ಕನ್ನಡಪ್ರಭ ವಾರ್ತೆ ಮಂಗಳೂರು
ಬಹುನಿರೀಕ್ಷಿತ ವಕ್ಫ್ ತಿದ್ದುಪಡಿ ಕಾಯ್ದೆಗೆ ಸಂಸತ್‌ನ ಉಭಯ ಸದನಗಳಲ್ಲಿ ಅನುಮೋದನೆ ಸಿಕ್ಕಿರುವುದು ನನ್ನ ಜೀವನದ ಅತ್ಯಂತ ಸಂತಸದ ದಿನ. ರಾಷ್ಟ್ರಪತಿಗಳ ಅಂಕಿತದ ಬಳಿಕ ಈ ಮಸೂದೆಯನ್ನು ಕೇಂದ್ರ ಸರ್ಕಾರ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಬೇಕು ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಹೇಳಿದ್ದಾರೆ.ಮಂಗಳೂರಿನಲ್ಲಿ ಶುಕ್ರವಾರ ಸುದ್ದಿಗಾರರಲ್ಲಿ ಮಾತನಾಡಿದ ಅವರು, ವಕ್ಫ್ ಕಾಯ್ದೆಗೆ ತಿದ್ದುಪಡಿ ಯಾವಾಗಲೋ ಆಗಬೇಕಾಗಿತ್ತು. ಕೊನೆಗೂ ಈಗಿನ ಕೇಂದ್ರ ಸರ್ಕಾರ ಅದನ್ನು ಜಾರಿಗೊಳಿಸುವ ಧೈರ್ಯ ತೋರಿಸಿದ್ದಕ್ಕೆ ಅಭಿನಂದಿಸುತ್ತೇನೆ. ವಕ್ಫ್ ಆಸ್ತಿಗಳ ವಿಚಾರದಲ್ಲಿ ಕಳೆದ 12 ವರ್ಷಗಳಿಂದ ನಾನು ಹೋರಾಟ ಮಾಡುತ್ತಲೇ ಬಂದಿದ್ದೇನೆ. ಈ ಕಾಯ್ದೆ ಸಮರ್ಪಕವಾಗಿ ಕಾರ್ಯರೂಪಕ್ಕೆ ಬಾರದಿದ್ದರೆ ಮತ್ತೆ ಹೋರಾಟ ಮುಂದುವರಿಸುತ್ತೇನೆ. ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಗೊಳಿಸಲು ಧೈರ್ಯ ತೋರಿಸಿದ ಕೇಂದ್ರ ಸರ್ಕಾರಕ್ಕೆ ಅಭಾರಿಯಾಗಿದ್ದೇನೆ ಎಂದರು.
ಸುಪ್ರೀಂಗೆ ಹೋದರೂ ಕಿಮ್ಮತ್ತಿಲ್ಲ:ವಕ್ಫ್ ತಿದ್ದುಪಡಿ ಕಾಯ್ದೆ ವಿಧೇಯಕ ಪಾಸ್ ಮಾಡುವ ಮೂಲಕ ಕೇಂದ್ರ ಸರ್ಕಾರ ಐತಿಹಾಸಿಕ ತೀರ್ಮಾನ ಕೈಗೊಂಡಿದೆ. ಇದರ ವಿರುದ್ಧ ವಿಪಕ್ಷಗಳು ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ಹೇಳುತ್ತಿವೆ. ಇದರಿಂದ ವಿಪಕ್ಷಗಳಿಗೆ ಏನೂ ಪ್ರಯೋಜನವಾಗದು. ಯಾವುದೇ ಕಾನೂನು ತೊಡಕುಗಳಿಗೆ ಒಳಗಾಗ ರೀತಿಯಲ್ಲಿ ಈ ತಿದ್ದುಪಡಿ ಕಾಯ್ದೆಯನ್ನು ರೂಪಿಸಲಾಗಿದೆ. ತಮ್ಮ ಬೇಳೆ ಬೇಯುವುದಿಲ್ಲ ಎಂದು ಅರಿತ ವಿಪಕ್ಷಗಳ ಮುಖಂಡರು ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಮಾತನ್ನಾಡುತ್ತಿದ್ದಾರೆ. ಅದರಿಂದ ಅವರಿಗೆ ಯಾವುದೇ ಪ್ರಯೋಜನವಾಗದು. ವಕ್ಫ್ ಕುರಿತು ಕೇಂದ್ರ ಸರ್ಕಾರದ ನಿರ್ಧಾರ ಸರಿಯಾಗಿಯೇ ಇದೆ ಎಂದು ಸಮರ್ಥಿಸಿದರು.
ಹಳೆ ಮಸೂದೆಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದ್ದರೂ ಎಕರೆಗಟ್ಟಲೆ ಆಸ್ತಿಯನ್ನು ವಂಚಿಸಲಾಗಿದೆ. ಈ ತಿದ್ದುಪಡಿ ಮಸೂದೆ ಜಾರಿಗೊಂಡ ಬಳಿಕ ಬೇಕಾಬಿಟ್ಟಿ ವಕ್ಫ್ ಆಸ್ತಿಗಳ ಕಬಳಿಕೆಗೆ ಅವಕಾಶ ಸಿಗದು. ಅಲ್ಲದೆ ವಕ್ಫ್ ಕಬಳಿಕೆ ನಡೆಸಿದವರಿಗೂ ತಕ್ಕ ಶಾಸ್ತಿ ಆಗಲಿದೆ. ಇದನ್ನು ಗ್ರಹಿಸಿಯೇ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ವಕ್ಫ್ ತಿದ್ದುಪಡಿ ವಿಧೇಯಕಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿವೆ. ವಾಸ್ತವದಲ್ಲಿ ವಕ್ಫ್ ತಿದ್ದುಪಡಿ ಮುಸ್ಲಿಂ ಸಮುದಾಯಕ್ಕೆ ಪೂರಕವಾಗಿಯೇ ಇದೆ ಎಂದು ಅನ್ವರ್ ಮಾಣಿಪ್ಪಾಡಿ ಸಮರ್ಥಿಸಿಕೊಂಡರು.1998ರ ಸುಪ್ರೀಂ ಕೋರ್ಟ್ ಆದೇಶ ಪ್ರಕಾರ, ಒಮ್ಮೆ ವಕ್ಫ್ ಆಸ್ತಿ ಎಂದಿದ್ದರೆ, ಅದನ್ನು ಮತ್ತೆ ಬದಲಾಯಿಸಲು ಸಾಧ್ಯವಿಲ್ಲ ಎಂದಿದೆ. ಹೀಗಾಗಿ ಈ ತಿದ್ದುಪಡಿ ಕಾಯ್ದೆಯಿಂದಾಗಿ ವಕ್ಫ್ ಆಸ್ತಿಗಳು ಉಳಿದುಕೊಳ್ಳಲಿವೆ. 1913ರಲ್ಲಿ ದೇಶದಲ್ಲಿ 1.80 ಲಕ್ಷ ಇದ್ದ ವಕ್ಫ್ ಆಸ್ತಿ, 2013ರ ವೇಳೆಗೆ 1.8 ಲಕ್ಷಕ್ಕೆ ಇಳಿಕೆಯಾಗಿದೆ. ಅಷ್ಟೂ ವಕ್ಫ್ ಆಸ್ತಿಗಳು ಒತ್ತುವರಿ ಯಾ ಕಬಳಿಗೆಗೆ ತುತ್ತಾಗಿವೆ. ಇನ್ನೂ ಕೆಲವು ಕಡೆ ಹಿಂದುಗಳಿಗೆ ಸೇರಿದ ಜಾಗಗಳನ್ನು ವಕ್ಫ್ ಹೆಸರಿನಲ್ಲಿ ಒತ್ತುವರಿ ಮಾಡಿದ ಬಗ್ಗೆ ಆರೋಪಗಳು ಇದೆ. ಇವುಗಳನ್ನು ಸರಿಪಡಿಸಬೇಕಾದರೆ ವಕ್ಫ್ ತಿದ್ದುಪಡಿ ಕಾಯ್ದೆ ಕಾರ್ಯರೂಪಕ್ಕೆ ಬರಲೇ ಬೇಕು. ಆಗ ಮಾತ್ರ ಎಲ್ಲ ಸಮಸ್ಯೆಗಳಿಗೆ ಉತ್ತರ ಸಿಗುತ್ತದೆ. ವಕ್ಫ್ ಆಸ್ತಿಗಳನ್ನು ರಕ್ಷಿಸುವ ದಿಶೆಯಲ್ಲಿ ಕೇಂದ್ರ ಸರ್ಕಾರ ಕೈಗೊಂಡ ದಿಟ್ಟ ಕ್ರಮವನ್ನು ಎಲ್ಲವೂ ಬೆಂಬಲಿಸಬೇಕಾಗಿದೆ. ಈಗಾಗಲೇ ಪ್ರಜ್ಞಾವಂತ ಮುಸ್ಲಿಂ ಸಮುದಾಯ ಇದನ್ನು ಬೆಂಬಲಿಸಿದೆ ಎಂದರು.
ಖರ್ಗೆ ಮತ್ತಿತರಿಂದ ವಕ್ಫ್ ಒತ್ತುವರಿ:ಕರ್ನಾಟಕದಲ್ಲಿ ವಕ್ಫ್ ಆಸ್ತಿ ಒತ್ತುವರಿಗೆ ಸಂಬಂಧಿಸಿ 1994ರಲ್ಲಿ ನಾನು ವಿವರವಾದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದೇನೆ. ಅದರಲ್ಲಿನ ಅಂಶವೂ ವಕ್ಫ್ ಕಾಯ್ದೆ ತಿದ್ದುಪಡಿ ವಿಧೇಯಕವನ್ನು ಒಳಗೊಂಡಿದೆ. ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಹಮಾನ್ ಖಾನ್, ಸೂರ್ಯವಂಶಿ, ಖಮರುಲ್ ಇಸ್ಲಾಂ ಮತ್ತಿತರರ ಮೇಲೂ ವಕ್ಫ್ ಆಸ್ತಿ ಒತ್ತುವರಿ ಬಗ್ಗೆ ನನ್ನ ವರದಿಯಲ್ಲಿ ಪ್ರಸ್ತಾಪಿಸಿದ್ದೇನೆ. ಇವರೆಲ್ಲರು ಯಾವುದೇ ರೀತಿಯಲ್ಲೂ ತಪ್ಪಿನಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ನನ್ನ ಬತ್ತಳಿಕೆಯಲ್ಲಿ ಶಕ್ತಿಯುತ ಅಸ್ತ್ರಗಳು ಇವೆ. ಇದಕ್ಕಾಗಿ ಸಿಬಿಐ ತನಿಖೆ ನಡೆದು ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸಬೇಕು ಎಂದು ಅನ್ವರ್ ಮಾಣಿಪ್ಪಾಡಿ ಆಗ್ರಹಿಸಿದರು.
ಅಮಾನತ್ ಬ್ಯಾಂಕ್ ಹಗರಣದಲ್ಲೂ ರಾಜಕಾರಣಿಗಳು ಭಾಗಿಅಮಾನತ್ ಬ್ಯಾಂಕ್ ಅಕ್ರಮಗಳಲ್ಲೂ ರಾಜಕಾರಣಿಗಳು ನೇರ ಭಾಗಿಯಾಗಿರುವ ಬಗ್ಗೆ ನನ್ನಲ್ಲಿ ಸಾಕ್ಷಿಗಳಿವೆ. ಭಾರತೀಯ ರಿಸರ್ವ್ ಬ್ಯಾಂಕ್ ಹಾಗೂ ಸಹಕಾರಿ ಸಂಘಗಳೂ ಸ್ಪಷ್ಟವಾಗಿ ಈ ಬಗ್ಗೆ ಉಲ್ಲೇಖಿಸಿವೆ. ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದು ಅನ್ವರ್ ಮಾಣಿಪ್ಪಾಡಿ ಒತ್ತಾಯಿಸಿದರು.