ರಾಜ್ಯ ಸರ್ಕಾರ ಒಳ ಮೀಸಲಾತಿಯನ್ನು ಶೀಘ್ರ ಜಾರಿಗೊಳಿಸಲಿ : ಮಾದಿಗ ಸಮಾಜದ ಮುಖಂಡರ ಆಗ್ರಹ

KannadaprabhaNewsNetwork | Updated : Aug 11 2024, 12:04 PM IST

ಸಾರಾಂಶ

ಒಳಮೀಸಲಾತಿ ಜಾರಿ ಮಾಡುವುದು ಆಯಾ ರಾಜ್ಯ ಸರ್ಕಾರದ ಹೊಣೆ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಜಾರಿ ಮಾಡಬೇಕು ಎಂದು ಮಾದಿಗ ಸಮಾಜದ ಮುಖಂಡರು ಆಗ್ರಹಿಸಿದ್ದಾರೆ.

ಕೊಪ್ಪಳ: ಒಳಮೀಸಲಾತಿ ಜಾರಿ ಮಾಡುವುದು ಆಯಾ ರಾಜ್ಯ ಸರ್ಕಾರದ ಹೊಣೆ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ರಾಜ್ಯ ಸರ್ಕಾರ ಕೂಡಲೇ ಜಾರಿ ಮಾಡುವಂತೆ ಮಾದಿಗ ಸಮಾಜದ ಮುಖಂಡರು ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುದಕಪ್ಪ ಹೊಸಮನಿ, ದೇವರಾಜ ಕಿನ್ನಾಳ ಹಾಗೂ ರಾಮಪ್ಪ ಗುಡ್ಲಾನೂರು, ಕಳೆದ 30 ವರ್ಷದಿಂದ ಒಳಮೀಸಲಾತಿಗಾಗಿ ಹೋರಾಟ ಮಾಡಲಾಗಿತ್ತು. ವಿವಿಧ ರಾಜ್ಯದಲ್ಲಿ ಒಳಮೀಸಲಾತಿಗೆ ಆದೇಶಿಸಿದ್ದವು. ಮೀಸಲಾತಿಗಾಗಿ ಹೋರಾಟ ನಡೆದಿದ್ದವು. ಹೋರಾಟದಲ್ಲಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಮೀಸಲಾತಿಗಾಗಿ ಗೋನಾಳ ಭೀಮಪ್ಪ, ಬಾಬುರಾವ್ ಮೂಡಬಿ, ಇ.ಎಸ್. ತೆಗನೂರ, ಎಚ್. ಆಂಜನೇಯ, ಎ. ನಾರಾಯಣಸ್ವಾಮಿ , ಕೆ.ಎಚ್. ಮುನಿಯಪ್ಪ ಈ ವಿಷಯ ಸುಪ್ರೀಂ ಕೋರ್ಟಿನಲ್ಲಿ ದಾವೆ ಹೂಡಿದ್ದರು. ಈ ದಾವೆಯ ವಿಚಾರಣೆ ನಡೆಸಿ, ಒಳಮೀಸಲಾತಿ ಸುಪ್ರೀಂ ಕೋರ್ಟ್ ಜಾರಿಗೊಳಿಸಲು ಸೂಚಿಸಿದೆ. ಇದು ಸ್ವಾಗತಾರ್ಹ ಎಂದರು.

ಈಗಾಗಲೇ ಆಂಧ್ರದಲ್ಲಿ ಒಳಮೀಸಲಾತಿ ಜಾರಿ ಮಾಡಲಾಗಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಜಾರಿ ಮಾಡಬೇಕು ಎಂದು ಆಗ್ರಹಿಸಿದರು. ಈ ಕುರಿತು ಮನವರಿಕೆ ಮಾಡಿಕೊಡಲು ನಾವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಕೊಪ್ಪಳಕ್ಕೆ ಬಂದಾಗ ಮನವಿ ಸಲ್ಲಿಸುತ್ತೇವೆ ಎಂದರು.

ಕೆನೆಪದರು ಅಗತ್ಯ: ಎಸ್ಸಿ, ಎಸ್ಟಿ ಸಮುದಾಯದಲ್ಲಿಯೇ ತೀರಾ ಹಿಂದುಳಿದವರಿಗೆ ಸರ್ಕಾರದಲ್ಲಿ ಪ್ರಾತಿನಿಧ್ಯ, ಸೌಕರ್ಯ ದೊರೆಯಲು ಕೆನೆಪದರ ಪದ್ಧತಿಯನ್ನು ಸರ್ಕಾರ ಜಾರಿ ಮಾಡಬೇಕು ಎಂದು ಹೇಳಿದರು.

ಈ ದಿಸೆಯಲ್ಲಿಯೂ ನಮಗೂ ಪರಿಪೂರ್ಣತೆ ಇಲ್ಲ. ಹೀಗಾಗಿ, ಈ ಕುರಿತು ಕೊಪ್ಪಳದಲ್ಲಿ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗುವುದು ಎಂದರು. ಕೆನೆಪದರ ಪದ್ಧತಿಯನ್ನು ಜಾರಿ ಮಾಡಬೇಕು ಎನ್ನುವುದು ನಮ್ಮ ಬಯಕೆ ಇದೆ. ಅನೇಕ ಬಾರಿ ಮೀಸಲಾತಿಯನ್ನು ಬಳಕೆ ಮಾಡಿಕೊಂಡವರೇ ಮತ್ತೆ ಮತ್ತೆ ಅದೇ ಮೀಸಲಾತಿಯ ಅಡಿಯಲ್ಲಿ ಸ್ಪರ್ಧೆ ಮಾಡುವುದು ಎಷ್ಟು ಸರಿ? ಹೀಗಾಗಿ, ಕೆನೆಪದರ ಪದ್ಧತಿಯನ್ನು ಎಸ್ಸಿ, ಎಸ್ಟಿಯಲ್ಲಿಯೂ ಜಾರಿ ಮಾಡಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಚಂದ್ರು ಯತ್ನಟ್ಟಿ ಇದ್ದರು.

Share this article