ಶಿರಸಿ: ಈ ಬಾರಿ ಶಿರಸಿ, ಸಿದ್ದಾಪುರ ತಾಲೂಕಿನ ರೈತರು ಗಂಭೀರ ಸಮಸ್ಯೆಗಳನ್ನು ಎದುರಿಸಿದ್ದಾರೆ. ಈ ಸಮಸ್ಯೆ ಪರಿಹಾರಕ್ಕೆ ಹಾರಿಕೆಯ ಉತ್ತರಗಳನ್ನು ಅಧಿಕಾರಿಗಳಿಂದ ನಿರೀಕ್ಷಿಸುವುದಿಲ್ಲ. ರೈತರ ಬದುಕಿನಲ್ಲಿ ನೆಮ್ಮದಿ ಮೂಡಿಸುವ ಕಾರ್ಯ ಆಗಬೇಕಿದೆ ಎಂದು ಶಾಸಕ ಭೀಮಣ್ಣ ನಾಯ್ಕ ಸೂಚಿಸಿದರು.
ಮಂಗಳವಾರ ನಗರದ ಮಿನಿ ವಿಧಾನಸೌಧದಲ್ಲಿ ಆಯೋಜಿಸಿದ್ದ ಎಲೆಚುಕ್ಕಿ ರೋಗದ ನಿಯಂತ್ರಣ ಕುರಿತು ಮತ್ತು ಬೆಳೆ ಸಮೀಕ್ಷೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.ಕಳೆದ ಮೂರು ವರ್ಷಗಳಿಂದ ಸೆಪ್ಟೆಂಬರ್ ತಿಂಗಳಿನಿಂದ ಎಲೆಚುಕ್ಕಿ ರೋಗದ ಸಮಸ್ಯೆ ಶಿರಸಿ ಮತ್ತು ಸಿದ್ದಾಪುರ ತಾಲೂಕಿನಲ್ಲಿ ರೈತರನ್ನು ಕಾಡುತ್ತಿದೆ. ಕಳೆದ ವರ್ಷ ಎಲ್ಲಿಲ್ಲಿಯೋ ಕಂಪನಿಗಳು ಇಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿದ್ದಾರೆ. ಎಲೆ ಚುಕ್ಕಿ ರೋಗದಿಂದ ಕಂಗಾಲಾದ ಅಡಕೆ ಬೆಳೆಗಾರರು ಸಾವಿರಾರು ರು. ಖರ್ಚು ಮಾಡಿ ಈ ಔಷಧ ಸಿಂಪಡಿಸಿದ್ದರೂ ನಿಯಂತ್ರಣಕ್ಕೆ ಬಂದಿಲ್ಲ. ರೈತರು ಇನ್ನಷ್ಟು ಹಾನಿ ಎದುರಿಸುವ ಮೊದಲು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಜಾಗೃತಗೊಳ್ಳಬೇಕಿದೆ. ಎಲೆಚುಕ್ಕಿ ರೋಗದ ಔಷಧ ಉತ್ಪಾದಕರು ಜಿಲ್ಲೆಗೆ ಬಂದು ರೋಗದ ಕುರಿತು ಸಮೀಕ್ಷೆ ನಡೆಸಿದ್ದಾರೆಯೇ? ರೋಗ ಯಾವ ರೀತಿಯದ್ದು ಎಂದು ಪರೀಕ್ಷೆ ಮಾಡಿದ್ದಾರೆಯೇ ಎಂಬುದನ್ನು ಅಧಿಕಾರಿಗಳು ಮೊದಲು ಗಮನಿಸಬೇಕು. ವಿಜ್ಞಾನಿಗಳು ತೋಟಕ್ಕೆ ಬರದೇ ಔಷಧ ನೀಡಿದರೆ ಸಮಸ್ಯೆ ನಿವಾರಣೆ ಆಗುವುದಿಲ್ಲ ಎಂದರು.
ಎಲೆಚುಕ್ಕಿಯಿಂದ ಮತ್ತು ಕೊಳೆ ರೋಗದಿಂದ ಕಂಗಾಲಾದ ರೈತರು ಪರಿಹಾರಕ್ಕೆ ಆಗ್ರಹಿಸುತ್ತಿದ್ದಾರೆ. ಮುಂದಿನ ಬದುಕಿಗೆ ಪರಿಹಾರಕ್ಕೆ ಅವರು ಆಗ್ರಹಿಸುವುದು ಸಹಜ. ಆದರೆ, ಅಧಿಕಾರಿಗಳು ಬೆಳೆಹಾನಿ, ಎಲೆಚುಕ್ಕಿ ರೋಗ ಹೆಚ್ಚುತ್ತಿರುವ ವರದಿ ಕೇವಲ ಕಾಗದಪತ್ರಗಳಿಗೆ ಮಾತ್ರ ಸೀಮಿತವಾಗಬಾರದು. ಸ್ಥಳಕ್ಕೆ ತೆರಳಿದ ವೇಳೆ ರೈತರಿಗೂ ಸೂಕ್ತ ಔಷಧೋಪಚಾರದ ಮಾಹಿತಿ ನೀಡಬೇಕು. ಕಳೆದ ವರ್ಷಗಳಲ್ಲಿ ನೀಡಿದ ಔಷಧದಿಂದ ಪರಿಣಾಮ ಎಷ್ಟರ ಮಟ್ಟಿಗೆ ಆಗಿದೆ ಎಂಬುದನ್ನೂ ಗಮನಿಸಬೇಕು. ಅಡಕೆ ಬೆಳೆಗಾರರಿಗೆ ಲಭಿಸುವುದು ವರ್ಷಕ್ಕೆ ಒಂದು ಬೆಳೆ ಮಾತ್ರ. ಅದೂ ಹಾನಿಯಾದರೆ ರೈತರ ಸ್ಥಿತಿ ಗಂಭೀರವಾಗಲಿದೆ. ಅಧಿಕಾರಿಗಳು ಬೇಜವಾಬ್ದಾರಿ ಉತ್ತರ ನೀಡಿದರೆ ನೇರವಾಗಿ ರೈತರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದರು.ಕೃಷಿ ಅಧಿಕಾರಿಗಳು ಮಾಹಿತಿ ನೀಡಿ, ಆ್ಯಪ್ ಮೂಲಕ ಹಾಗೂ ಗ್ರಾಮಲೆಕ್ಕಿಗರ ಮೂಲಕ ಬೆಳೆ ಸಮೀಕ್ಷೆ ನಡೆಸಲಾಗುತ್ತಿದೆ. ಸುಮಾರು ೨ ಸಾವಿರ ರೈತರು ಸ್ವತಃ ಸಮೀಕ್ಷೆ ಮಾಡಿಕೊಂಡಿದ್ದಾರೆ. ಇದುವರೆಗೆ ಶೇ. ೪೬ರಷ್ಟು ಬೆಳೆ ಸಮೀಕ್ಷೆ ಮಾಡಲಾಗಿದೆ ಎಂದರು.
ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸತೀಶ ಹೆಗಡೆ ಮಾತನಾಡಿ, ಶಿರಸಿ ತಾಲೂಕಿನಲ್ಲಿ ೫೦೭೮ ಹೆಕ್ಟೇರ್ ಪ್ರದೇಶಕ್ಕೆ ಕೊಳೆರೋಗ ಬಂದಿದೆ. ಶೇ. ೩೩ಕ್ಕಿಂತ ಹೆಚ್ಚು ಹಾನಿಯಾಗಿದೆ ಎಂದರು.ಈ ಕುರಿತು ಮಾತನಾಡಿದ ಭೀಮಣ್ಣ ನಾಯ್ಕ, ಅಡಕೆ ಬೆಳೆ ಇರುವ ಕ್ಷೇತ್ರಕ್ಕಿಂತ ಸಮೀಕ್ಷೆಯಲ್ಲಿ ಕಡಿಮೆ ದಾಖಲಿಸಲಾಗಿದೆ ಎಂಬ ದೂರುಗಳು ಬರುತ್ತಿವೆ. ತಾಲೂಕಿನ ಅಡಕೆಯ ತೋಟಗಳಲ್ಲಿ ಕಾಳುಮೆಣಸು, ಏಲಕ್ಕಿ, ಬಾಳೆಯನ್ನೂ ಬೆಳೆಯುತ್ತಿರುವುದರಿಂದ ಈ ಮೂರು ಬೆಳೆ ನೋಂದಣಿ ಮಾಡಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಕೆ.ವಿ. ಕಾವ್ಯಾರಾಣಿ, ತಹಸೀಲ್ದಾರ್ ಶ್ರೀಧರ ಮುಂದಲಮನಿ ಮತ್ತಿತರರು ಇದ್ದರು.