ಮರಿಯಮ್ಮನಹಳ್ಳಿ: ರಂಗಭೂಮಿ ಅಧುನಿಕತೆಗೊಳ್ಳಬೇಕು. ರಂಗಭೂಮಿಯ ವಸ್ತುಗಳನ್ನು ಮತ್ತು ಪಠ್ಯವನ್ನು ಬದಲಾಯಿಸಿಕೊಳ್ಳುವಂತಾಗಬೇಕು. ರಂಗಭೂಮಿ ಹೊಸ ರೀತಿಯ ಪ್ರಯೋಗಶೀಲತೆಗೆ ಒಳಗಾದಾಗ ಇನ್ನೂ ಹೆಚ್ಚಿನ ಮಟ್ಟದಲ್ಲಿ ಬೆಳೆಸಲು ಸಾಧ್ಯವಾಗಲಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ವೆಂಕಟಗಿರಿ ದಳವಾಯಿ ಹೇಳಿದರು.
ಇಲ್ಲಿನ ದುರ್ಗಾದಾಸ್ ರಂಗಮಂದಿರದಲ್ಲಿ ಸ್ಥಳೀಯ ಕಲಾವಿದರು ಹಮ್ಮಿಕೊಂಡಿದ್ದ ವಿಶ್ವರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ವೃತ್ತಿ ರಂಗಭೂಮಿಯ ಇಂದಿನ ಪ್ರಸ್ತುತಿಯ ಕುರಿತು ಅವರು ಮಾತನಾಡಿದರು. 40-50 ವರ್ಷಗಳ ಕಾಲ ಅತ್ಯುನ್ನತ ಶ್ರೀಮಂತ ಸ್ಥಿತಿಯಲ್ಲಿದ್ದ ರಂಗಭೂಮಿ ಈಗ ಯಾಕೆ ಈ ಸ್ಥಿತಿಗೆ ಬಂತು? ಇದಕ್ಕೆ ಸಿನಿಮಾ ಕಾರಣವೋ ಅಥವಾ ದೂರದರ್ಶನ ಕಾರಣವೋ ಅಥವಾ ಕಲಾವಿದರಿಗೆ ಸರ್ಕಾರದಿಂದ ಸರಿಯಾದ ಪ್ರೋತ್ಸಾಹ ಸಿಗದೇ ಇರುವುದು ಕಾರಣವೋ ಎಂದು ನಾವೆಲ್ಲರೂ ಗಂಭೀರವಾಗಿ ಆಲೋಚಿಸಬೇಕಾಗಿದೆ ಎಂದು ಅವರು ಹೇಳಿದರು.ಯಕ್ಷಗಾನಕ್ಕೆ ದೈವಿಕ ಸ್ವರೂಪ ಕೊಟ್ಟಿದ್ದಾರೆ. ಯಕ್ಷಗಾನಕ್ಕೆ ಸಾಕಷ್ಟು ಬೇಡಿಕೆ ಇದೆ. ನಾವು ನಮ್ಮ ಕಲೆಗೆ ದೈವಿಕ ಸ್ವರೂಪ ಕೊಟ್ಟಿಲ್ಲ. ನಾಟಕಗಳು ಎಂದರೆ ಮನೋರಂಜನೆ ಕಲೆ ಎಂದು ಕೆಲವರು ಭಾವಿಸಿದ್ದಾರೆ. ಆದರೆ ರಂಗಭೂಮಿ ಕಲೆ ಮತ್ತು ಕಲಾವಿದರು ಸಮಾಜ ಸುಧಾರಣೆ ಕೆಲಸಗಳನ್ನು ಮಾಡಿದ್ದಾರೆ ಎಂದು ಅವರು ಹೇಳಿದರು.
ಸಂಡೂರಿನ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ಕನ್ನಡ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ಮಲ್ಲಯ್ಯ ಸಂಡೂರು ವೃತ್ತಿ ರಂಗಗೀತೆಗಳ ಕುರಿತು ಮಾತನಾಡಿ, ಜೀವಂತ ರಂಗಭೂಮಿಯ ಜೀವನಾಡಿ ರಂಗಗೀತೆಗಳಾಗಿದ್ದು, ರಂಗಗೀತೆಗಳು ಸಹ ನಾಟಕದಲ್ಲಿ ಅಸ್ತಿತ್ವ ಪಡೆಯಲು ಸಾಧ್ಯಯಾಗಿದೆ ಎಂದು ಹೇಳಿದರು.ಹಿರಿಯ ರಂಗ ಕಲಾವಿದೆ ಕಾಳಿ ಗಂಗಮ್ಮ ಕಾರ್ಯಕ್ರಮ ಉದ್ಘಾಟಿಸಿದರು. ಪಪಂ ಅಧ್ಯಕ್ಷ ಹಾದಿಮನಿ ಹುಸೇನ್ ಬಾಷಾ ಅಧ್ಯಕ್ಷತೆ ವಹಿಸಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್ ಕೆ. ರಂಗಣ್ಣನವರ್, ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕತೆ ಹಿರಿಯ ಕಲಾವಿದೆ ಡಾ. ಕೆ. ನಾಗರತ್ನಮ್ಮ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಾತಾ ಬಿ. ಮಂಜಮ್ಮ ಜೋಗತಿ ಭಾಗವಹಿಸಿದ್ದರು.ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಕಲಾ ಜಾಥಾ ನಡೆಸಿ, ಆನಂತರ ಬಸ್ ನಿಲ್ದಾಣದಲ್ಲಿ ಬೀದಿ ನಾಟಕ ಪ್ರದರ್ಶಿಸಿದರು. ಸಂಜೆ ಸ್ಥಳೀಯ ಕಲಾವಿದರಿಂದ ರಂಗಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು. ರಾತ್ರಿ ಸಂಪೂರ್ಣ ಹೇಮರೆಡ್ಡಿ ಮಲ್ಲಮ್ಮ ನಾಟಕ ಪ್ರದರ್ಶನ ನಡೆಯಿತು.
ಚಂದ್ರು ಮತ್ತು ಸಂಗಡಿಗರು ಪ್ರಾರ್ಥಿಸಿದರು. ಕೆ. ನಾಗೇಶ್ ಸ್ವಾಗತಿಸಿದರು. ಡಾ. ಕೆ. ನಾಗರತ್ನಮ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುಷ್ಪಾ ಸರದಾರ್ ಕಾರ್ಯಕ್ರಮ ನಿರೂಪಿಸಿದರು.