ಗವಿಶ್ರೀಗಳಿಂದ ತುಂಗಭದ್ರಾ ಉಳಿವು ಕಾರ್ಯ ಆಗಲಿ: ಛಾಯಾಗ್ರಾಹಕ ಕೃಪಾಕರ ಸೇನಾನಿ

KannadaprabhaNewsNetwork | Published : Jan 30, 2024 2:04 AM

ಸಾರಾಂಶ

ಈಗ ನಮಗೆ ವಿಜ್ಞಾನ ಧರ್ಮ ಆಗಬೇಕಿದೆ. ಯೂರೋಪ್ ನಲ್ಲಿ ಬೆಂಕಿಯನ್ನೇ ಕಾಣದ ಕಾಡು ಸುಟ್ಟು ಹೋಗುತ್ತಿವೆ. ಕೊಪ್ಪಳದ ತುಂಗಭದ್ರಾ ನದಿ ಹರಿಯುವುದು ನಿಂತು ಹೋಗಿದೆ.

ಕೊಪ್ಪಳ: ಗವಿಸಿದ್ದೇಶ್ವರ ಶ್ರೀಗಳಿಗೆ ಪರಿಸರ ಕಾಳಜಿ ಇದೆ. ಅದು ನಿಜಕ್ಕೂ ನನ್ನ ಗಮನ ಸೆಳೆದಿದೆ. ಅವರಿಂದ ತುಂಗಭದ್ರಾ ಜಲಾಶಯ ಉಳಿವಿನ ಕಾರ್ಯ ಆಗಲಿ ಎಂದು ವಿಶ್ವವಿಖ್ಯಾತ ಪರಿಸರ ಮತ್ತು ವನ್ಯಜೀವಿ ಛಾಯಾಗ್ರಾಹ ಕೃಪಾಕರ ಸೇನಾನಿ ಕಳಕಳಿ ವ್ಯಕ್ತಪಡಿಸಿದರು.

ನಗರದ ಗವಿಮಠದ ಕೈಲಾಸ ಮಂಟಪದಲ್ಲಿ ಜರುಗಿದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ನಾನು ಹಲವು ಹೋರಾಟಗಳಲ್ಲಿ ಪಾಲ್ಗೊಂಡಿರುವೆ. ಸಾಹಿತ್ಯ, ಚಿಂತಕರು, ವಿಚಾರವಾದಿಗಳ ಜೊತೆಗೆ ಹೆಚ್ಚು ಸಂಗವಿದೆ. ನಾವು ಕಾಡಿನಲ್ಲಿ ಹೆಚ್ಚು ಓಡಾಟ ನಡೆಸಿದವರು. ಇಂದು ಪರಿಸರದ ಜಾಗತಿಕ ಸಮಸ್ಯೆಯಾಗಿದೆ. ಪರಿಸರದ ಜ್ವಲಂತ ಸಮಸ್ಯೆಗಳು ಎಂದಿಗೂ ಮುಗಿಯಲ್ಲ. ಪ್ರವಾಹ, ಬರ, ಮಳೆಯಿಂದ ಕಷ್ಟ ಅನುಭವಿಸುವವು ಮೊದಲು ಬಡವರು ಮಾತ್ರ ಎಂದರು.

ಪರಿಸರ ಮನುಕುಲಕ್ಕೆ ಬೇಕಾಗಿದೆ. ವಿಜ್ಞಾನ ಸತ್ಯದ ಶೋಧನೆಯಾಗಿದೆ. ಚಿಂತನೆಗೆ ಒಳಪಡುವ ವಿಚಾರಗಳ ನಿರಾಕರಣೆ ತುಂಬಾ ಇರುತ್ತದೆ ಎಂದರು.

ಈಗ ನಮಗೆ ವಿಜ್ಞಾನ ಧರ್ಮ ಆಗಬೇಕಿದೆ. ಯೂರೋಪ್ ನಲ್ಲಿ ಬೆಂಕಿಯನ್ನೇ ಕಾಣದ ಕಾಡು ಸುಟ್ಟು ಹೋಗುತ್ತಿವೆ. ಕೊಪ್ಪಳದ ತುಂಗಭದ್ರಾ ನದಿ ಹರಿಯುವುದು ನಿಂತು ಹೋಗಿದೆ. ಈಗಲೇ ಹೀಗಾದರೆ ಇನ್ನು ಮುಂದೆ ಹೇಗೆ ಎನ್ನುವುದನ್ನು ತಿಳಿಯಬೇಕಿದೆ. ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಗಿಡ ನೆಡಬೇಕು ಎಂದು ಹೇಳುತ್ತಿವೆ. ಈಚೆಗೆ ಒಂದು ವರದಿ ಪ್ರಕಾರ, ಗಿಡ ಮರಗಳ ನೆಟ್ಟರೆ ಪರಿಹಾರ ಅಲ್ಲ ಎಂದು ಹೇಳುತ್ತದೆ. ಕಪ್ಪತ್ತಗುಡ್ಡ, ಆನೆಗೊಂದಿಯ ಗುಡ್ಡ-ಬಂಡೆಗಳು ನಿಜವಾದ ಜೀವ ಪರಿಸರ ಆಗಿದೆ ಎಂದರು.ಪರಿಸರ ಸಮಸ್ಯೆಯ ಮೂಲ ತಿಳಿಯಬೇಕು. ನದಿ ಹುಟ್ಟುವ ಮೂಲ ನಾವು ತಿಳಿದು, ಅಲ್ಲಿ ಜನತೆ ನದಿಯ ಬಗ್ಗೆ ಕಾಳಜಿ ಹೇಗಿದೆ ಎನ್ನುವುದು ತಿಳಿಯಬೇಕು. ಪರಿಸರದಲ್ಲಿ ನಿಜಕ್ಕೂ ಕಲ್ಲು ಬಂಡೆಗಳಿಗೂ ಜೀವ ಇದೆ. ಮನುಷ್ಯ ಕಲ್ಲು ಬಂಡೆಗಳನ್ನು ಸೃಷ್ಟಿಸಲು ಸಾಧ್ಯವಿಲ್ಲ. ಈಗ ಅಳಿದುಳಿದ ಜಾಗಗಳನ್ನೇ‌ ಇನ್ನಾದರೂ ಸಂರಕ್ಷಣೆ ಮಾಡಬೇಕು. ಅರಣ್ಯ ಇಲಾಖೆಗೆ ಪರಿಸರ ಕಾಳಜಿಯ ಮನಸ್ಥಿತಿ ಇಲ್ಲ ಎಂದು ನನಗೆ ಅನಿಸುತ್ತದೆ ಎಂದರು.ತುಂಗಭದ್ರಾ ಪ್ರದೇಶದ ನದಿ ಪಾತ್ರದಲ್ಲಿರುವ ನೀರುನಾಯಿ ಸಂರಕ್ಷಣೆಗೆ ಹೋರಾಡಬೇಕು ಎನ್ನುವ ಕಾಳಜಿ ನನ್ನದು. ಸರ್ಕಾರ ಕೇವಲ ದಾಖಲೆಗಳಲ್ಲಿ ಘೋಷಿಸಿದೆ. ಆದರೆ ರಕ್ಷಣಾ ಕಾರ್ಯ ನಡೆದಿಲ್ಲ‌. ತುಂಗಭದ್ರಾ ಹುಟ್ಟುವ ಸ್ಥಳದಿಂದ ನದಿಯ ಸಂರಕ್ಷಣೆ ಕಾರ್ಯ ಆಗಬೇಕಿದೆ. ಈಗಾಗಲೇ ತುಂಗಭದ್ರಾ ಒಡಲಲ್ಲಿ ನೀರಿಲ್ಲ. ನದಿ ಬತ್ತಿದೆ. ಹರಿಯುತ್ತಿಲ್ಲ. ಹೀಗಾದರೆ ಮುಂಬರುವ ಮೇ ತಿಂಗಳಲ್ಲಿ ಕುಡಿವ ನೀರಿನ ಗತಿಯೇನು ಎಂದು ಪ್ರಶ್ನಿಸಿದರು.

Share this article