ಸಕ್ಕರೆ ಕಾರ್ಖಾನೆ ಮಾಲೀಕರು ಹಳೆ ಬಾಕಿ ನೀಡಲಿ

KannadaprabhaNewsNetwork | Published : Jul 31, 2024 1:01 AM

ಸಾರಾಂಶ

ಕೊಳ್ಳೇಗಾಲ ತಾಲೂಕಿನ ಕುಂತೂರಿನಲ್ಲಿ ಆಯೋಜಿಸಿದ್ದ ರೈತ ಸಮಾವೇಶದಲ್ಲಿ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ತಾಲೂಕಿನ ಕುಂತೂರು ಸಕ್ಕರೆ ಕಾರ್ಖಾನೆ ಮಾಲೀಕರು ಮೊದಲು ರೈತರಿಗೆ ಟನ್‌ಗೆ ನೀಡಬೇಕಿದ್ದ 150 ರು. ಬಾಕಿ ಹಣ ಪಾವತಿಗೆ ಕ್ರಮವಹಿಸಲಿ, ಜೊತೆಗೆ ರೈತರ ಪ್ರತಿ ಟನ್ ಕಬ್ಬಿಗೆ ನಾಲ್ಕು ಸಾವಿರ ದರ ನಿಗದಿ ಮಾಡಿದ ಬಳಿಕ ವಿದ್ಯುಕ್ತವಾಗಿ ಕಾರ್ಖಾನೆ ಆರಂಭಿಸಲು ಮುಂದಾಗಲಿ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹಿಸಿದರು. ಕುಂತೂರಿನಲ್ಲಿ ರೈತರ ಸಮಾವೇಶ ಸಭೆಯನ್ನುದ್ದೆಶಿಸಿ ಮಾತನಾಡಿ, ಕಾರ್ಖಾನೆ ಮಾಲಿಕತ್ವ ರೈತರಿಗೆ ದ್ರೋಹ ಮಾಡುವುದು ಬೇಡ, ರೈತರಿಗಾದ ಅನ್ಯಾಯವನ್ನು ನಾವು ಸಹಿಸುವುದಿಲ್ಲ, ಹಾಗಾಗಿ ಬಾಕಿ ಹಣ ಮತ್ತು ಟನ್‌ಗೆ 4 ಸಾವಿರ ದರ ನಿಗದಿ ಬಳಿಕ ಕಾರ್ಖಾನೆ ಆರಂಭಿಸಲಿ ಎಂದರು.

ಕಳೆದ ಆರು ವರ್ಷಗಳಿಂದ ಸಕ್ಕರೆ ಇಳುವರಿ ಕಡಿಮೆ ತೋರಿಸಿ ರೈತರಿಗೆ ಉಪ ಉತ್ಪನ್ನಗಳ ಲಾಭವಿಲ್ಲ ಎಂದು ತೋರಿಸಿ ವಂಚನೆ ಮಾಡುತ್ತಾ ಬಂದಿರುವ ಕುರಿತು ಜಿಲ್ಲಾಡಳಿತ ತನಿಖೆ ನಡೆಸಬೇಕು ಎಂದರು. ಕಳೆದ ಐದು ವರ್ಷಗಳ ಹಿಂದೆ ಇದೇ ಕಾರ್ಖಾನೆ ಸಕ್ಕರೆ ಇಳುವರಿ 10.50 ತೋರಿಸುತ್ತಿತ್ತು. ಈಗ 9 ಕ್ಕೆ ಇಳಿದಿದೆ ಇದರಿಂದ ರೈತರಿಗೆ ಟನ್ನಿಗೆ 450 ರು. ಕಡಿಮೆ ಹಣ ಸಿಗುತ್ತಿದೆ. ಕಾರ್ಖಾನೆಯಲ್ಲಿ ಬರುವ ಮೊಲಾಸಿಸ್ ಕಡಿಮೆ ಬೆಲೆಗೆ ಅಳಗಂಚಿಯ ಬಣ್ಣಾರಿ ಡಿಸ್ಟಿಲರಿಗೆ ಮಾರಾಟ ಮಾಡುತ್ತಿದ್ದಾರೆ, ಇದರ ಲೆಕ್ಕ ತೋರುತ್ತಿರುವುದರಿಂದ ಇದರಲ್ಲಿಯೂ ರೈತರಿಗೆ ಟನ್ನಿಗೆ ಇನ್ನೂರು ರು. ಕಡಿಮೆಯಾಗಿ ವಂಚನೆಯಾಗುತ್ತಿದೆ ಎಂದು ಆರೋಪಿಸಿದರು. ಕಬ್ಬು ಬೆಳೆಗಾರರಿಗೆ ಕಾರ್ಖಾನೆ ಮಾಲಿಕತ್ವ ರೈತರಿಗೆ ಕಬ್ಬು ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಕಬ್ಬಿನ ದರ ನಿಗದಿಯಾಗುತ್ತಿದೆ, ಮಹದೇಶ್ವರ ಸಕ್ಕರೆ ಕಾರ್ಖಾನೆ ರಾಜ್ಯದಲ್ಲಿಯೇ ಅತಿ ಕಡಿಮೆ ದರ ನೀಡುತ್ತಿದೆ ಎಂದರು.

ಈ ಕಾರ್ಖಾನೆ ಕಳೆದ ವರ್ಷ 6.40 ಲಕ್ಷ ಟನ್ ಕಬ್ಬುನುರಿಸಿ ಸಕ್ಕರೆ ಇಳುವರಿ 9.10 ತೋರಿಸಿದ್ದಾರೆ. ಈ ವರ್ಷ ಈ ವ್ಯಾಪ್ತಿಯಲ್ಲಿ 5 ಲಕ್ಷ ಟನ್ ಕಬ್ಬು ಮಾತ್ರ ರೈತರು ಬೆಳೆದಿದ್ದಾರೆ. ಸಕ್ಕರೆ ಕಾರ್ಖಾನೆಯವರು ರೈತ ಸಂಘಟನೆಗಳನ್ನು ಒಡೆದು ಆಳುವ ಮೂಲಕ ನಿರಂತರವಾಗಿ ರೈತರನ್ನ ಶೋಷಣೆ ಮಾಡುತ್ತಿದೆ ಎಂದರು.

ಕಳೆದ ವರ್ಷ ಬರಗಾಲದ ಕಾರಣ ಶೇ. 30ರಷ್ಟು ಕಬ್ಬು ಕಡಿಮೆಯಾಗಿದೆ. ಕಾರ್ಖಾನೆಗಳು ಈಗ ರೈತರನ್ನು ಕಬ್ಬು ಬೆಳೆಯುವಂತೆ ಪರಿತಪಿಸುವ ಸ್ಥಿತಿ ಬಂದಿದೆ. ರೈತರು ಒಗ್ಗಟ್ಟಾಗಿ ಹೋರಾಟ ಮಾಡಿದರೆ ಖಂಡಿತ ನ್ಯಾಯ ಸಿಗುತ್ತದೆ ಎಂದರು. ನಾವು 2004ರಲ್ಲಿ ರಾಜ್ಯ ಕಬ್ಬು ಬೆಳೆಗಾರ ಸಂಘ ಆರಂಭಿಸಿ ಚಳುವಳಿ ಆರಂಭಿಸಿದಾಗ ಟನ್ 800 ಇತ್ತು. ಇಂದು ಸರ್ಕಾರದಿಂದ 3400 ನಿಗದಿಯಾಗಿದೆ. ಇದು ಸಂಘಟನೆಯ ರೈತರ ಹೋರಾಟದ ಶ್ರಮದಿಂದ ಎಂಬುದನ್ನು ಮರೆಯಬಾರದು, ಇದನ್ನ ಜಿಲ್ಲಾಡಳಿತ, ಕಾರ್ಖಾನೆ ಮಾಲೀಕತ್ವ ಗಂಭೀರವಾಗಿ ಪರಿಣಮಿಸಬೇಕು ಎಂದರು. ಕಬ್ಬಿನ ತೂಕದಲ್ಲಿ ರೈತರಿಗೆ ಮೋಸ ಮಾಡುತ್ತಿರುವುದನ್ನು ತಪ್ಪಿಸಲು ಕಾರ್ಖಾನೆ ಮುಂದೆ ಸರ್ಕಾರದ ವತಿಯಿಂದ ಡಿಜಿಟಲ್ ತೂಕದ ಯಂತ್ರ ಸ್ಥಾಪಿಸಬೇಕು, ಕಬ್ಬು ಕಟಾವು ಹಾಗೂ ಸಾಗಾಣಿಕೆ ವೆಚ್ಚ ಸರ್ಕಾರ ಸೂಚನೆ ಮಾಡಿದ ದರಕ್ಕಿಂತ ಹೆಚ್ಚು ಕಡಿತ ಮಾಡಿ ರೈತರಿಂದ ಹಣ ಸುಲಿಗೆ ಮಾಡುತ್ತಿದ್ದು ಈ ವಂಚನೆ ನಿಲ್ಲಬೇಕು ಎಂದು ಆಗ್ರಹಿಸಿದರು.

ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕಬ್ಬು ಸುಟ್ಟು ಹಾನಿಯಾದಾಗ ಕಾರ್ಖಾನೆಯವರು ಕಬ್ಬಿಣ ಹಣದಲ್ಲಿ 25 ಶೇ. ಕಡಿತ ಮಾಡುತ್ತಿರುವುದನ್ನು ನಿಲ್ಲಿಸಿ. ಸರ್ಕಾರ ನಿಗದಿ ಮಾಡಿರುವ ಎಫ್‌ಆರ್‌ಪಿ ಹಣ ಪೂರ್ತಿ ನೀಡುವ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದರು.

ಕಬ್ಬು ಪೂರೈಕೆ ಮಾಡಿದ ಎಲ್ಲಾ ರೈತರಿಗೂ ಕಡ್ಡಾಯ ಮೊಬೈಲ್ ಸಂದೇಶದ ಮೂಲಕ ಕಬ್ಬಿನ ಹಣ ಪಾವತಿ ಬಗ್ಗೆ ಬಿಲ್‌ಗಳನ್ನು ರವಾನಿಸಬೇಕು. ಸರ್ಕಾರ ಬಾಳೆ ಅಡಿಕೆ ಕಾಫಿ ಬೆಳೆಗಳಿಗೆ ಬೆಳೆ ವಿಮೆ ಜಾರಿ ತರುತ್ತದೆ. ಕಬ್ಬಿಗೆ ರೈತರು ಒತ್ತಾಯ ಮಾಡುತ್ತಿದ್ದರೂ ಜಾರಿ ಮಾಡುತ್ತಿಲ್ಲ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಲಿ ಎಂದರು.

ನಿರ್ವಾಹಕರ ಮಾತಿಗೆ ಜಗ್ಗದ ರೈತರು: ರೈತರು ಇಂದು ಹಮ್ಮಿಕೊಂಡಿದ್ದ ಸಮಾವೇಶ ಸ್ಥಳಕ್ಕೆ ಕಾರ್ಖಾನೆ ಮಾಲೀಕತ್ವ ಮುತ್ತು ಕುಮಾರ್ ರೈತರ ಮನವಿ ಆಲಿಸಿ ಹಲವು ಭರವಸೆ ನೀಡಿದರೂ ರೈತರು ಒಪ್ಪಲಿಲ್ಲ, ರೈತರ ಸಮಸ್ಯೆ ಬಗೆಹರಿಸಿ ನಂತರ ಕಾರ್ಖಾನೆ ಆರಂಭಿಸಿ ಎಂದು ರೈತರು ಆಗ್ರಹಿಸಿದ ಹಿನ್ನೆಲೆ ಮುತ್ತುಕುಮಾರ್ ನಿರ್ಗಮಿಸುವಂತಾಯಿತು. ಜಿಲ್ಲಾ ಕಾರ್ಯಾಧ್ಯಕ್ಷ ರೇವಣ್ಣ, ಪ್ರಧಾನ ಕಾರ್ಯದರ್ಶಿ ಮೂಕಹಳ್ಳಿ ಮಹದೇವಸ್ವಾಮಿ, ಉಪಾಧ್ಯಕ್ಷ ಪಟೇಲ್ ಶಿವಮೂರ್ತಿ, ಚಂದ್ರಶೇಖರ್ ಮೂರ್ತಿ ಜಿಲ್ಲಾಧ್ಯಕ್ಷ ಪಿ ಸೋಮಶೇಖರ, ಯಳಂದೂರು ತಾಲೂಕು ಅಧ್ಯಕ್ಷ ಷಡಕ್ಷರಿ ಕಾರ್ಯಾಧ್ಯಕ್ಷ ಹತ್ತಳ್ಳಿ ದೇವರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ಕುರುಬೂರ್ ಸಿದ್ದೇಶ್, ಮಾರ್ಬಳ್ಳಿ ನೀಲಕಂಠಪ್ಪ. ಅಂಬಳೆ ಮಂಜುನಾಥ್, ಪರಶಿವಮೂರ್ತಿ. ರಂಗರಾಜು ಸುಂದ್ರಪ್ಪ ಇದ್ದರು.

Share this article