ಕನ್ನಡಪ್ರಭ ವಾರ್ತೆ ಬೆಳಗಾವಿ
ವಿಶ್ವವಿದ್ಯಾಲಯವು ಪದವಿಗಳಿಗೆ ಕೇವಲ ಅಂಕಪಟ್ಟಿ ನೀಡುವ ಕೇಂದ್ರವಾಗಬಾರದು. ಅದು ವಿದ್ಯಾರ್ಥಿಗಳಿಗೆ ಬದುಕು ಕಟ್ಟಿಕೊಡುವ ಭವಿಷ್ಯ ರೂಪಿಸುವ ತಾಣಗಳಾಗಬೇಕು ಎಂದು ಆರ್‌ಸಿಯು ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ ಹೇಳಿದರು.ನಗರದ ಆರ್‌ಸಿಯುನ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದಲ್ಲಿ ಶುಕ್ರವಾರ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಇತಿಹಾಸ ವಿಭಾಗ ಹಾಗೂ ರಾಚವಿ ಕಾಲೇಜು ಇತಿಹಾಸ ಶಿಕ್ಷಕರ ಸಂಘ, ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಸಹಯೋಗದೊಂದಿಗೆ ಜರುಗಿದ ಇತಿಹಾಸ ವಿಷಯದ ಸ್ನಾತಕ ಪದವಿಯ ಪಠ್ಯರಚನೆ ಪ್ರಾಧ್ಯಾಪಕರ ಪುನಃಶ್ಚೇತನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಅಂತರಂಗವನ್ನು ಜಾಗೃತಗೊಳಿಸಿ ಕಲಿಕೆಯ ಬಗ್ಗೆ ಆಸಕ್ತಿ ಹುಟ್ಟಿಸುವ ಕಾರ್ಯ ಪ್ರಾಧ್ಯಾಪಕರಾಗಿದೆ. ವಿದ್ಯಾರ್ಥಿಗಳಿಗೆ ಸತ್‌ಚಾರಿತ್ರ್ಯದ ಬಗ್ಗೆ ಅರಿವು ಮೂಡಿಸಬೇಕು ಎಂದರು.
ವಿದ್ಯಾರ್ಥಿಗಳಿಗೆ ಕಲಿಸುವ ಕಾರ್ಯದಲ್ಲಿ ಮಾತ್ರ ನಿರತರಾಗದೇ ಪ್ರಾಧ್ಯಾಪಕರು ಪ್ರತಿ ನಿತ್ಯ ತಮ್ಮ ವಿಷಯದ ಆಳ ಮತ್ತು ನವ ಬದಲಾವಣೆಗಳನ್ನು ತಿಳಿಯಲು ಮುಂದಾಗಬೇಕು. ಕೃತಕ ಬುದ್ಧಿಮತ್ತೆ ಸೇರಿದಂತೆ ಪ್ರಚಲಿತ ತಂತ್ರಜ್ಞಾನಗಳ ನೆರವಿನಿಂದ ಇತಿಹಾಸ ಪಾಠಗಳನ್ನು ವಿದ್ಯಾರ್ಥಿಗಳಿಗೆ ಹೇಳಬೇಕು. ಆಗ ಮಾತ್ರ ವಿದ್ಯಾರ್ಥಿಗಳಿಗೆ ಇತಿಹಾಸದಲ್ಲಿ ಜರುಗಿದ ಘಟನೆಗಳು ವರ್ತಮಾನದಲ್ಲಿ ಜರುಗುತ್ತಿದೆ ಎಂಬಷ್ಟು ಪರಿಣಾಮಕಾರಿಯಾಗಿ ಮನಮಟ್ಟುವವು. ವಿದ್ಯಾರ್ಥಿಗಳಿಗೆ ಇತಿಹಾಸವನ್ನು ಅವರ ಕಣ್ಣ ಮುಂದೆ ನಡೆಯುತ್ತಿದೆ ಎಂಬಂತೆ ಭಾಸವಾಗುವಂತೆ ತಂತ್ರಜ್ಞಾನಗಳನ್ನು ನೆರವಿನೊಂದಿಗೆ ಪಾಠ ಮಾಡಲು ಪ್ರಾಧ್ಯಾಪಕರು ಮುಂದಾಗಬೇಕು ಎಂದು ಸಲಹೆ ನೀಡಿದರು.ಕುಲಸಚಿವೆ ರಾಜಶ್ರೀ ಜೈನಾಪೂರ ಮಾತನಾಡಿ, ವಿದ್ಯಾರ್ಥಿಗಳು ಇತ್ತೀಚೆಗೆ ಸ್ನಾತಕ ಪದವಿಯಲ್ಲಿ ಇತಿಹಾಸ ವಿಷಯದ ಆಯ್ಕೆಯನ್ನು ಕಡೆಗಣಿಸುತ್ತಿದ್ದಾರೆ. ಕಳೆದ ದಶಕದಲ್ಲಿ ಹೋಲಿಕೆ ಮಾಡಿದ್ದಲ್ಲಿ ಇತಿಹಾಸ ಕಲಿಕೆಗೆ ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದಾರೆ. ಇತಿಹಾಸ ವಿಷಯ ಕಲಿತರೆ ಭವಿಷ್ಯ ಕಟ್ಟಿಕೊಳ್ಳಲು ಉಪಯುಕ್ತವಿಲ್ಲ ಎಂಬ ಭಾವ ವಿದ್ಯಾರ್ಥಿಗಳಲ್ಲಿ ಮನೆ ಮಾಡುತ್ತಿದೆ. ಹಾಗಾಗೀ ಪ್ರಾಧ್ಯಾಪಕರು ಇತಿಹಾಸ ವಿಷಯದ ಪ್ರಾಮುಖ್ಯತೆಯನ್ನು ವಿದ್ಯಾರ್ಥಿಗಳಿಗೆ ತಿಳಿಸುವ ನಿಟ್ಟಿನಲ್ಲಿ ಶ್ರದ್ಧೆ ಮತ್ತು ಆಸಕ್ತಿಯಿಂದ ಕಾರ್ಯನಿರ್ವಹಿಸಲು ಮುಂದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಮೌಲ್ಯಮಾಪನ ಕುಲಸಚಿವ ಪ್ರೊ.ರವೀಂದ್ರನಾಥ ಕದಂ, ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ. ಕೆ.ಎಲ್.ಎನ್. ಮೂರ್ತಿ, ಕಾಲೇಜು ಪ್ರಾಚಾರ್ಯ ಡಾ.ಎಸ್.ಎಸ್. ತೇರದಾಳ, ಸಂಪನ್ಮೂಲ ವ್ಯಕ್ತ್ತಿಗಳಾಗಿ ಇತಿಹಾಸ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ. ಅಶ್ವತ್ಥನಾರಾಯಣ, ಕೆ.ಎಂ.ಲೋಕೇಶ ಡಾ.ಎಂ.ಎನ್. ಬೆಣ್ಣುರ ಮತ್ತು ಡಾ.ಎಸ್.ಎ. ಕರ್ಕಿ ಉಪಸ್ಥಿತರಿದ್ದರು.-----------ಇತಿಹಾಸ ವಿಷಯವು ಪುರತಾನ ಸಂಗತಿಗಳನ್ನು ಕಲಿಸುವ ವಿಷಯವಾಗಿದ್ದರು ಕೂಡಾ ಅದನ್ನು ಆಧುನಿಕ ತಂತ್ರಜ್ಞಾನ ಉಪಯೋಗದಿಂದ ಎಷ್ಟು ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಪಾಠ ಮಾಡಬಹುದು ಎಂಬುವುದನ್ನು ಎಲ್ಲ ಪ್ರಾಧ್ಯಾಪಕರು ಅರಿತುಗೊಳ್ಳಬೇಕು. ಸ್ನಾತಕ ವಿದ್ಯಾರ್ಥಿಗಳು ತಾವು ಕಲಿಯುವ ವಿಷಯದ ಕುರಿತಾಗಿ ಸಂಶೋಧನೆ ಮಾಡುವಷ್ಟು ಆಸಕ್ತಿ ಹುಟ್ಟಿಸುವ ಜವಾಬ್ದಾರಿ ಶಿಕ್ಷಕರದಾಗಿದೆ. ಹಾಗಾಗೀ ಸ್ನಾತಕ ಪದವಿಯ ಪಠ್ಯವು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಮತ್ತು ಸಂಶೋಧನೆದಲ್ಲಿ ತೊಡಗುವಷ್ಟು ಸ್ಫೂರ್ತಿ ನೀಡುವಂತರಿಬೇಕು.
-ಪ್ರೊ.ಸಿ.ಎಂ.ತ್ಯಾಗರಾಜ. ಆರ್‌ಸಿಯು ಕುಲಪತಿ.-------------
ಬಿಇ ಮತ್ತು ಎಂಬಿಬಿಎಸ್ ಪದವಿ ಪಡೆದ ಕೆಲವರು ನಾಗರಿಕ ಸೇವೆ ಅರ್ಹತಾ ಪರೀಕ್ಷೆಯಲ್ಲಿ ಇತಿಹಾಸ ವಿಷಯವನ್ನು ಆಯ್ಕೆ ಮಾಡಿ ಅತ್ಯಂತ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಗೊಂಡು ಐಎಎಸ್ ಮತ್ತು ಕೆಎಎಸ್ ಅಧಿಕಾರಿಗಳಾಗುತ್ತಿದ್ದಾರೆ. ಸ್ನಾತಕ ಪದವಿಯಲ್ಲಿ ಇತಿಹಾಸ ಕಲಿತ ವಿದ್ಯಾರ್ಥಿಗೂ ಮತ್ತು ಇಂಜಿನಿಯರ್ ಡಾಕ್ಟರ್ ಪದವಿ ಪಡೆದವರಷ್ಟೂ ಇತಿಹಾಸ ವಿಷಯವಾಗಿ ಆಳವಾದ ವಿಷಯದ ಗ್ರಹಿಕೆ ಇಲ್ಲದಿರುವುದು ಕಂಡು ಬರುತ್ತಿದೆ.-ರಾಜಶ್ರೀ ಜೈನಾಪೂರ, ಕುಲಸಚಿವೆ.