ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಶಿಕ್ಷಕರು ಸಂಕಲ್ಪ ಮಾಡಲಿ

KannadaprabhaNewsNetwork |  
Published : Jan 12, 2024, 01:46 AM IST
ಹಗರಿಬೊಮ್ಮನಹಳ್ಳಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಕಲಿಕಾ ಕಿರಣ ಸ್ಕೋರಿಂಗ್ ಪ್ಯಾಕೇಜ್ ಪುಸ್ತಕವನ್ನು ಶಾಸಕ ನೇಮರಾಜನಾಯ್ಕ ಬಿಡುಗಡೆಗೊಳಿಸಿದರು. | Kannada Prabha

ಸಾರಾಂಶ

ತಾಲೂಕಿನಲ್ಲಿ ೨೦೦೮ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿದ್ದು, ಇದರಲ್ಲಿ ೬೫೬ ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿದ್ದು, ಅವರ ತೇರ್ಗಡೆಗೆ ವಿಶೇಷ ಕಾಳಜಿ ವಹಿಸುವ ಅಗತ್ಯವಿದೆ.

ಹಗರಿಬೊಮ್ಮನಹಳ್ಳಿ: ಶಿಕ್ಷಕರು ತಮ್ಮ ಪಾಲಿನ ಪವಿತ್ರ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿರ್ವಹಿಸಬೇಕಿದೆ ಎಂದು ಶಾಸಕ ಕೆ. ನೇಮರಾಜನಾಯ್ಕ ತಿಳಿಸಿದರು.

ಪಟ್ಟಣದ ತಾಪಂ ಮಹಾತ್ಮಗಾಂಧಿ ಸಭಾಂಗಣದಲ್ಲಿ ನಡೆದ ಫಲಿತಾಂಶ ಸುಧಾರಣಾ ಕಾರ್ಯಾಗಾರದಲ್ಲಿ ಕಲಿಕಾ ಕಿರಣ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು. ಎಸ್ಸೆಸ್ಸೆಲ್ಸಿ ಮಕ್ಕಳ ಫಲಿತಾಂಶ ಸುಧಾರಣೆಗೆ ಶಿಕ್ಷಣ ಇಲಾಖೆ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ಆದ್ಯತೆ ನೀಡಿ ಫಲಿತಾಂಶ ಸುಧಾರಿಸಲು ಸರ್ವಪ್ರಯತ್ನವನ್ನು ನಡೆಸಿದೆ. ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ್ ಬೇವೂರ್ ನಿರಂತರ ಶ್ರಮದೊಂದಿಗೆ, ಶಿಕ್ಷಕರನ್ನು ಕ್ರೀಯಾಶೀಲಗೊಳಿಸಿದ್ದಾರೆ. ಶೇ. ೧೦೦ರಷ್ಟು ಫಲಿತಾಂಶದ ಜತೆಗೆ ಗುಣಮಟ್ಟದ ಸಾಧನೆಗೆ ಸಂಕಲ್ಪ ಮಾಡಬೇಕಿದೆ. ಯಾರಿಗೂ ಅಧಿಕಾರ, ಹಣ ಶಾಶ್ವತವಲ್ಲ. ಜ್ಞಾನವನ್ನು ವೃದ್ಧಿಸಿಕೊಂಡು ಅರ್ಥಪೂರ್ಣ ಜೀವನ ಸಾಗಿಸಬೇಕು. ಎಸ್ಸೆಸ್ಸೆಲ್ಸಿ ಮಕ್ಕಳು ಸಮಯವನ್ನು ವ್ಯರ್ಥಮಾಡದೇ ನಿರಂತರ ವಿದ್ಯಾಭ್ಯಾಸದಲ್ಲಿ ತೊಡಗಬೇಕು. ಶಾಲೆಯಲ್ಲಿನ ಕಂಪ್ಯೂಟರ್‌ಗಳು ಸದ್ಬಳಕೆ ಆಗಬೇಕು. ಸರ್ಕಾರಿ ಶಾಲೆಗಳ ಸುಧಾರಣೆಗೆ ಸರ್ಕಾರ ಸಾಕಷ್ಟು ಅನುದಾನವನ್ನು ನೀಡುತ್ತಿದ್ದು, ಫಲಕಾರಿಯಾಗಬೇಕಾದರೆ ಉತ್ತಮ ಫಲಿತಾಂಶ ಹೊರಬರಬೇಕು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಉತ್ತಮ ತರಬೇತಿ ನೀಡಬೇಕು. ತಾಲೂಕಿನಲ್ಲಿ ೨೦೦೮ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿದ್ದು, ಇದರಲ್ಲಿ ೬೫೬ ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿದ್ದು, ಅವರ ತೇರ್ಗಡೆಗೆ ವಿಶೇಷ ಕಾಳಜಿ ವಹಿಸುವ ಅಗತ್ಯವಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ್ ಬೇವೂರ್ ಮಾತನಾಡಿ, ಎಸ್ಸೆಸ್ಸೆಲ್ಸಿಯಲ್ಲಿ ಫೇಲಾದ ವಿದ್ಯಾರ್ಥಿಗಳು ಬಾಲಕಾರ್ಮಿಕರಾಗುವ ಅಪಾಯದ ಹಿನ್ನೆಲೆ ಪ್ರತಿಶತ ಫಲಿತಾಂಶ ಹೆಚ್ಚಿಸಲು ಈ ಬಾರಿ ಅಗತ್ಯ ಸಿದ್ಧತೆ ನಡೆಸಲಾಗಿದೆ. ತಾಲೂಕಿನಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಫಲಿತಾಂಶದ ಗುಣಮಟ್ಟ ಹೆಚ್ಚಿಸಲು ೬ ವಿಷಯಗಳನ್ನು ಒಳಗೊಂಡ ಕಲಿಕಾ ಕಿರಣ ಪುಸ್ತಕ ಸಿದ್ಧಪಡಿಸಲಾಗಿದೆ. ತಾಲೂಕಿನ ಪ್ರತಿ ಶಾಲೆಯಲ್ಲಿ ವಿಶೇಷ ತರಗತಿಗಳ ಮೂಲಕ, ರಸಪ್ರಶ್ನೆ, ಗುಂಪು ಚಟುವಟಿಕೆ, ಮಕ್ಕಳ ಮನೆ ಭೇಟಿ, ಪೋಷಕರ ಸಭೆಯ ಮೂಲಕ ಫಲಿತಾಂಶ ಸುಧಾರಿಸಲು ಶ್ರಮ ಹಾಕಲಾಗುತ್ತಿದೆ. ನುರಿತ ವಿಷಯ ಸಂಪನ್ಮೂಲ ಶಿಕ್ಷಕರ ಮೂಲಕ ಪಾಸಿಂಗ್ ಪ್ಯಾಕೇಜ್ ಪುಸ್ತಕ ಹೊರತರಲಾಗಿದೆ. ಹೊಸ ಪ್ರಯತ್ನದಲ್ಲಿ ೧೦೦ರಷ್ಟು ಯಶಸ್ವಿಯಾಗುತ್ತೇವೆ ಎಂದರು. ಇದೇವೇಳೆ ಆದರ್ಶಶಾಲೆ ಸಂತೋಷ ಕೊಟಿಗಿ, ಕಿತ್ತೂರು ರಾಣಿ ಚನ್ನಮ್ಮ ಶಾಲೆಯ ಕೆ.ಎಂ. ಗಂಗಾಧರ, ಗದ್ದಿಕೇರಿ ಶಾಲೆಯ ನಾಗೇಂದ್ರ ಬಿ. ಮೇವುಂಡಿ ಅವರು ಪಿಪಿಟಿ ಪ್ರದರ್ಶನದ ಮೂಲಕ ಫಲಿತಾಂಶ ಸುಧಾರಣೆಗೆ ಶಾಲಾ ಕ್ರಮ ವಿವರಿಸಿದರು.

ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರವಿನಾಯ್ಕ, ನರೇಗಾ ಸಹಾಯಕ ನಿರ್ದೇಶಕ ರಮೇಶ್ ಮಹಾಲಿಂಗಪುರ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಂ.ಪಿ.ಎಂ. ಮಂಜುನಾಥ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ರವಿಚಂದ್ರನಾಯ್ಕ, ತಾಲೂಕಿನ ಎಲ್ಲ ಪ್ರೌಢಶಾಲೆಗಳ ಮುಖ್ಯಗುರುಗಳು ಇದ್ದರು. ಕಾರ್ಯಕ್ರಮವನ್ನು ದೈಹಿಕ ವಿಷಯ ಪರಿವೀಕ್ಷಕ ಕೊಟ್ರೇಶ್, ಶಿಕ್ಷಣ ಸಂಯೋಜಕರಾದ ಬಿ. ಮುಸ್ತಾಕ್ ಅಹಮದ್, ಎಸ್ಸೆಸ್ಸೆಲ್ಸಿ ನೋಡೆಲ್ ಅಧಿಕಾರಿ ಎನ್.ವಿ. ಶಿವಲಿಂಗಸ್ವಾಮಿ ನಿರ್ವಹಿಸಿದರು.

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ