದಾರೆ. ಸಾಹಿತಿಗಳು ವಿಧಾನಸೌಧ ಸುತ್ತುವುದು, ಪ್ರಶಸ್ತಿಗಳ ನಿರೀಕ್ಷೆಯಿಂದ ದೂರ ಉಳಿಯಬೇಕು. ಕುವೆಂಪು ಸೇರಿದಂತೆ ಹಲವರು ಸಾಹಿತ್ಯದ ಮೂಲಕ ಚಾಟಿ ಬೀಸುವುದರ ಮೂಲಕ ಸ್ವಾಭಿಮಾನವನ್ನು ಮೆರೆಯುತ್ತಿದ್ದರು. ಸಾಹಿತ್ಯ ವಲಯದಲ್ಲಿ ಇಂದು ಆ ಧ್ವನಿ ಕ್ಷೀಣಿಸಿದೆ. ಹೀಗಾಗಿ ಸಾಹಿತಿಗಳನ್ನು ದೂರವಿಟ್ಟು ಪ್ರಭಾವಶಾಲಿ ಶಕ್ತಿಗಳು ಸಮ್ಮೇಳನದಲ್ಲಿ ರಾರಾಜಿಸುವುದಕ್ಕೆ ಹುನ್ನಾರ ನಡೆಸುತ್ತಿವೆ ಎಂದರು.

ವ್ಯಕ್ತಿ ಪ್ರತಿಷ್ಠೆ ಮುಖ್ಯವಾಗಬಾರದು:

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ ಸಮಯದಲ್ಲಿ ದೇವನೂರು ಮಹಾದೇವ, ಎಸ್.ಎಲ್.ಭೈರಪ್ಪ, ಚಂದ್ರಶೇಖರ ಕಂಬಾರ ಅವರಂತಹ ಹಿರಿಯರನ್ನು ಭೇಟಿಯಾಗಿ ಅಭಿಪ್ರಾಯ, ಸಲಹೆ, ಮಾರ್ಗದರ್ಶನಗಳನ್ನು ಪಡೆದಿಲ್ಲ. ಅವರೆಲ್ಲರೂ ಸಾಹಿತ್ಯ ಸಮ್ಮೇಳನಕ್ಕೆ ಬರುವುದರಿಂದ ಸಮ್ಮೇಳನದ ಹಿರಿಮೆ ಹೆಚ್ಚಾಗುತ್ತದೆ. ಎಲ್ಲರನ್ನೂ ಸಮಚಿತ್ರದಿಂದ ನೋಡುವ ಮನೋಭಾವವಿರಬೇಕೇ ವಿನಃ ವ್ಯಕ್ತಿ ಪ್ರತಿಷ್ಠೆ ಇಲ್ಲಿ ಮುಖ್ಯವಾಗಬಾರದು ಎಂದು ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರನ್ನು ಗುರಿಯಾಗಿಸಿಕೊಂಡು ತಿಳಿಸಿದರು.

ಜಾಗೃತ ಚಳವಳಿ ಅವಶ್ಯ:

ಪ್ರಸ್ತುತ ದಿನಗಳಲ್ಲಿ ಕನ್ನಡ ಭಾಷೆ ಬೆಳವಣಿಗೆ, ಉಳಿವಿನ ವಿಚಾರವಾಗಿ ಜಾಗೃತ ಚಳವಳಿ ಆರಂಭವಾಗಬೇಕು. ಎಲ್ಲರೂ ಇದಕ್ಕೆ ದನಿಯಾಗುವ ಮೂಲಕ ಸಣ್ಣ ಸಂಚಲನವನ್ನು ಉಂಟು ಮಾಡಬೇಕಿದೆ. ಹಾಗಾದಾಗ ಕನ್ನಡ ಪ್ರಜ್ಞೆ ಮೂಡಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಗೋಷ್ಠಿಯಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಪಿ.ಪ್ರಕಾಶ್, ನವೀನ್‌ಕುಮಾರ್, ಆನಂದ, ಬಿ.ಎಸ್.ಜಯರಾಂ ಇದ್ದರು.

Share this article